
‘Toxic’ ಚಿತ್ರೀಕರಣದ ವೇಳೆ ಕಿಯಾರಾ ಅಡ್ವಾಣಿ ಅವರ ಬದ್ಧತೆ ಹಾಗೂ ವೃತ್ತಿಪರತೆಗೆ ಯಶ್ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಗರ್ಭಿಣಿಯಾಗಿದ್ದರೂ ಶೂಟಿಂಗ್‌ಗೆ ಸಂಪೂರ್ಣ ಬದ್ಧತೆಯಿಂದ ಹಾಜರಾಗಿ ತಮ್ಮ ಪಾತ್ರಕ್ಕೆ ಶೇ.100%ರಷ್ಟು ನ್ಯಾಯ ಒದಗಿಸಿದ ಕಿಯಾರಾ ಅವರ ವ್ಯಕ್ತಿತ್ವವನ್ನು ಯಶ್ ಶ್ಲಾಘಿಸಿದ್ದಾರೆ.
“ಅವರು ಗರ್ಭಿಣಿಯಾಗಿದ್ದರೂ ಶೂಟ್ ಗೆ ಬಂದರು, ತಮ್ಮನ್ನು ಒಳಗೊಂಡ ಬಹಳ ಚಾಲೆಂಜಿಂಗ್ ಆದ ದೃಶ್ಯಗಳಲ್ಲಿ ನಟಿಸುವಲ್ಲಿ ಶೇ.100ರಷ್ಟು ಬದ್ಧತೆಯನ್ನು ತೋರಿದರು. ಕೆಲಸದ ಮೇಲೆ ಅವರ ಸಮರ್ಪಣೆ ನಿಜಕ್ಕೂ ಅದ್ಭುತ. ನನಗೆ ಮತ್ತು ನಿರ್ದೇಶಕಿ ಗೀತು ಅವರಿಗೆ ಅವರ ಬಗ್ಗೆ ತುಂಬಾ ಕಾಳಜಿ ಇತ್ತು. ನಾವು ಅವರ ಬಾಡಿಗಾರ್ಡ್‌ಗಳು, ಬೌನ್ಸರ್‌ಗಳಂತೆ ಅವರ ಸುತ್ತಮುತ್ತಲೇ ಇದ್ದು, ಅವರನ್ನು ನೋಡಿಕೊಳ್ಳುತ್ತಿದ್ದೆವು. ಆದರೆ ನಿಜವಾಗಿಯೂ, ಗರ್ಭಿಣಿ ಎಂಬ ಸೂಕ್ಷ್ಮತೆಯನ್ನು ತೋರಿಸಿಕೊಳ್ಳದೆ ಅವರು ತಮ್ಮ ನಟನೆಯ ಅತ್ಯುತ್ತಮವಾದುದನ್ನೇ ಚಿತ್ರಕ್ಕೆ ನೀಡಿದ್ದಾರೆ,” ಎಂದು ಯಶ್ ಹೇಳಿದ್ದಾರೆ.
ಕೊನೆಯಲ್ಲಿ, “ಥ್ಯಾಂಕ್ ಯೂ ಕಿಯಾರಾ… ಈ ಚಿತ್ರ ನಿಮ್ಮ ನಟನೆಯಿಂದಲೇ ನಿಜಕ್ಕೂ ವಿಶೇಷ” ಎಂದು ಯಶ್ ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ನಟಿ ಕಿಯಾರಾ ಅವರ ಆರೋಗ್ಯದ ಹಿತದೃಷ್ಟಿಯಿಂದ ಯಶ್ ಹಾಗೂ ‘ಟಾಕ್ಸಿಕ್’ ಚಿತ್ರತಂಡ ವಿಶೇಷ ಕಾಳಜಿ ವಹಿಸಿತ್ತು. ದೀರ್ಘ ಪ್ರಯಾಣದ ಆಯಾಸ ತಪ್ಪಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಶೂಟಿಂಗ್ ವೇಳಾಪಟ್ಟಿಯನ್ನೇ ಮುಂಬೈಗೆ ಸ್ಥಳಾಂತರಿಸಿ, ಕಿಯಾರಾ ಅವರಿಗೆ ಯಾವುದೇ ತೊಂದರೆಯಾಗದಂತೆ ಚಿತ್ರತಂಡ ಮುತುವರ್ಜಿ ವಹಿಸಿತ್ತು.