ಸಿಟಿ ಲೈಟ್ಸ್‌ನ ‘ಒಂದೇ ಚಂದ್ರ’ ಹಾಡಿನಲ್ಲಿ ಬೆಂಗಳೂರಿನ ರಿಯಲ್ ಜೋಡಿಗಳ ಪ್ರೇಮಕಾವ್ಯ!

ದುನಿಯಾ ವಿಜಯ್ (ವಿಜಯ್ ಕುಮಾರ್) ನಿರ್ದೇಶನದ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಚಿತ್ರದ ನಾಲ್ಕನೇ ಹಾಡು ‘ಒಂದೇ ಚಂದ್ರ’ ಮಂಗಳವಾರ ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ಮತ್ತು ನವನಟಿ ಮೋನಿಷಾ ವಿಜಯ ಕುಮಾರ್ ಅಭಿನಯದ ಈ ಪ್ರೇಮಗೀತೆ ಕೇವಲ ರೀಲ್ ಜೋಡಿಯಷ್ಟೇ ಅಲ್ಲದೆ, ಬೆಂಗಳೂರಿನ ರಿಯಲ್ ಜೋಡಿಗಳ ನೈಜ ಪ್ರೀತಿಯನ್ನು ಸಂಭ್ರಮಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ರಿಯಲ್ ಲೈಫ್ ಜೋಡಿಗಳ ಪ್ರೇಮಕಥೆ

ಸಾಮಾನ್ಯ ಸಿನಿಮಾಗಳ ಹಾಡುಗಳಿಗಿಂತ ವಿಭಿನ್ನವಾಗಿ ಮೂಡಿಬಂದಿರುವ ಈ ಹಾಡಿನಲ್ಲಿ, ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗ ಹಾಗೂ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿದ ನೈಜ ದಂಪತಿಗಳ ಛಾಯಾಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ನಗರಕ್ಕೆ ಬಂದು ಪರಸ್ಪರ ಪ್ರೀತಿಯಿಂದ ಸಂಸಾರ ನಡೆಸುತ್ತಿರುವ ಜೋಡಿಗಳ ಭಾವಚಿತ್ರಗಳು ಈ ಹಾಡಿಗೆ ಮತ್ತಷ್ಟು ಭಾವನಾತ್ಮಕ ಸ್ಪರ್ಶ ನೀಡಿದೆ.

ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, “ಈ ಹಾಡು ಬೆಂಗಳೂರಿಗೆ ಬಂದು ಜೀವನ ರೂಪಿಸಿಕೊಂಡ ಪ್ರತಿಯೊಂದು ಜೋಡಿಗೆ ನಾವ ನೀಡುತ್ತಿರುವ ಗೌರವ. ಅಂತಹ ನೈಜ ದಂಪತಿಗಳನ್ನು ಹುಡುಕಿ ಅವರ ಫೋಟೋಗಳನ್ನು ಈ ಹಾಡಿನಲ್ಲಿ ಬಳಸಿಕೊಂಡಿದ್ದೇವೆ. ವಿಶೇಷವೆಂದರೆ ಈ ಹಾಡು ಕೇವಲ ಯೂಟ್ಯೂಬ್‌ನಲ್ಲಿ ಮಾತ್ರ ಲಭ್ಯವಿದ್ದು, ಸಿನಿಮಾದಲ್ಲಿ ಇರುವುದಿಲ್ಲ,” ಎಂದು ತಿಳಿಸಿದ್ದಾರೆ.

ಚರಣ್ ರಾಜ್ ಸಂಗೀತ, ಆಂಥೋಣಿ ದಾಸನ್ ಕಂಠಸಿರಿ

  • ಸಾಹಿತ್ಯ: ನಾಗಾರ್ಜುನ ಶರ್ಮಾ
  • ಸಂಗೀತ: ಚರಣ್ ರಾಜ್
  • ಗಾಯನ: ಆಂಥೋಣಿ ದಾಸನ್

“ಪ್ರೀತಿ ಸಿಗುವುದು ಅಪರೂಪ, ಅದನ್ನು ಕಳೆದುಕೊಳ್ಳಬೇಡಿ” ಎಂಬ ತತ್ವದ ಮೇಲೆ ನಾಗಾರ್ಜುನ ಶರ್ಮಾ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹೊರಗಿನ ಪ್ರಪಂಚ ಅಥವಾ ಜನರ ಮಾತುಗಳನ್ನು ಲೆಕ್ಕಿಸದೆ ಪರಸ್ಪರ ಪ್ರೀತಿಸುವ ಮನಸ್ಸುಗಳನ್ನು ಈ ಹಾಡು ಕೊಂಡಾಡುತ್ತದೆ.

ಯುವ ನಟರಾದ ಸಿಗ್ಗು ಮೂಲೀಮನಿ, ಪಾಯಲ್ ಚಂಗಪ್ಪ ಮತ್ತು ಸುಧಾಕರ್ ಗೌಡ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಾಡನ್ನು ವೀಕ್ಷಿಸಿದ ಸಿಗ್ಗು, “ಈ ಹಾಡು ನನ್ನ ಹೆಂಡತಿಯನ್ನು ನೆನಪಿಸಿತು,” ಎಂದು ತಮ್ಮ ಭಾವನೆ ಹಂಚಿಕೊಂಡರು.

ನಾಯಕ ನಟ ವಿನಯ್ ರಾಜ್‌ಕುಮಾರ್ ಮಾತನಾಡಿ, “ಪ್ರೀತಿಯ ಆಳವನ್ನು ಈ ಹಾಡು ಸುಂದರವಾಗಿ ಹಿಡಿದಿಟ್ಟಿದೆ. ಪ್ರತಿಯೊಂದು ಜೋಡಿಯೂ ತಮ್ಮದೇ ಆದ ಒಂದು ಸುಂದರ ಜಗತ್ತನ್ನು ಸೃಷ್ಟಿಸಿಕೊಳ್ಳುತ್ತದೆ,” ಎಂದಿದ್ದಾರೆ.

ಸೆಪ್ಟೆಂಬರ್ 18ಕ್ಕೆ ಚಿತ್ರಮಂದಿರಗಳಲ್ಲಿ ‘ಸಿಟಿ ಲೈಟ್ಸ್’

‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಯಶಸ್ಸಿನ ನಂತರ ವಿಜಯ್ ಕುಮಾರ್ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಹಳ್ಳಿಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಜನರ ನೈಜ ಕಥೆಯನ್ನೊಳಗೊಂಡ ಈ ಚಿತ್ರವು ಸೆಪ್ಟೆಂಬರ್ 18 ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *