ನವೆಂಬರ್ 20ಕ್ಕೆ ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ರಿಲೀಸ್!

ಬೆಂಗಳೂರು: ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಹೀರೋ ಆಗಿ ನಟಿಸಿರುವ ಹಾರರ್-ಕಾಮಿಡಿ ಸಿನಿಮಾ ‘ಶಂಕರಾಭರಣ’ ಇದೇ ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಶೈನ್ ಶೆಟ್ಟಿ ಕಥೆ ಬರೆದು, ‘ರಂಗಸ್ಥಳ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಅವರೊಂದಿಗೆ ಸೇರಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕನ ಆಕ್ಷನ್ ಕಟ್ ‘ಶಂಕರಾಭರಣ’ ಎಂಬ ಬಸ್ ಮತ್ತು ಅದರ ಸುತ್ತ ನಡೆಯುವ ಘಟನೆಗಳ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ‘ಮಿಥ್ಯ’ ಸಿನಿಮಾ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಕುರಿತು ಮಾತನಾಡಿದ ಸುಮಂತ್ ಭಟ್, “ರಾಜ್ಯ ಮತ್ತು ಹೊರ ರಾಜ್ಯಗಳಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ವಿಭಿನ್ನ ಮಾದರಿಯ ಹಾಸ್ಯವಿದ್ದು, ಟ್ರೈಲರ್‌ನಲ್ಲಿ ತೋರಿಸಿರುವ ಅಂಶಗಳು ಇಡೀ ಸಿನಿಮಾದಲ್ಲಿ ಮನರಂಜನೆ ನೀಡಲಿವೆ” ಎಂದರು.

ಶೈನ್ ಶೆಟ್ಟಿ ಕನಸಿನ ಕೂಸು ಚಿತ್ರದ ಪಯಣದ ಬಗ್ಗೆ ಹಂಚಿಕೊಂಡ ನಟ ಶೈನ್ ಶೆಟ್ಟಿ, “ನಿರ್ದೇಶಕ ಸುಮಂತ್ ಭಟ್ ಅವರೊಂದಿಗೆ ‘ಏಕಂ’ ಕಿರುಚಿತ್ರದಲ್ಲಿ ನಟಿಸಿದ್ದೆ. ಆಗ ಹುಟ್ಟಿದ ಕಥೆಯೇ ಈ ‘ಶಂಕರಾಭರಣ’. ನಿರ್ಮಾಪಕರಿಗಾಗಿ ಎರಡು ವರ್ಷ ದೇಶಾದ್ಯಂತ ಹುಡುಕಾಟ ನಡೆಸಿದ್ದೆ, ಕೊನೆಗೆ ಮನೆಯಲ್ಲೇ ದಿವಾಕರ್ ಶೆಟ್ಟಿ ಸಿಕ್ಕರು. ನಿರ್ಮಾಪಕರು ಸಿಗುವ ಮೊದಲೇ ಕಥೆ ಕೇಳಿ ಸಂಗೀತ ನೀಡಲು ಒಪ್ಪಿಕೊಂಡವರು ಸಂಗೀತ ನಿರ್ದೇಶಕ ಚರಣ್ ರಾಜ್. ಇನ್ನು ಚೀನಾ ಸಿನಿಮಾ ಉತ್ಸವಕ್ಕೆ ನಮ್ಮ ಸಿನಿಮಾ ಆಯ್ಕೆಯಾಗಿತ್ತು. ಅಲ್ಲಿನ ಪ್ರೇಕ್ಷಕರು ಕನ್ನಡದಲ್ಲೇ ಸಿನಿಮಾ ನೋಡಿ ಭಾವುಕರಾಗಿದ್ದು ನಮಗೆ ತುಂಬಾ ಖುಷಿ ಕೊಟ್ಟಿತು” ಎಂದು ಸಂತಸ ವ್ಯಕ್ತಪಡಿಸಿದರು.

ಸಂಪತ್ ರಾಜ್ ಮೆಚ್ಚುಗೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟ ಸಂಪತ್ ರಾಜ್ ಮಾತನಾಡಿ, “ಶೈನ್ ಮತ್ತು ಸುಮಂತ್ ಬಂದು 18 ನಿಮಿಷಗಳ ಕಾಲ ಸಿನಿಮಾದ ಸಾರಾಂಶ ಮತ್ತು ನನ್ನ ಪಾತ್ರದ ಶೈಲಿಯನ್ನು ವಿವರಿಸಿದ್ದರು. ಪಾತ್ರ ಚೆನ್ನಾಗಿ ಮೂಡಿಬಂದಿದ್ದರಿಂದ ತಕ್ಷಣ ಒಪ್ಪಿಕೊಂಡೆ. ಜನರ ಮನಸ್ಸಿಗೆ ಹತ್ತಿರವಾಗುವ ಇಂತಹ ಸಿನಿಮಾಗಳು ಖಂಡಿತಾ ಗೆಲ್ಲುತ್ತವೆ. ಚಿತ್ರದ ಹಾಡುಗಳನ್ನು ನನ್ನ ತೆಲುಗು ಮತ್ತು ತಮಿಳು ಸ್ನೇಹಿತರಿಗೂ ಕಳುಹಿಸುತ್ತಿದ್ದೇನೆ” ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ಮಾಪಕ ದಿವಾಕರ್ ಶೆಟ್ಟಿ ಮಾತನಾಡಿ, ಚಿತ್ರದಲ್ಲಿ ಕೆಲಸ ಮಾಡಿದ ತಂಡದ ಪ್ರತಿಭೆಯನ್ನು ಶ್ಲಾಘಿಸಿದರು. ಚಿತ್ರದಲ್ಲಿ ಕೃತಿ ಶೆಟ್ಟಿ, ಅನಿಲ್ ಕುಮಾರ್ ಚೌಹಾಣ್, ಅರ್ಜುನ್ ಕಜೆ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣ ಹಚ್ಚಿದೆ.

Leave a Reply

Your email address will not be published. Required fields are marked *