
ಒಳ್ಳೆ ಕ್ವಾಲಿಟಿ ಪೋಸ್ಟರ್ ಗಳು ಹಾಗೂ ಗಮನ ಸೆಳೆಯುವ ಹಾಡು ಟೀಸರ್ಗಳ ಮೂಲಕ ಭರವಸೆ ಮೂಡಿಸಿರುವ ‘ಪೀಟರ್’ ಚಿತ್ರ ಏಪ್ರಿಲ್ 10ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ‘ದೂರದರ್ಶನ’ ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಸುಕೇಶ್, ಇದೀಗ ಈ ಹೊಸ ಪ್ರಯತ್ನವಾಗಿ ‘ಪೀಟರ್’ ಸಿನಿಮಾವನ್ನು ರೂಪಿಸಿದ್ದಾರೆ.
ಈ ಚಿತ್ರವನ್ನು ರವಿ ಹಿರೇಮಠ ಮತ್ತು ರಾಕೇಶ್ ಹೆಗ್ಡೆ ನಿರ್ಮಿಸಿದ್ದು, ರಾಜೇಶ್ ಧ್ರುವ, ಜಾನ್ವಿ ರಾಯಲ ಹಾಗೂ ರವೀಶಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಘು ಪಾಂಡೇಶ್ವರ, ಪ್ರತಿಮಾ ನಾಯಕ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗದೆ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ.
ಚಿತ್ರದ ಕಥೆ ಕುರಿತು ನಿರ್ದೇಶಕ ಸುಕೇಶ್ ಮಾತನಾಡುತ್ತಾ, “ಇದು ಪ್ರತಿಯೊಂದು ಹಳ್ಳಿಯಲ್ಲೂ ನಡೆಯಬಹುದಾದ ಕಥೆ. ತುಂಬಾ ತೀವ್ರತೆಯಿರುವ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಇದು. ಇಡೀ ಕಥಾವಸ್ತು ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುತ್ತದೆ. ಮಿಂಚು, ಗುಡುಗು ಕೂಡಾ ಕಥೆಯ ಭಾಗವಾಗಿವೆ” ಎಂದು ತಿಳಿಸಿದ್ದಾರೆ.
ಮಡಿಕೇರಿ ಮತ್ತು ಭಾಗಮಂಡಲ ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಧ್ವನಿ, ದೃಶ್ಯ ವೈಭವ ಸೇರಿದಂತೆ ಎಲ್ಲಾ ಅಂಶಗಳಲ್ಲಿ ಹೊಸ ಅನುಭವ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ವಿಭಿನ್ನ ಅನುಭವಕ್ಕಾಗಿ ‘ಪೀಟರ್’ ಸಿನಿಮಾವನ್ನು ನೋಡಬಹುದು ಎಂದು ಚಿತ್ರತಂಡ ಹೇಳಿದೆ.