‘ದಿಯಾ’ ಜೋಡಿಯೊಂದಿಗೆ ಮತ್ತೆ ಬಂದ ಕೆ.ಎಸ್. ಅಶೋಕ; ‘ಫ್ರೆಂಡ್ಸ್ & ಫ್ಯಾಮಿಲಿಸ್’ ಫಸ್ಟ್ ಲುಕ್ ರಿಲೀಸ್!

ಬೆಂಗಳೂರು: ‘6-5=2’ ಹಾಗೂ ಸೂಪರ್ ಹಿಟ್ ‘ದಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕೆ.ಎಸ್. ಅಶೋಕ ಇದೀಗ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ‘ಫ್ರೆಂಡ್ಸ್ & ಫ್ಯಾಮಿಲಿಸ್’ ಎಂಬ ಆಕರ್ಷಕ ಶೀರ್ಷಿಕೆಯೊಂದಿಗೆ ಮೂಡಿಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ. ವಿಶೇಷವೆಂದರೆ, ‘ದಿಯಾ’ ಚಿತ್ರದ ಯಶಸ್ವಿ ಜೋಡಿಯಾದ ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದು, ಇವರೊಂದಿಗೆ ನವ ಪ್ರತಿಭೆ ನಿವೀನ್ (ಶ್ರೀಧರ್) ಮತ್ತು ಆಯಿಷಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಮೂವರು ಗೆಳೆಯರ ಭಾವನಾತ್ಮಕ ಪಯಣ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕೆ.ಎಸ್. ಅಶೋಕ, “‘ಫ್ರೆಂಡ್ಸ್ & ಫ್ಯಾಮಿಲಿಸ್’ ಮೂವರು ಗೆಳೆಯರು ಮತ್ತು ಅವರ ಕುಟುಂಬಗಳ ಸುತ್ತ ನಡೆಯುವ ಹಾಸ್ಯಾತ್ಮಕ ಸೋಶಿಯಲ್ ಡ್ರಾಮಾ. ‘ದಿಯಾ’ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಇದ್ದಂತಹ ಭಾವನಾತ್ಮಕ ಪಯಣ ಈ ಚಿತ್ರದ ಮೂರು ಪ್ರಮುಖ ಪಾತ್ರಗಳಿಗೂ ಇದೆ. ಪ್ರೇಕ್ಷಕರು ತಮ್ಮದೇ ಜೀವನದ ಘಟನೆಗಳನ್ನು ಕನ್ನಡಿಯಂತೆ ಕಾಣುವಷ್ಟು ಸಹಜವಾಗಿ ಪಾತ್ರಗಳನ್ನು ರೂಪಿಸಲಾಗಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಪ್ರಬುದ್ಧವಾದ ಕಥೆ ಹಾಗೂ ಪಾತ್ರಗಳ ಆಳವನ್ನು ಇದರಲ್ಲಿ ಕಟ್ಟಿಕೊಡಲಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕರೊಂದಿಗಿನ ಒಡನಾಟ ನೆನೆದ ಪೃಥ್ವಿ ಅಂಬಾರ್ ಏಳು ವರ್ಷಗಳ ಸುದೀರ್ಘ ಒಡನಾಟವನ್ನು ಮೆಲುಕು ಹಾಕಿದ ನಟ ಪೃಥ್ವಿ ಅಂಬಾರ್, “2014ರಲ್ಲಿ ‘6-5=2’ ಬಿಡುಗಡೆಯಾದಾಗ ಅದು ನೈಜ ಘಟನೆ ಎಂದು ನಂಬಲು ಸಾಧ್ಯವಾಗದೆ ನಾನು ಅಶೋಕ್ ಸರ್ ಜೊತೆ ಜಗಳವಾಡಿದ್ದೆ. ಬಳಿಕ ಆ ಸಿನಿಮಾ ಶತದಿನೋತ್ಸವ ಆಚರಿಸಿದಾಗ ನಾನೇ ಮೂರು ಬಾರಿ ನೋಡಿದ್ದೆ. ಇಂದು ಅವರ ನಿರ್ದೇಶನದಲ್ಲಿ ನಾಲ್ಕನೇ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ. ಕಷ್ಟ-ಸುಖದಲ್ಲಿ ಜೊತೆಗಿರುವ ಸ್ನೇಹಿತರು ಮತ್ತು ಕುಟುಂಬವೇ ನಿಜವಾದ ಆಸ್ತಿ ಎಂಬುದನ್ನು ಈ ಸಿನಿಮಾ ಸಾರುತ್ತದೆ” ಎಂದರು.

ಮಂಡ್ಯ ಭಾಷೆ ಕಲಿತು ನಟಿಸಿದ ದೀಕ್ಷಿತ್ ಶೆಟ್ಟಿ ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, “‘ದಿಯಾ’ ಸಿನಿಮಾ ನನ್ನ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಇಲ್ಲಿ ಕಥೆಗಿಂತ ಹೆಚ್ಚಾಗಿ ಅಶೋಕ್ ಸರ್ ಮೇಲಿನ ನಂಬಿಕೆಯಿಂದ ಈ ಸಿನಿಮಾ ಒಪ್ಪಿಕೊಂಡೆ. ಕುಂದಾಪುರದ ನಾನು ಮತ್ತು ಮಂಗಳೂರಿನ ಪೃಥ್ವಿ ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ವರ್ಕ್‌ಶಾಪ್ ಮಾಡಿ, ಸಂಪೂರ್ಣ ಮಂಡ್ಯ ಶೈಲಿಯ ಭಾಷೆಯನ್ನು ಕಲಿತು ನಟಿಸಿದ್ದೇವೆ. ಸೆಟ್‌ನಲ್ಲಿ ಸ್ಕ್ರಿಪ್ಟ್ ಪೇಪರ್ ಕೂಡ ನೋಡದಷ್ಟು ಪೂರ್ವತಯಾರಿಯೊಂದಿಗೆ ಚಿತ್ರೀಕರಣ ನಡೆಸಿದ್ದೇವೆ” ಎಂದು ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.

ತಾಂತ್ರಿಕ ಬಳಗ ನವೀನ್ ಎಸ್. ಪಿ. ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕೆ.ಎಸ್. ಅಶೋಕ ಅವರೇ ಕಥೆ, ಚಿತ್ರಕಥೆ ಬರೆದು ಸಂಕಲನ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ಹೇಮಂತ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಚಂದನ್ ಆರ್. ಎನ್. ಕಾರ್ಯನಿರ್ವಾಹಕ ನಿರ್ಮಾಪಕರಾಗಿ, ಯತೀಶ್ ಹಾಗೂ ಗಗನ್ ನಿರ್ಮಾಣ ವ್ಯವಸ್ಥಾಪಕರಾಗಿ ಮತ್ತು ಎ. ಎನ್. ಎಂ. ಸುರೇಶ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *