ಡಿಸೆಂಬರ್ 11ಕ್ಕೆ ‘ಹುಬ್ಬಳ್ಳಿ ಹಂಟರ್ಸ್’ ರಿಲೀಸ್; ಚಿತ್ರಕ್ಕೆ ಜಯಣ್ಣ ಸಾಥ್!

ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯಲ್ಲಿ ತಯಾರಾಗಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಬರುವ ಡಿಸೆಂಬರ್ 11ರಂದು ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ವಿತರಕ ಜಯಣ್ಣ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಚಿತ್ರತಂಡಕ್ಕೆ ದೊಡ್ಡ ಬಲ ತಂದಿದೆ.

ವಿತರಕ ಜಯಣ್ಣ ಬಲ, ಹಾಡು ಹಿಟ್ ಇತ್ತೀಚೆಗಷ್ಟೇ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಮೂಲಕ ಬಿಡುಗಡೆಯಾಗಿದ್ದ ಚಿತ್ರದ ಮೊದಲ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಇದರ ಬೆನ್ನಲ್ಲೇ, ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾವನ್ನು ವಿತರಿಸಿ ಯಶಸ್ಸು ಕಂಡಿರುವ ಜಯಣ್ಣ ಫಿಲ್ಮ್ಸ್ ಸಂಸ್ಥೆ ಈ ಚಿತ್ರದ ವಿತರಣೆಗೆ ಕೈಜೋಡಿಸಿದೆ. ಹೀಗಾಗಿ ರಾಜ್ಯದ ಮೂಲೆಮೂಲೆಗೂ ಸಿನಿಮಾ ತಲುಪಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.

ಕಂಟೆಂಟ್ ಕ್ರಿಯೇಟರ್ಸ್ ಹೊಸ ಪ್ರಯೋಗ ‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಭಿನ್ನ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿರುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್ ತಂಡವೊಂದು ಈ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ದೊಡ್ಡ ತಾರಾಗಣ ಮತ್ತು ತಾಂತ್ರಿಕ ಬಳಗ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್ ಅವರಂತಹ ಅನುಭವಿ ಕಲಾವಿದರ ಜೊತೆಗೆ ನಮನ್ ಅರೋರ, ಚೇತನ್ ಮಾರಂಬೀಡ್, ಪವನ್ ಕೃಷ್ಣರಾವ್ ಕುಲಕರ್ಣಿ, ಸುಮಿತ್ ಸಂಕೋಜಿ, ಧನ್ಯಶ್ರೀ ಸುಜಿತ್, ದೀಪಕ್ ರಾವ್, ಶಿವು ಎನ್.ಜಿ., ವನು ಪಾಟೀಲ್, ಪವನ್ ಆನೆಗೇರಿ, ವಿನಯ್ ದೊಡ್ಡಮನಿ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣ ಹಚ್ಚಿದೆ.

ಧಾರವಾಡ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾಗೆ ಪ್ರಸನ್ನ ಕೇಶವ ಕೆ.ಎಸ್. ಸಂಗೀತ ಸಂಯೋಜನೆ ಹಾಗೂ ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ. ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವರ್ ಹಾಗೂ ಚೇತನ್ ಮರಂಬೀದ್ ಸಂಭಾಷಣೆ ಹೆಣೆದಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯಕ್ಕೆ ವೇಗ ನೀಡಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

Leave a Reply

Your email address will not be published. Required fields are marked *