‘ಕಾಂತಾರ’ ಸ್ಪೂರ್ತಿಯಿಂದ ಹುಟ್ಟಿದ ‘ಕರುಪ್ಪು’ ಕ್ಲೈಮ್ಯಾಕ್ಸ್ – ಕನ್ನಡ ಸಿನಿಮಾಗಳ ಪ್ರಭಾವಕ್ಕೆ ತಮಿಳು ನಿರ್ದೇಶಕರ ಸಲಾಂ!

ಇಂದು ಭಾರತೀಯ ಸಿನಿಮಾರಂಗದಲ್ಲಿ ಕನ್ನಡ ಸಿನಿಮಾಗಳ ಕ್ರೇಜ್ ಎಷ್ಟರ ಮಟ್ಟಿಗೆ ಏರಿದೆ ಅನ್ನೋದಕ್ಕೆ ಮತ್ತೊಂದು ದೊಡ್ಡ ಉದಾಹರಣೆ ಸಿಕ್ಕಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ Karuppu ನಿರ್ದೇಶಕ ಹಾಗೂ ನಟ ಆರ್‌ಜೆ ಬಾಲಾಜಿ, ತಮ್ಮ ಚಿತ್ರದ ಕ್ಲೈಮ್ಯಾಕ್ಸ್ ಐಡಿಯಾಗೆ ನೇರ ಸ್ಪೂರ್ತಿ ಕನ್ನಡದ ಕಾಂತಾರ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳಿಂದ ಬಂದಿದೆ ಎಂದು ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಬಾಲಾಜಿ, “ಒಂದು ದಿನ ಬೆಳಿಗ್ಗೆ 9 ಗಂಟೆಯ ಶೋಗೆ ನಾವು Kantara ನೋಡಲು ಹೋಗಿದ್ದೆವು. ಚಿತ್ರದ ಒಂದು 10 ನಿಮಿಷದ ಸೀಕ್ವೆನ್ಸ್ ಬಂದಾಗ ಸಂಪೂರ್ಣ ಥಿಯೇಟರ್ ಮೌನವಾಗಿತ್ತು. ಆ ಎನರ್ಜಿ, ಆ ಭಾವನೆ, ಆ ಡಿವೈನ್ ಅನುಭವ ನನ್ನನ್ನು ಆಳವಾಗಿ ತಟ್ಟಿತು,” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, “ಅದೇ ಕ್ಷಣದಲ್ಲಿ ನಮ್ಮ ಚಿತ್ರದ ಕ್ಲೈಮ್ಯಾಕ್ಸ್ ಐಡಿಯಾ ನನಗೆ ಹೊಳೆಯಿತು. Kantara ಮಾತ್ರವಲ್ಲ, Sapta Sagaradaache Ello ಚಿತ್ರದ ಕೆಲವು ಭಾವನಾತ್ಮಕ ಸೀಕ್ವೆನ್ಸ್‌ಗಳೂ ನನ್ನ ಮೇಲೆ ದೊಡ್ಡ ಪ್ರಭಾವ ಬೀರಿವೆ,” ಎಂದು ಮನಬಿಚ್ಚಿ ಒಪ್ಪಿಕೊಂಡಿದ್ದಾರೆ.

ಇನ್ನೂ ವಿಶೇಷ ಅಂದ್ರೆ, ಬಾಲಾಜಿ ಆ ಸಿನಿಮಾಗಳ ತಂಡವನ್ನೇ ಸಂಪರ್ಕಿಸಿ, “ನಿಮ್ಮ ಕೆಲಸದಿಂದ ನನಗೆ ಸ್ಪೂರ್ತಿ ಸಿಕ್ಕಿದೆ. ಆ ಭಾವನೆಗಳನ್ನು ನನ್ನ ಚಿತ್ರದಲ್ಲೂ ಬಳಸಬೇಕೆಂದಿದ್ದೇನೆ,” ಎಂದು ಹೇಳಿದ್ದಾರಂತೆ. ಅದಕ್ಕೆ ಕನ್ನಡ ಚಿತ್ರದ ತಂಡಗಳು ತುಂಬಾ ವಿನಯದಿಂದ ಪ್ರತಿಕ್ರಿಯೆ ನೀಡಿದ್ದಾರಂತೆ.

ಒಮ್ಮೆ ರೀಮೇಕ್‌ಗಳಿಗೆ ಸೀಮಿತವಾಗಿದ್ದ ದಕ್ಷಿಣ ಸಿನೆಮಾ ಜಗತ್ತು, ಇಂದು ಕನ್ನಡ ಸಿನಿಮಾಗಳ ಕಥನಶೈಲಿ, ಭಾವನಾತ್ಮಕ ಆಳ ಮತ್ತು ಮಾಸ್ ಪ್ರೆಸೆಂಟೇಶನ್‌ಗೆ ಮಾರು ಹೋಗುತ್ತಿದೆ. Kantara ತಂದ ಆ ನೆಟಿವಿಟಿ ಮತ್ತು ಆತ್ಮೀಯತೆ, Sapta Sagaradaache Ello ಮೂಡಿಸಿದ ಭಾವನಾತ್ಮಕ ತೀವ್ರತೆ – ಇವೆರಡೂ ಈಗ ಬೇರೆ ಭಾಷೆಗಳ ನಿರ್ದೇಶಕರಿಗೂ ಪಾಠವಾಗಿವೆ.

ಇಂದು ತಮಿಳುನಾಡಿನಲ್ಲಿ ಗೆಲುವಿನ ಧ್ವಜ ಹಾರಿಸುತ್ತಿರುವ Karuppu ಸಿನಿಮಾದ ಯಶಸ್ಸಿನ ಹಿಂದೆ ಕನ್ನಡ ಸಿನಿಮಾಗಳ ಸ್ಫೂರ್ತಿ ಇದೆ ಅನ್ನೋದು ಪ್ರತಿಯೊಬ್ಬ ಕನ್ನಡ ಸಿನಿ ಪ್ರೇಮಿಗೂ ಹೆಮ್ಮೆಯ ವಿಷಯವೇ ಸರಿ

Leave a Reply

Your email address will not be published. Required fields are marked *