
ಶಾಲಾ ದಿನಗಳ ನೆನಪುಗಳನ್ನು ಮತ್ತೆ ಕಣ್ಮುಂದೆ ತರುವ ‘ಅಮರ್ಥ’
ಹೈಸ್ಕೂಲ್ ಸ್ನೇಹಿತರ ಪುನರ್ಮಿಲನದೊಂದಿಗೆ ಆರಂಭವಾಗುವ ಕಥೆ, ನಿಧಾನವಾಗಿ ಅವರ ಶಾಲಾ ದಿನಗಳಿಗೆ ಕರೆದೊಯ್ಯುತ್ತದೆ. ಬಾಲ್ಯದ ಸ್ನೇಹ, ತುಂಟಾಟ ಮತ್ತು ನೆನಪುಗಳ ನಡುವೆ, ಪರಸ್ಪರ ಪ್ರೀತಿಸುತ್ತಿದ್ದರೂ ಮನದ ಮಾತು ಹೇಳಿಕೊಳ್ಳಲಾಗದ ರಮೇಶ–ಲಕ್ಷ್ಮಿಯ ಕಥೆ ಪ್ರಧಾನವಾಗಿ ತೆರೆದುಕೊಳ್ಳುತ್ತದೆ.
ಮೊದಲಾರ್ಧದಲ್ಲಿ ಶಾಲಾ ಬದುಕಿನ ಮುಗ್ಧತೆ ಮತ್ತು ಸ್ನೇಹದ ಸೊಗಡಿದೆ. ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೋಳಾರ್ ಅವರ ಹಾಸ್ಯ ಸನ್ನಿವೇಶಗಳು ಅಲ್ಲಲ್ಲಿ ನಗು ಮೂಡಿಸುತ್ತವೆ. ಕೆಲವು ಕ್ಷಣಗಳು ಮನಸ್ಸಿಗೆ ಹತ್ತಿರವಾದರೆ, ಇನ್ನೂ ಕೆಲವು ಪರಿಚಿತ ಹಾದಿಯಲ್ಲೇ ಸಾಗುತ್ತವೆ.
ವರ್ಷಗಳ ಬಳಿಕ ರಮೇಶ ಮತ್ತು ಲಕ್ಷ್ಮಿ ಮತ್ತೆ ಭೇಟಿಯಾಗುವುದರೊಂದಿಗೆ ದ್ವಿತೀಯಾರ್ಧ ಹೆಚ್ಚು ಆಸಕ್ತಿಕರವಾಗುತ್ತದೆ. ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ತಮ್ಮ ಪಾತ್ರಗಳಿಗೆ ವಯೋ ಸಹಜ ಪ್ರಬುದ್ಧತೆ ಹಾಗೂ ಭಾವನಾತ್ಮಕ ತೂಕ ನೀಡಿದ್ದಾರೆ. ಅವರ ನಡುವಿನ ಮೌನ, ಮುಜುಗರ ಮತ್ತು ನಿಧಾನವಾಗಿ ಮರುಚಿಗುರುವ ಆತ್ಮೀಯತೆಯೇ ಚಿತ್ರದ ಪ್ರಮುಖ ಆಕರ್ಷಣೆ. ಕೃತಿ ಶೆಟ್ಟಿ ಕೂಡ ತೆರೆಯ ಮೇಲೆ ಆಹ್ಲಾದಕರವಾಗಿ ಕಾಣಿಸಿಕೊಂಡಿದ್ದಾರೆ.
ಹಳೆಯ ಸ್ನೇಹಿತರೆಲ್ಲ ಮತ್ತೆ ಶಾಲೆಯಲ್ಲಿ ಒಂದಾಗುವ ಸನ್ನಿವೇಶಗಳು ಚಿತ್ರಕ್ಕೆ ಆತ್ಮೀಯವಾದ ಫೀಲ್‌ಗುಡ್ ಸ್ಪರ್ಶ ನೀಡುತ್ತವೆ. ಕಥೆ ಭಾವನಾತ್ಮಕ ಅಂತ್ಯದತ್ತ ಸಾಗುತ್ತಿದೆ ಎನ್ನುವಷ್ಟರಲ್ಲಿ ಎದುರಾಗುವ ಅನಿರೀಕ್ಷಿತ ತಿರುವು, ಸಿನಿಮಾವನ್ನು ಸಂಪೂರ್ಣ ಬೇರೆಯದೇ ದಿಕ್ಕಿಗೆ ಕರೆದೊಯ್ಯುತ್ತದೆ.
‘ಅಮರ್ಥ’ ಅವಸರವಿಲ್ಲದೆ ತನ್ನ ಕಥೆಯನ್ನು ಹೇಳುತ್ತದೆ. ಶಾಲಾ ದಿನಗಳ ನೆನಪುಗಳು ಚಿತ್ರಕ್ಕೆ ಸಹಜವಾದ ಚೈತನ್ಯ ನೀಡಿದರೆ, ದ್ವಿತೀಯಾರ್ಧದ ಪ್ರಬುದ್ಧ ಪ್ರೇಮ ಮನಸ್ಸಿಗೆ ಹತ್ತಿರವಾಗುತ್ತದೆ. ಆದರೆ ಕಥೆಯ ಭಾವಲಯವನ್ನೇ ಏಕಾಏಕಿ ಬದಲಿಸುವ ತಿರುವು ಮತ್ತು ದಿಢೀರ್ ಅಂತ್ಯ, “ಅರೆ… ಇದೇನಾಯಿತು?” ಎಂಬ ಪ್ರಶ್ನೆಯನ್ನು ಉಳಿಸುತ್ತದೆ.
ಸ್ನೇಹ, ಅಪೂರ್ಣ ಪ್ರೀತಿ ಮತ್ತು ಮತ್ತೊಂದು ಅವಕಾಶದ ಸುತ್ತ ಹೆಣೆದ ನೆನಪುಗಳ ಪಯಣ. ಅಲ್ಲಲ್ಲಿ ಮನಸ್ಸಿಗೆ ಮುದ ನೀಡುವ ‘ಅಮರ್ಥ’, ಕೊನೆಯ ಅನಿರೀಕ್ಷಿತ ತಿರುವಿನ ಮೂಲಕ ಅಚ್ಚರಿ ಮತ್ತು ಗೊಂದಲ—ಎರಡನ್ನೂ ಉಳಿಸುತ್ತದೆ.
ರೇಟಿಂಗ್ – 3/5