
ಬೆಂಗಳೂರು: ‘ಶಾಖಾಹಾರಿ’ ಖ್ಯಾತಿಯ ನಿರ್ದೇಶಕ ಸಂದೀಪ್ ಸುಂಕದ್ ಆ್ಯಕ್ಷನ್-ಕಟ್ ಹೇಳಿರುವ, ಧೀರೇನ್ ರಾಮ್ಕುಮಾರ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಿಸಿರುವ ಈ ಸಿನಿಮಾದ ‘ಲಾಲಿ ಹಾಡು ಮಮತೆ ಜಾಡು ತವರ ಗೂಡಲಿ ಸೇರಾಯ್ತು’ ಎಂಬ ವಿಶೇಷ ಗೀತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ‘ಭಾಗ್ಯದ ಬಳೆಗಾರ’ನಾಗಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ. ಅನುರಾಗ್ ಕುಲಕರ್ಣಿ ಮತ್ತು ಮೇಘನಾ ಹಳಿಯಾಳ್ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜಿಸಿದ್ದಾರೆ.
ಸಹಜ ಸಿನಿಮಾದ ಬಗ್ಗೆ ಶಿವಣ್ಣ ಮೆಚ್ಚುಗೆ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ಕುಮಾರ್, “ಸಿನಿಮಾ ಮೇಕಿಂಗ್ನಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಗೀತಾ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ‘ಪಬ್ಬಾರ್’ ಕಥೆ ತುಂಬಾ ಸೂಕ್ಷ್ಮವಾಗಿದ್ದು, ಇಂದಿನ ಅತಿಯಾದ ಗ್ಲಾಮರ್ ನಡುವೆ ಇಂತಹ ಸಹಜ ಸಿನಿಮಾ ಮಾಡಿರುವುದು ಖುಷಿ ತಂದಿದೆ. ಧೀರೇನ್ ಮತ್ತು ಅಮೃತಾ ಪ್ರೇಮ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಿರ್ದೇಶಕ ಸಂದೀಪ್ ಅವರೇ ಬಂದು ಕೇಳಿದಾಗ ತುಂಬಾ ಖುಷಿಯಿಂದ ‘ಬಳೆಗಾರ’ ಹಾಡಿನಲ್ಲಿ ನಟಿಸಲು ಒಪ್ಪಿಕೊಂಡೆ. ಡಿಸೆಂಬರ್ 11ರಂದು ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರಿಗೆ ಒಂದೊಳ್ಳೆಯ ಅನುಭವ ನೀಡಲಿದೆ” ಎಂದು ಹಾರೈಸಿದರು.

ತಂಡದ ಪರಿಶ್ರಮ ಶ್ಲಾಘಿಸಿದ ಗೀತಾ ಶಿವರಾಜ್ಕುಮಾರ್ ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಮಾತನಾಡಿ, “ಈ ಹಾಡು ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಸಂದೀಪ್ ಮತ್ತು ಧೀರೇನ್ ಹೇಳಿದ ಕಥೆ ತುಂಬಾ ಇಷ್ಟವಾಗಿ ನಿರ್ಮಿಸಲು ಮುಂದಾದೆವು. ಉತ್ತರ ಭಾರತದ ಸೊನ್ನೆ ಡಿಗ್ರಿ ಕೊರೆಯುವ ಚಳಿಯಲ್ಲಿ ಧೀರೇನ್, ಅಮೃತಾ ಸೇರಿದಂತೆ ಇಡೀ ತಂತ್ರಜ್ಞರ ಮತ್ತು ಪ್ರೊಡಕ್ಷನ್ ತಂಡದ ಶ್ರಮ ಅಪಾರವಾಗಿದೆ” ಎಂದರು.
ಪಾತ್ರಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡ ಧೀರೇನ್ ತಮ್ಮ ಪಯಣದ ಬಗ್ಗೆ ಭಾವುಕರಾಗಿ ಹಂಚಿಕೊಂಡ ನಾಯಕ ಧೀರೇನ್, “ನನ್ನ ದೊಡ್ಡ ಮಾಮ ಶಿವಣ್ಣ ಮತ್ತು ಗೀತಾ ಆಂಟಿ ನನ್ನ ಪಾಲಿಗೆ ತಾತಾ-ಅಜ್ಜಿಯವರ ಸ್ಥಾನದಲ್ಲಿದ್ದಾರೆ. ಅವಕಾಶಗಳಿಗಾಗಿ ಅಲೆದಾಡುತ್ತಿದ್ದ ನನಗೆ ಅಜ್ಜಿಯ ಹುಟ್ಟುಹಬ್ಬದಂದೇ ಈ ಸಿನಿಮಾ ಘೋಷಿಸಿ ಕನಸನ್ನು ನನಸು ಮಾಡಿದರು. ಕುಟುಂಬದ ದೊಡ್ಡ ಹೆಸರಿನ ಆಚೆಗೆ ನನ್ನದೇ ಅಸ್ತಿತ್ವ ಹುಡುಕಿಕೊಳ್ಳುವ ಸೂಕ್ಷ್ಮ ಪಾತ್ರ ಇದಾಗಿದ್ದು, ಇದಕ್ಕಾಗಿ 75 ಕೆಜಿಯಿಂದ 63 ಕೆಜಿಗೆ ತೂಕ ಇಳಿಸಿಕೊಂಡೆ. ಹಿಮಾಚಲ ಪ್ರದೇಶದ ಕಿನ್ನೌರ್ನ ಕೊರೆಯುವ ಚಳಿಯಿಂದ ಹಿಡಿದು 45 ಡಿಗ್ರಿ ಬಿಸಿಲಿನ ವಾರಣಾಸಿ, ಜೈಪುರ ಹಾಗೂ ಕೂರ್ಗ್, ಮೈಸೂರು, ಕಾಸರಗೋಡಿನವರೆಗೆ ಒಂದೂವರೆ ವರ್ಷಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ” ಎಂದು ವಿವರಿಸಿದರು.

ಶಿವಣ್ಣ ಜೊತೆ ತೆರೆ ಹಂಚಿಕೊಂಡ ಸಂಭ್ರಮದಲ್ಲಿ ಅಮೃತಾ ನಾಯಕಿ ಅಮೃತಾ ಪ್ರೇಮ್ ಮಾತನಾಡಿ, “ಶಾಲಾ ವಾರ್ಷಿಕೋತ್ಸವದಲ್ಲಿ ‘ಭಾಗ್ಯದ ಬಳೆಗಾರ’ ಹಾಡಿಗೆ ನೃತ್ಯ ಮಾಡಿದ್ದೆ. ಈಗ ಅಂತಹದ್ದೇ ಹಾಡಿನಲ್ಲಿ ಸ್ವತಃ ಶಿವಣ್ಣ ಸರ್ ಜೊತೆ ತೆರೆ ಹಂಚಿಕೊಂಡಿರುವುದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣ. ಆರಂಭದಲ್ಲಿ ಅವರ ಎನರ್ಜಿಗೆ ತಕ್ಕಂತೆ ನಟಿಸುವ ಭಯವಿತ್ತು, ಆದರೆ ಅವರು ನನ್ನನ್ನು ತುಂಬಾ ಆರಾಮದಾಯಕವಾಗಿ ಇರುವಂತೆ ನೋಡಿಕೊಂಡರು” ಎಂದು ಧನ್ಯವಾದ ಅರ್ಪಿಸಿದರು.
165 ಲೊಕೇಶನ್ಗಳಲ್ಲಿ ‘ಪಬ್ಬಾರ್’ ಚಿತ್ರೀಕರಣ ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, “ಶಾಖಾಹಾರಿ ಸಿನಿಮಾವನ್ನು ಕೇವಲ ಒಂದು ಊರಿನ 10 ಲೊಕೇಶನ್ಗಳಲ್ಲಿ ಚಿತ್ರೀಕರಿಸಿದ್ದೆವು. ಆದರೆ ‘ಪಬ್ಬಾರ್’ ಕಥೆಯ ವಿಸ್ತಾರ ದೊಡ್ಡದಿರುವುದರಿಂದ 14 ಜಿಲ್ಲೆಗಳ ಸುಮಾರು 165 ಲೊಕೇಶನ್ಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಶಿವಣ್ಣ ಅವರ ‘ಬಳೆಗಾರ’ ಹಾಡು ಕಥೆಗೆ ಹೊಸ ತಿರುವು ನೀಡುವ ಘಟ್ಟದಲ್ಲಿ ಬರುತ್ತದೆ. ‘ಶಾಖಾಹಾರಿ’ಯನ್ನು ಒಟಿಟಿಯಲ್ಲಿ ಕೋಟ್ಯಂತರ ಜನ ಮೆಚ್ಚಿಕೊಂಡಿದ್ದರೂ ಥಿಯೇಟರ್ನಲ್ಲಿ ಹೆಚ್ಚಿನ ಜನರಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಆ ಕೊರಗನ್ನು ನೀಗಿಸಲು ದೊಡ್ಡ ಪರದೆಯ ಅನುಭವಕ್ಕಾಗಿಯೇ ‘ಪಬ್ಬಾರ್’ ಸಿದ್ಧಪಡಿಸಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಹರಸಬೇಕು” ಎಂದು ಮನವಿ ಮಾಡಿದರು.