
ರಾಮಾಯಣ ಎಂದರೆ ಕೇವಲ ಒಂದು ಕಥೆಯಲ್ಲ. ಅದು ನಮ್ಮ ಸಂಸ್ಕೃತಿ, ನಂಬಿಕೆ, ಭಕ್ತಿ ಮತ್ತು ಜೀವನಮೌಲ್ಯಗಳ ಜೊತೆ ಬೆರೆತುಹೋಗಿರುವ ಮಹಾಕಾವ್ಯ. ಶ್ರೀರಾಮನ ಆದರ್ಶ, ಸೀತಾಮಾತೆಯ ತ್ಯಾಗ, ಲಕ್ಷ್ಮಣನ ನಿಷ್ಠೆ, ಹನುಮಂತನ ಭಕ್ತಿ… ಹೀಗೆ ಪ್ರತಿಯೊಂದು ಪಾತ್ರವೂ ಭಾರತೀಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ.
ಇಂತಹ ಮಹಾಕಾವ್ಯವನ್ನು ಇಂದಿನ ಆಧುನಿಕ ಸಿನಿಮಾ ತಂತ್ರಜ್ಞಾನದ ನೆರವಿನಿಂದ ದೊಡ್ಡ ಪರದೆಯ ಮೇಲೆ ಕಟ್ಟಿಕೊಡುವ ಪ್ರಯತ್ನವೇ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’.
ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ವಿಶೇಷ ಪ್ರದರ್ಶನ ನವೆಂಬರ್ 3ರಂದು ಮುಂಬೈನಲ್ಲಿ ನಡೆದಿದ್ದು, ಸಿನಿಮಾ ವೀಕ್ಷಿಸಿದ ಹಲವು ಗಣ್ಯರು ಮತ್ತು ಸಿನಿಮಾ ಪ್ರೇಮಿಗಳಿಂದ ಭರ್ಜರಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಚಿತ್ರದ ಅದ್ಭುತ ದೃಶ್ಯವೈಭವ, ಸಾಹಸ ದೃಶ್ಯಗಳು, ಕಲಾವಿದರ ಅಭಿನಯ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರ ಕೆಲಸಕ್ಕೆ ವಿಶೇಷ ಪ್ರಶಂಸೆ ವ್ಯಕ್ತವಾಗಿದೆ’
ದೃಶ್ಯವೈಭವದ ಜೊತೆಗೆ ನಿರ್ದೇಶನಕ್ಕೂ ಮೆಚ್ಚುಗೆ!
ಸಿನಿಮಾ ವೀಕ್ಷಿಸಿದ ಜನಪ್ರಿಯ ಯೂಟ್ಯೂಬರ್ ಆಶಿಶ್ ಚಂಚಲಾನಿ, ‘ರಾಮಾಯಣ’ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಕಂಡ ಅತ್ಯುತ್ತಮ ಸಾಹಸ ದೃಶ್ಯಗಳಲ್ಲಿ ಕೆಲವು ಈ ಸಿನಿಮಾದಲ್ಲಿವೆ ಎಂದು ಮೆಚ್ಚಿಕೊಂಡಿರುವ ಅವರು, ಚಿತ್ರದ ಭವ್ಯತೆಯನ್ನೂ ಮೀರಿಸುವ ಅಂಶವೆಂದರೆ ನಿತೇಶ್ ತಿವಾರಿ ಅವರ ನಿರ್ದೇಶನ ಎಂದು ಹೇಳಿದ್ದಾರೆ.
ಬೃಹತ್ ಬಜೆಟ್, ಅತ್ಯಾಧುನಿಕ ವಿಎಫ್ಎಕ್ಸ್, ಅದ್ದೂರಿ ಸೆಟ್ಗಳು ಇವೆಲ್ಲದರ ನಡುವೆ ನಿರ್ದೇಶಕನ ಹಿಡಿತ ಅತ್ಯಂತ ಮುಖ್ಯ. ಆ ಜವಾಬ್ದಾರಿಯನ್ನು ನಿತೇಶ್ ತಿವಾರಿ ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನುವುದು ಅವರ ಅಭಿಪ್ರಾಯ.
ವಿಶೇಷವಾಗಿ ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿಬಂದಿರುವ ಸಾಹಸ ದೃಶ್ಯಗಳು ಭಾರತೀಯ ಸಿನಿಮಾದ ತಾಂತ್ರಿಕ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಂತಿವೆ ಎಂದು ಪ್ರಶಂಸಿಸಿದ್ದಾರೆ.
ಶ್ರೀರಾಮನಾಗಿ ರಣಬೀರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, … ಪಾತ್ರಗಳಿಗೆ ಜೀವ ತುಂಬಿದ ಕಲಾವಿದರು
ಈ ಚಿತ್ರದ ಮತ್ತೊಂದು ದೊಡ್ಡ ಆಕರ್ಷಣೆ ಪಾತ್ರವರ್ಗ.
ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ವೀಕ್ಷಿಸಿದವರ ಮೊದಲ ಪ್ರತಿಕ್ರಿಯೆಗಳಲ್ಲಿ ಈ ಮೂವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರಕ್ಕೆ ಪ್ರಶಂಸೆ ವ್ಯಕ್ತವಾಗಿದ್ದರೆ, ರಾವಣನಾಗಿ ಯಶ್ ತಮ್ಮ ಗಂಭೀರ ವ್ಯಕ್ತಿತ್ವ ಮತ್ತು ಪ್ರಭಾವಶಾಲಿ ಅಭಿನಯದಿಂದ ಗಮನ ಸೆಳೆದಿದ್ದಾರೆ. ಸಾಯಿ ಪಲ್ಲವಿ ಅವರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಅದರಲ್ಲೂ ಲಕ್ಷ್ಮಣನಾಗಿ ನಟಿಸಿರುವ ರವಿ ದುಬೆ ಅವರನ್ನು ಆಶಿಶ್ ಚಂಚಲಾನಿ ವಿಶೇಷವಾಗಿ ಹೊಗಳಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ಅವರು ಉತ್ತಮ ಅಭಿನಯ ನೀಡಿರುವುದರ ಜೊತೆಗೆ, ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಸಹಜವಾದ ಹಾಸ್ಯವೂ ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಿದ್ದಾರೆ.
ಮಹಾಕಾವ್ಯವನ್ನು ತೆರೆಗೆ ತರುವಾಗ ಪಾತ್ರಗಳಿಗೆ ಸರಿಯಾದ ಕಲಾವಿದರನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಆ ವಿಚಾರದಲ್ಲಿಯೂ ಚಿತ್ರತಂಡ ಯಶಸ್ವಿಯಾಗಿದೆ ಎನ್ನುವುದು ಈ ಮೊದಲ ಪ್ರತಿಕ್ರಿಯೆಗಳ ಸಾರಾಂಶ.
ಜಟಾಯುವಿನ ಹೋರಾಟ ಕಣ್ಣೀರು ತರಿಸಿತಂತೆ!
‘ರಾಮಾಯಣ’ ಕೇವಲ ದೃಶ್ಯವೈಭವ ಮತ್ತು ಸಾಹಸಕ್ಕೆ ಸೀಮಿತವಾಗಿಲ್ಲ ಎನ್ನುವುದಕ್ಕೆ ಜಟಾಯುವಿನ ಹೋರಾಟದ ಕುರಿತು ಬಂದಿರುವ ಪ್ರತಿಕ್ರಿಯೆಯೇ ಸಾಕ್ಷಿ.
ಸಿನಿಮಾದ ಜಟಾಯು ಹೋರಾಟದ ದೃಶ್ಯವನ್ನು ನೋಡಿದಾಗ ತಾವು ಭಾವುಕರಾಗಿ ಕಣ್ಣೀರು ಹಾಕಿದ್ದಾಗಿ ಆಶಿಶ್ ಚಂಚಲಾನಿ ತಿಳಿಸಿದ್ದಾರೆ.
ರಾಮಾಯಣದಂತಹ ಮಹಾಕಾವ್ಯದಲ್ಲಿ ಶೌರ್ಯಕ್ಕೆ ಎಷ್ಟು ಮಹತ್ವವಿದೆಯೋ, ತ್ಯಾಗ ಮತ್ತು ಧರ್ಮನಿಷ್ಠೆಗೂ ಅಷ್ಟೇ ಮಹತ್ವವಿದೆ. ಜಟಾಯುವಿನಂತಹ ಪಾತ್ರದ ಹೋರಾಟ ಪ್ರೇಕ್ಷಕರ ಮನಸ್ಸನ್ನು ತಟ್ಟಿರುವುದು ಚಿತ್ರದ ಭಾವನಾತ್ಮಕ ನಿರೂಪಣೆಯ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ.
ಚಿತ್ರದ ಅದ್ದೂರಿತನದ ನಡುವೆಯೂ ಇಂತಹ ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರನ್ನು ತಲುಪಿರುವುದು ಸಂತಸದ ಸಂಗತಿ.
ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡ!
ತ್ರದ ಪ್ರದರ್ಶನದ ನಂತರ ಛಾಯಾಗ್ರಾಹಕ ಹಾಗೂ ನಿರ್ದೇಶಕ ಧ್ರುವಲ್ ಪಟೇಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ರಾಮಾಯಣ’ ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡ ನಿರ್ಮಿಸುವ ಸಿನಿಮಾ ಎಂದು ಬಣ್ಣಿಸಿದ್ದಾರೆ.
ದೊಡ್ಡ ಪರದೆಯಲ್ಲಿಯೇ ಅನುಭವಿಸಬೇಕಾದ ಚಿತ್ರವಿದು ಎನ್ನುವುದು ಅವರ ಅಭಿಪ್ರಾಯ.
ಚಿತ್ರದ ದೃಶ್ಯವೈಭವಕ್ಕೆ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವು ಪ್ರೇಕ್ಷಕರು ಇದರ ಭವ್ಯತೆಯನ್ನು ಹಾಲಿವುಡ್ನ ಪ್ರಸಿದ್ಧ ಮಹಾಕಾವ್ಯಾಧಾರಿತ ಫ್ಯಾಂಟಸಿ ಚಿತ್ರಗಳ ಜೊತೆ ಹೋಲಿಸಿದ್ದಾರೆ.
ಭಾರತೀಯ ಕಥೆಯೊಂದನ್ನು ಜಾಗತಿಕ ಮಟ್ಟದ ಸಿನಿಮಾ ಅನುಭವವಾಗಿ ಕಟ್ಟಿಕೊಡುವ ಚಿತ್ರತಂಡದ ಮಹತ್ವಾಕಾಂಕ್ಷೆ ಈ ಪ್ರತಿಕ್ರಿಯೆಗಳಿಂದ ಇನ್ನಷ್ಟು ಗಮನ ಸೆಳೆಯುತ್ತಿದೆ.
ಬೆಳ್ಳಿತೆರೆಯ ಮೇಲೆ ಪ್ರಭು ಶ್ರೀರಾಮನ ವೈಭವ ಕಾಣಲು ಕ್ಷಣಗಣನೆ!
ಎಷ್ಟೇ ತಂತ್ರಜ್ಞಾನ ಬೆಳೆದರೂ ರಾಮಾಯಣದ ನಿಜವಾದ ಶಕ್ತಿ ಅದರ ಪಾತ್ರಗಳು, ಭಕ್ತಿ ಮತ್ತು ಜೀವನಮೌಲ್ಯಗಳಲ್ಲಿದೆ.
ಧರ್ಮಕ್ಕಾಗಿ ಶ್ರೀರಾಮ ನಡೆಸುವ ಹೋರಾಟ, ಸೀತಾಮಾತೆಯ ಮೇಲಿನ ಪ್ರೀತಿ, ಸಹೋದರರ ನಡುವಿನ ಬಾಂಧವ್ಯ, ಹನುಮಂತನ ಅಚಲ ಭಕ್ತಿ… ಇವೆಲ್ಲವೂ ಈ ಮಹಾಕಾವ್ಯವನ್ನು ತಲೆಮಾರುಗಳಿಂದ ಜನರ ಮನಸ್ಸಿನಲ್ಲಿ ಜೀವಂತವಾಗಿರಿಸಿವೆ.
ಈಗ ಅದೇ ಮಹಾಕಾವ್ಯವನ್ನು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತಷ್ಟು ಭವ್ಯವಾಗಿ ಪರಿಚಯಿಸುವ ಅವಕಾಶ ಭಾರತೀಯ ಚಿತ್ರರಂಗದ ಮುಂದಿದೆ.
ಮುಂಬೈ ಪ್ರೀಮಿಯರ್ನಲ್ಲಿ ವ್ಯಕ್ತವಾಗಿರುವ ಮೆಚ್ಚುಗೆಯ ಮಾತುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ವಿಶೇಷವಾಗಿ ನಿರ್ದೇಶನ, ಅಭಿನಯ, ಸಾಹಸ ಮತ್ತು ದೃಶ್ಯವೈಭವದ ಕುರಿತು ಬಂದಿರುವ ಪ್ರಶಂಸೆಗಳು ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿವೆ.
ಶ್ರೀರಾಮನ ಮಹಿಮೆಯನ್ನು ಸಾರುವ ಮಹಾಕಾವ್ಯ, ಭಾರತೀಯ ಚಿತ್ರರಂಗದ ತಾಂತ್ರಿಕ ಸಾಮರ್ಥ್ಯದೊಂದಿಗೆ ಬೆಳ್ಳಿತೆರೆಯ ಮೇಲೆ ಮೂಡಿಬರುತ್ತಿದೆ. ಭಕ್ತಿಯ ಅನುಭವಕ್ಕೂ ಸಿನಿಮಾ ವೈಭವಕ್ಕೂ ಸಾಕ್ಷಿಯಾಗಲು ನವೆಂಬರ್ 5ರಿಂದ ಚಿತ್ರಮಂದಿರಗಳು ಸಜ್ಜಾಗುತ್ತಿವೆ!