
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕುತೂಹಲಕಾರಿ ಕಾಂಬಿನೇಷನ್ ರೂಪುಗೊಳ್ಳುವ ಸುಳಿವು ಸಿಕ್ಕಿದೆ, ಡಾ. ರಾಜ್‌ಕುಮಾರ್ ಕುಟುಂಬದ ಭರವಸೆಯ ಸ್ಟಾರ್ ನಟ ಯುವ ರಾಜ್‌ಕುಮಾರ್ ಹಾಗೂ ಪ್ರತಿಭಾವಂತ ಬರಹಗಾರ-ನಿರ್ದೇಶಕ ಜಡೆಶಾ ಕೆ. ಹಂಪಿ ಒಂದಾಗುವ ಸಾಧ್ಯತೆ ಇದೀಗ ಗಾಂಧಿನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
‘ಯುವ’ ಚಿತ್ರದ ಆಕ್ಷನ್ ದೃಶ್ಯಗಳ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ಯುವ ರಾಜ್‌ಕುಮಾರ್, ನಂತರ ‘ಎಕ್ಕ’ ಮೂಲಕ ತಮ್ಮದೇ ಆದ ಛಾಪನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಈಗ ಅವರು ಮುಂದಿನ ಸಿನಿಮಾ ಆಯ್ಕೆಯಲ್ಲಿ ಕೂಡ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನುವುದು ಚಿತ್ರರಂಗದ ಮಾತು. ಇದೇ ವೇಳೆ, ಕಥೆ ಮತ್ತು ದೇಸಿ ಪಾತ್ರಗಳಿಗೆ ವಿಶೇಷ ಮಹತ್ವ ನೀಡುವ ನಿರ್ದೇಶಕ ಜಡೆಶಾ ಕೆ. ಹಂಪಿ ಜೊತೆ ಅವರ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.
ಜಡೆಶಾ ಕೆ. ಹಂಪಿ ಎಂದರೆ ಕೇವಲ ನಿರ್ದೇಶಕ ಮಾತ್ರವಲ್ಲ; ಕನ್ನಡ ಚಿತ್ರರಂಗದ ಬಲಿಷ್ಠ ಕಥೆಗಾರರಲ್ಲೊಬ್ಬರು. ‘ಕಾಟೇರ’ ಚಿತ್ರದ ಬರಹದ ಮೂಲಕ ದೊಡ್ಡ ಮಟ್ಟದ ಗಮನ ಸೆಳೆದ ಅವರು, ಗ್ರಾಮೀಣ ನೆಲೆಯ ಕಥೆಗಳು, ಭಾವನಾತ್ಮಕ ಸಂಘರ್ಷಗಳು ಮತ್ತು ಗಟ್ಟಿಯಾದ ಪಾತ್ರಗಳ ಮೂಲಕ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ‘ಜೆಂಟಲ್ಮನ್’, ‘ಗುರು ಶಿಷ್ಯರು’ ಹಾಗೂ ‘ಲ್ಯಾಂಡ್‌ಲಾರ್ಡ್’ ಸಿನಿಮಾಗಳಲ್ಲೂ ಅವರ ಕಥೆ ಹೇಳುವ ಶೈಲಿ ವಿಭಿನ್ನವಾಗಿ ಕಾಣಿಸಿಕೊಂಡಿದೆ.
ಯುವ ರಾಜ್‌ಕುಮಾರ್ ಅವರಲ್ಲಿ ಈಗಿರೋ ಯೌವನದ ಎನರ್ಜಿ ಮತ್ತು ಜಡೆಶಾ ಅವರ ಕಥನ ಶಕ್ತಿ ಒಂದಾದರೆ, ಕನ್ನಡ ಸಿನಿರಂಗಕ್ಕೆ ಮತ್ತೊಂದು ವಿಭಿನ್ನ ಸಿನಿಮಾ ಸಿಗುವ ಸಾಧ್ಯತೆಯನ್ನು ಸಿನಿ ವಲಯ ನಿರೀಕ್ಷಿಸುತ್ತಿದೆ. ವಿಶೇಷವಾಗಿ ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರನ್ನು ಒಂದೇ ವೇದಿಕೆಯಲ್ಲಿ ಸೆಳೆಯಬಲ್ಲ ಕಥೆ ಜಡೆಶಾ ಅವರ ಬಳಿ ಇರಬಹುದು ಎಂಬ ಊಹಾಪೋಹಗಳು ಈಗಾಗಲೇ ಆರಂಭವಾಗಿವೆ.
ಸದ್ಯಕ್ಕೆ ಈ ಯೋಜನೆ ಕುರಿತು ಅಧಿಕೃತ ಘೋಷಣೆ ಬಂದಿಲ್ಲ. ಆದರೆ ಇಬ್ಬರ ನಡುವೆ ಕಥೆ ಕುರಿತ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವಾದರೆ, ಯುವ ರಾಜ್‌ಕುಮಾರ್ ಅವರ ವೃತ್ತಿಜೀವನದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆ ಇದೆ.
ಗಾಂಧಿನಗರದಲ್ಲಿ ಈಗ ಕೇಳಿಬರುತ್ತಿರುವ ಪ್ರಶ್ನೆ ಒಂದೇ…
“ಯುವ’ನ ಮುಂದಿನ ಓಟಕ್ಕೆ ಜಡೆಶಾ ಕೆ. ಹಂಪಿಯೇ ಸಾರಥಿಯಾಗಲಿದ್ದಾರಾ?”
ಅಧಿಕೃತ ಘೋಷಣೆಯವರೆಗೆ ಕಾದು ನೋಡಬೇಕಿದೆ. ಆದರೆ ಈ ಕಾಂಬಿನೇಷನ್ ಮಾತ್ರ ಈಗಾಗಲೇ ಸಿನಿಪ್ರಿಯರ ಕಲ್ಪನೆಗೆ ರೆಕ್ಕೆ ಕಟ್ಟಿದೆ!