‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ‘ಹೋಗೋಣ ಬಾರಾ ಮೆಕ್ಸಿಕೋ’ ಸಾಂಗ್ ರಿಲೀಸ್; ಭಟ್ಟರ ಸಾಹಿತ್ಯಕ್ಕೆ ಭರ್ಜರಿ ರೆಸ್ಪಾನ್ಸ್!

ಬೆಂಗಳೂರು: ‘ಡಾಲಿ’ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ ಇದೇ ಡಿಸೆಂಬರ್ 24ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರದ ಭರಾಟೆಯನ್ನು ಜೋರಾಗಿಸಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಬಿಡುಗಡೆಯಾಗಿದ್ದ ‘ಪುಟ್ಟಮಲ್ಲಿ’ ಮತ್ತು ‘ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೆ’ ಹಾಡುಗಳು ಹಿಟ್ ಆಗಿವೆ. ಇದೀಗ ಆ ಸಾಲಿಗೆ ಚಿತ್ರದ ಮೂರನೇ ಹಾಡು ‘ಹೋಗೋಣ ಬಾರಾ ಮೆಕ್ಸಿಕೋ’ ಸೇರ್ಪಡೆಯಾಗಿದ್ದು, ನವೆಂಬರ್ 15ರಂದು ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

ಭಟ್ಟರ ಮಜವಾದ ಸಾಹಿತ್ಯಕ್ಕೆ ಮಾಳು ನಿಪನಾಳ್ ಧ್ವನಿ ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರ ಲೇಖನಿಯಲ್ಲಿ ಮೂಡಿಬಂದಿರುವ ಈ ಹಾಡು ತನ್ನ ವಿಶಿಷ್ಟ ಪದಬಳಕೆಯಿಂದ ಗಮನ ಸೆಳೆಯುತ್ತಿದೆ. “ಬಾರಾ ಬೇಬಿ ಬಾರಾ ಬೇಬಿ.. ಪ್ಯಾರು ಮಾಡೋಣು.. ತುಟಿಗೆ ತುಟಿ ತಾಕಿಸೋಣು.. ನೌವ್ನ್ ಆಗಿದ್ದು ಆಗೋಗ್ಲಿ..” ಎಂಬ ಭಟ್ಟರ ಮಜವಾದ ಸಾಲುಗಳಿಗೆ ವಾಸುಕಿ ವೈಭವ್ ಲವಲವಿಕೆಯ ಸಂಗೀತ ನೀಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಗಾಯಕ ಮಾಳು ನಿಪನಾಳ್ ಅವರ ಜೊತೆಗೆ ಮಾಧುರಿ ಶೇಷಾದ್ರಿ ಮತ್ತು ಅಭಿಷೇಕ್ ನಗರ್ಕರ್ ಈ ಹಾಡಿಗೆ ಧ್ವನಿಯಾಗಿದ್ದು, ಹಾಡಿನ ಎನರ್ಜಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಧನಂಜಯ್ – ರೀಷ್ಮಾ ನಾಣಯ್ಯ ಭರ್ಜರಿ ಡ್ಯಾನ್ಸ್ ಈ ಹಾಡಿನಲ್ಲಿ ನಾಯಕ ಡಾಲಿ ಧನಂಜಯ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ಜೋಡಿ ಸಖತ್ ಮೋಡಿ ಮಾಡಿದೆ. ಇಬ್ಬರ ಕೆಮಿಸ್ಟ್ರಿ ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಹಬ್ಬದೂಟ ನೀಡುವಂತಿದ್ದು, ಲಿರಿಕಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಬಡವ ರಾಸ್ಕಲ್’ ಖ್ಯಾತಿಯ ಶಂಕರ್ ಗುರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಕಮರ್ಷಿಯಲ್ ಅಂಶಗಳ ಜೊತೆಗೆ ಮನರಂಜನೆಯ ಪ್ಯಾಕೇಜ್ ನೀಡಲು ಸಜ್ಜಾಗಿದ್ದಾರೆ.

ದೊಡ್ಡ ತಾರಾಗಣ ಮತ್ತು ತಾಂತ್ರಿಕ ಬಳಗ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದಲ್ಲಿ ಧನಂಜಯ್ ಹಾಗೂ ರೀಷ್ಮಾ ನಾಣಯ್ಯ ಜೊತೆಗೆ ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣ ಹಚ್ಚಿದೆ. ನಟ ಲೂಸ್‌ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಐರಾ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ ಹಟ್ಟಿಹೊಳಿ ಮತ್ತು ಮೃಣಾಲ್ ಹಾಗೂ ‘ರಾಯಲ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಹಾಗೂ ನಿರಂಜನ್‌ ದೇವರಮನೆ ಸಂಕಲನ ಚಿತ್ರಕ್ಕಿದ್ದು, ಡಿಸೆಂಬರ್ 24ರಂದು ಸಿನಿಮಾ ಬೆಳ್ಳಿತೆರೆಯ ಮೇಲೆ ಮಿಂಚಲು ಸಿದ್ಧವಾಗಿದೆ.

Leave a Reply

Your email address will not be published. Required fields are marked *