ಡಿಸೆಂಬರ್ 11ಕ್ಕೆ ಗೀತಾ ಪಿಕ್ಚರ್ಸ್‌ನ ನಿಗೂಢ ಥ್ರಿಲ್ಲರ್ ‘ಪಬ್ಬಾರ್’ ರಿಲೀಸ್: ‘ಶಾಖಾಹಾರಿ’ ನಿರ್ದೇಶಕನ ಮತ್ತೊಂದು ಕುತೂಹಲಕಾರಿ ಕಥಾಲೋಕ

ಬೆಂಗಳೂರು: ಗೀತಾ ಶಿವರಾಜ್‌ಕುಮಾರ್ ಸಾರಥ್ಯದ ಪ್ರತಿಷ್ಠಿತ ‘ಗೀತಾ ಪಿಕ್ಚರ್ಸ್’ ಲಾಂಛನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ‘ಪಬ್ಬಾರ್’ ಬಿಡುಗಡೆಗೆ ದಿನ ನಿಗದಿಯಾಗಿದೆ. ವಿಶಿಷ್ಟ ಕಥಾವಸ್ತು ಹಾಗೂ ರಹಸ್ಯಮಯ ಪೋಸ್ಟರ್‌ಗಳಿಂದ ಗಮನ ಸೆಳೆದಿರುವ ಈ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ತಮ್ಮ ಮೊದಲ ಚಿತ್ರ ‘ಶಾಖಾಹಾರಿ’ ಮೂಲಕ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ಸಂದೀಪ್ ಸುಂಕದ್, ಈ ಚಿತ್ರದ ಮೂಲಕ ಮತ್ತೆ ಅಪರಾಧ ಮತ್ತು ರಹಸ್ಯದ ಎಳೆಗಳನ್ನು ತೆರೆದಿಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್ ಮತ್ತು ಅಮೃತಾ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಅಯ್ಯಪ್ಪ ಹಾಗೂ ಖ್ಯಾತ ಬಹುಭಾಷಾ ನಟ ಸಯಾಜಿ ಶಿಂಧೆ ತಾರಾಗಣದಲ್ಲಿದ್ದಾರೆ.

ಸಾಮಾನ್ಯವಾಗಿ ಬರುವ ಚಿಕ್ಕ ಟೀಸರ್‌ಗಳ ಬದಲು, ಚಿತ್ರತಂಡ ಬಿಡುಗಡೆ ಮಾಡಿರುವ 4 ನಿಮಿಷಗಳ ಸುದೀರ್ಘ ಪರಿಚಯಾತ್ಮಕ ವಿಡಿಯೋ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಕಥೆಯ ಆಳ, ಪಾತ್ರಗಳ ಗಾಂಭೀರ್ಯ ಹಾಗೂ ನಿಗೂಢ ವಾತಾವರಣವನ್ನು ಪರಿಚಯಿಸುವ ಈ ವಿಡಿಯೋ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನೂ, ನಿರೀಕ್ಷೆಗಳನ್ನೂ ಹುಟ್ಟುಹಾಕಿದೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಕುತೂಹಲ ಮೂಡಿಸಿದೆ. ಹಿಮಾಲಯದ ಮಂಜು ಮುಸುಕಿದ ಪರ್ವತಗಳು, ಬೌದ್ಧ ಪ್ರಾರ್ಥನಾ ಧ್ವಜಗಳು, ಕಣಿವೆಯ ಸಣ್ಣ ವಸತಿ ಪ್ರದೇಶ, ನಿಗೂಢ ಜ್ಯಾಮಿತೀಯ ಚಿಹ್ನೆಗಳು ಮತ್ತು ಪೊಲೀಸರ ಸನ್ನಿವೇಶಗಳು ಕಥೆಯ ವಿಶಿಷ್ಟತೆಯನ್ನು ಸೂಚಿಸುತ್ತವೆ. ವಿಶೇಷವಾಗಿ ಧೀರನ್ ರಾಮ್‌ಕುಮಾರ್ ಅವರ ಎರಡು ಭಿನ್ನ ರೂಪಗಳು ಪೋಸ್ಟರ್‌ನಲ್ಲಿದ್ದು, ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಚರ್ಚೆಯನ್ನೂ ಆರಂಭಿಸಿವೆ.

ವಿಭಿನ್ನ ಕಥೆಗಳ ಆಯ್ಕೆ ಮತ್ತು ಗುಣಮಟ್ಟದ ನಿರ್ಮಾಣಕ್ಕೆ ಹೆಸರಾಗಿರುವ ಗೀತಾ ಪಿಕ್ಚರ್ಸ್ ಸಂಸ್ಥೆಯಿಂದ ಬರುತ್ತಿರುವ ‘ಪಬ್ಬಾರ್’, ಸ್ಯಾಂಡಲ್‌ವುಡ್‌ನ ಈ ವರ್ಷಾಂತ್ಯದ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ನಿರೀಕ್ಷೆ ಹುಟ್ಟುಹಾಕಿದೆ.

Leave a Reply

Your email address will not be published. Required fields are marked *