ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವಣ್ಣ: ಆರ್‌ ಬೊಂಬಾಟ್ ಆಫರ್ ಮೂಲಕ ಬಾಲಿವುಡ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಎಂಟ್ರಿ!

ಸ್ಯಾಂಡಲ್‌ವುಡ್ ಮಾತ್ರವಲ್ಲದೆ ದಕ್ಷಿಣ ಭಾರತದಾದ್ಯಂತ ತಮ್ಮ ನಟನೆಯ ಮೂಲಕ ಸದ್ದು ಮಾಡುತ್ತಿರುವ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ‘ಕಬ್ಜ’ ಸಿನಿಮಾ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ನೂತನ ಬಿಗ್ ಬಜೆಟ್ ಸಿನಿಮಾದ ಮೂಲಕ ಶಿವಣ್ಣ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಮುಂಬೈನಲ್ಲಿ ಆಗಸ್ಟ್ 28ಕ್ಕೆ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ

ಈ ಬೃಹತ್ ಪ್ಯಾನ್ ಇಂಡಿಯಾ ಯೋಜನೆಯನ್ನು ಬಾಲಿವುಡ್‌ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ (Anand Pandit Motion Pictures) ಹಾಗೂ ಆರ್‌ಸಿ ಸ್ಟುಡಿಯೋಸ್ (RC Studios) ಜಂಟಿಯಾಗಿ ನಿರ್ಮಿಸುತ್ತಿವೆ. ಈ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ (Title) ಮತ್ತು ಮೋಷನ್ ಪೋಸ್ಟರ್ ಅನ್ನು ಆಗಸ್ಟ್ 28ರಂದು ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣ

ಈ ಸಿನಿಮಾವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ (Simultaneously) ಚಿತ್ರೀಕರಣಗೊಳ್ಳಲಿದ್ದು, ಬಳಿಕ ಇತರ ಪ್ರಮುಖ ಭಾರತೀಯ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ. ‘ಕಬ್ಜ’ (2023) ಚಿತ್ರದ ನಂತರ ನಿರ್ದೇಶಕ ಆರ್. ಚಂದ್ರು ಅವರು ಹಲವು ವಿಭಿನ್ನ ಕಥೆಗಳ ಮೇಲೆ ಕೆಲಸ ಮಾಡಿದ್ದು, ಈ ಬಾರಿಯ ಕಥೆಯನ್ನು ಅತ್ಯಂತ ಬೃಹತ್ ಮಟ್ಟದಲ್ಲಿ ತೆರೆಗೆ ತರಲು ಯೋಜಿಸಿದ್ದಾರೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಪ್ರಮುಖ ತಾರೆಯರು ಅಭಿನಯಿಸಲಿದ್ದಾರೆ.

ದಕ್ಷಿಣದಿಂದ ಬಾಲಿವುಡ್‌ವರೆಗೆ ಶಿವಣ್ಣ ಹವಾ

ತಮಿಳಿನಲ್ಲಿ ರಜನಿಕಾಂತ್ ಜೊತೆ ‘ಜೈಲರ್ 2’, ತೆಲುಗಿನಲ್ಲಿ ‘ಗುಮ್ಮಡಿ ನರಸಯ್ಯ’ ಸೇರಿದಂತೆ ಹಲವು ಪರಭಾಷಾ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿರುವ ಶಿವರಾಜ್‌ಕುಮಾರ್ ಅವರಿಗೆ ಈ ಹಿಂದಿ ಚಿತ್ರವು ಅವರ ಕಲಾಪಯಣದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ. ಅಲ್ಲದೆ ‘ಬೈಲ್’, ‘DAD: ಎ ಫಾರ್ ಆನಂದ್’ ಮತ್ತು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸೇರಿದಂತೆ ಹಲವು ಕುತೂಹಲಕಾರಿ ಸಿನಿಮಾಗಳು ಈಗಾಗಲೇ ಅವರ ಖಾತೆಯಲ್ಲಿವೆ.

ಆರ್. ಚಂದ್ರು ಮತ್ತು ಆನಂದ್ ಪಂಡಿತ್ ಅವರ ಈ ಜಂಟಿ ಸಾಹಸವು ಕನ್ನಡ ಚಿತ್ರರಂಗದ ಶಕ್ತಿಯನ್ನು ಬಾಲಿವುಡ್ ಸೇರಿದಂತೆ ದೇಶಾದ್ಯಂತ ಮತ್ತೊಮ್ಮೆ ಸಾಬೀತುಪಡಿಸಲು ಸಜ್ಜಾಗಿದೆ.

Leave a Reply

Your email address will not be published. Required fields are marked *