
ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಕೆಟ್ಟ ಪ್ರತೀತಿ ಬೆಳೆದುಕೊಂಡು ಬಂದಿದೆ. ಒಂದು ದೊಡ್ಡ ಪರಭಾಷಾ ಸಿನಿಮಾ ಹಬ್ಬದ ಟೈಮ್ನಲ್ಲಿ ರಿಲೀಸ್ ಆಗುತ್ತಿದೆ ಎಂದರೆ ಅದಕ್ಕೆ ಹೆದರಿಕೊಂಡು ಕನ್ನಡ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹಾಕಿ ಬಿಡುವುದು. ಆ ಸಿನಿಮಾಗೂ ನಮ್ಮ ಸಿನಿಮಾಗೂ ಎಲ್ಲಿಯ ಪೈಪೋಟಿ ಅಂತ ನಮ್ಮ ಇಂಡಸ್ಟ್ರಿಯವರೇ ಹೆದರಿ ನಿರ್ಧರಿಸಿ ಬಿಡುತ್ತಾರೆ. ಇದು ಬಹಳ ಕೆಟ್ಟ ವ್ಯಾವಹಾರಿಕ ಮನೋಭಾವ. ಅದೆಂತಹ ದೊಡ್ಡ ಪರಭಾಷಾ ಸಿನಿಮಾವೇ ಬರಲಿ, ಒಂದು ಇಷ್ಟವಾಗುವಂತಹ ನೋಡಬಲ್ಲ ಕನ್ನಡ ಸಿನಿಮಾ ಬಂದರೆ ಅದನ್ನು ಹಿಡಿದೆತ್ತಿ ಗೆಲ್ಲಿಸಿಕೊಡುವ ದೊಡ್ಡ ಮನಸ್ಸು ಕನ್ನಡ ಪ್ರೇಕ್ಷಕರಲ್ಲಿ ಎಂದೆಂದಿಗೂ ಇದ್ದೇ ಇದೆ. ಇದಕ್ಕೆ ಇತಿಹಾಸದಲ್ಲಿ ಹಲವಾರು ಸಾಕ್ಷಿ ಇವೆ. ಇತ್ತೀಚಿನ ವರ್ಷಗಳ ಸಾಕ್ಷಿ ರಂಗಿತರಂಗ.
ಆದರೆ ಲವ್ ಮಾಕ್ಟೇಲ್ 3 ನಿರ್ಮಾಣ ಮಾಡಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಹೀಗೆ ಯೋಚನೆ ಮಾಡಲಿಲ್ಲ. ಏಕೆಂದರೆ ಅವರಿಗೆ ತಮ್ಮ ಸಿನಿಮಾದ ಮೇಲೆ ನಂಬಿಕೆ ಇತ್ತು. ಪಕ್ಕದಲ್ಲಿ ಎಂತಹ ದೊಡ್ಡದಾದ ಸಿನಿಮಾವೇ ಇರಲಿ ನಮ್ಮ ಸಿನಿಮಾ ಕಂಟೆಂಟ್ ನೋಡುವ ಪ್ರೇಕ್ಷಕರು ಇದ್ದಾರೆ ಅವರು ನಮ್ಮ ಕೈ ಹಿಡಿಯುತ್ತಾರೆ ಚಿತ್ರಮಂದಿರಕ್ಕೆ ಬರುತ್ತಾರೆ ಅಂತ ನಂಬಿದರಲ್ಲ ಅದು ಈಗ ದೊಡ್ಡ ಪ್ರತಿಫಲ ಕೊಡುತ್ತಿದೆ.
ಹೌದು ಯಾರು ಕೂಡ ಯಾವ ಸಿನಿಮಾಗೂ ಹೆದರುವ ಅಗತ್ಯವಿಲ್ಲ. ಮಾರ್ಕೆಟ್ನಲ್ಲಿ ಒಂದೇ ಬಾರಿ ಎರಡು ಸಿನಿಮಾ ಗೆಲ್ಲುವ ಅವಕಾಶ ಯಾವಾಗಲೂ ಇದ್ದೇ ಇದೆ. ಅದರಲ್ಲೂ ನಮ್ಮ ಕನ್ನಡಿಗರು ಸ್ವಾಭಿಮಾನ ಅಂತ ಬಂದರೆ ಸ್ವಲ್ಪ ಮುಂದೆಯೇ ಇರುವ ಜನ. ಒಳ್ಳೆಯ ಸಿನಿಮಾವನ್ನು ಅದರಲ್ಲೂ ಒಳ್ಳೆಯ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸದೆ ಎಂದಾದರು ಇದ್ದಾರಾ? ಇಲ್ಲವೇ ಇಲ್ಲ. ಒಳ್ಳೆ ಸಿನಿಮಾ ನೋಡಲು ಕನ್ನಡ ಪ್ರೇಕ್ಷಕರು ಯಾವತ್ತಿಗೂ ಇರುತ್ತಾರೆ.
ಕನ್ನಡ ಚಿತ್ರೋದ್ಯಮವೇ ಆಗಲಿ ಯಾವ ನಿರ್ಮಾಪಕರೇ ಆಗಲಿ ಚಿತ್ರತಂಡವೇ ಆಗಲಿ, ನಿಮ್ಮ ಕಂಟೆಂಟ್ ಮೇಲೆ ನಿಮಗೆ ನಂಬಿಕೆ ಇದ್ದರೆ ಯಾವ ದೊಡ್ಡ ಪರಭಾಷಗಳ ಸಿನಿಮಾಗೂ ಹೆದರುವ ಅಗತ್ಯವಿಲ್ಲ. ಕನ್ನಡ ಸಿನಿಮಾ ನೋಡಲು ಕನ್ನಡ ಪ್ರೇಕ್ಷಕ ಇದ್ದೇ ಇದ್ದಾನೆ. ಅವನು ಬರುತ್ತಾನೆ, ಅವನ ಮೇಲೆ ನಂಬಿಕೆ ಇಡಿ.
Love Mocktail 3 ಯಶಸ್ಸು ಕನ್ನಡ ಚಿತ್ರರಂಗಕ್ಕೆ ದಾರಿದೀಪವಾಗಲಿ. ಮುಂದೆ ಬಿಡುಗಡೆಯ ನಿರ್ಧಾರ ಮಾಡುವಾಗ ನಿರ್ಮಾಪಕರಿಗೆ ಒಂದು ಧೈರ್ಯದ ಉದಾಹರಣೆಯಾಗಿ ಉಳಿದುಕೊಳ್ಳಲಿ. ಉದ್ಯಮ ಅಂದಮೇಲೆ ದೊಡ್ಡದು ಚಿಕ್ಕದು ಎಂಬ ಪ್ರಮಾಣ – ಪರಿಣಾಮ ಇದ್ದೇ ಇದೆ. ಆದರೆ ಪ್ರೇಕ್ಷಕ ಇದ್ದಾನಲ್ಲ, ಅವನು ತನಗೆ ಏನು ಇಷ್ಟವೋ ಅದನ್ನೇ ನೋಡೋದು. ಪ್ರೇಕ್ಷಕ ನಮ್ಮ ಸಿನಿಮಾ ಜೊತೆ ನಿಲ್ಲುತ್ತಾನೆ ಅನ್ನೋ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ ಆಗಬೇಕು. ಅಷ್ಟೇ..