ಬೇಲ್ ಫಸ್ಟ್ ಲುಕ್ ರಿಲೀಸ್: ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಶಿವಣ್ಣ ಮಾಸ್ ಎಂಟ್ರಿ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ ‘ಬೇಲ್’ ಇದೀಗ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ. ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾದ ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ.

ಫಸ್ಟ್ ಲುಕ್‌ನಲ್ಲಿ ಶಿವಣ್ಣ ಸಂಪೂರ್ಣ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್, ಕೈಯಲ್ಲಿ ಕೊಡೆ ಹಾಗೂ ಜೊತೆಯಲ್ಲಿ ಸಾಕು ನಾಯಿಯೊಂದಿಗೆ ಸ್ಟೈಲಿಷ್ ವಾಕ್ ಮಾಡುತ್ತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾದಲ್ಲಿ ಶಿವಣ್ಣ ‘ವಿಜಿ’ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಟೀಸರ್‌ನಲ್ಲಿ ಮಳೆಗಾಲದ ಬೆಂಗಳೂರು ಹಿನ್ನೆಲೆ, ನಾಯಿಗೆ ಬಿಸ್ಕೆಟ್ ತಿನ್ನಿಸುತ್ತಾ ಕಾಣಿಸಿಕೊಳ್ಳುವ ಶಿವಣ್ಣ ಪಾತ್ರದ ಪರಿಚಯ ವಿಶೇಷವಾಗಿದ್ದು, ಬಳಿಕ ಕೇಳಿಬರುವ ಸಂಭಾಷಣೆ ಥ್ರಿಲ್ ಹೆಚ್ಚಿಸುತ್ತದೆ. “ನೀನು ಹಚ್ಚಿರುವ ಬೆಂಕಿ ಊರನ್ನು ಮಾತ್ರವಲ್ಲ, ದೇಶವನ್ನೇ ಸುಡುತ್ತಿದೆ” ಎಂಬ ಡೈಲಾಗ್ ಬಳಿಕ, ಶಿವಣ್ಣ ಹೇಳುವ “ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗಲೂ ಆಗಲ್ಲ” ಎನ್ನುವ ಖಡಕ್ ಡೈಲಾಗ್ ಸಿನಿರಸಿಕರಿಗೆ ಮಾಸ್ ಫೀಲ್ ನೀಡಿದೆ.

ಸತ್ಯಘಟನೆಗಳನ್ನು ಆಧರಿಸಿ ಪವನ್ ಒಡೆಯರ್ ಈ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ವೈದಿ ಛಾಯಾಗ್ರಹಣ, ಗುಣ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ನೀಡುತ್ತಿದ್ದಾರೆ.

ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆಯುವ ಪವನ್ ಒಡೆಯರ್, ಶಿವಣ್ಣಗಾಗಿ ಮತ್ತೊಂದು ಪವರ್‌ಫುಲ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ ಬಂಡವಾಳ ಹೂಡಿದ್ದು, ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.

ಶಿವಣ್ಣನ ಹೊಸ ಅವತಾರ ಹೇಗಿದೆ? ‘ಬೇಲ್’ ಮೇಲೆ ನಿಮ್ಮ ನಿರೀಕ್ಷೆ ಏನು? ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *