“ಫಾದರ್” ಡಬ್ಬಿಂಗ್ ಮುಕ್ತಾಯ: ತಂದೆ–ಮಗ ಬಾಂಧವ್ಯದ ಭಾವುಕ ಪಯಣಕ್ಕೆ ಸಜ್ಜಾದ ಚಿತ್ರ💥

ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ, ಅಪರೂಪದ ತಂದೆ–ಮಗ ಕಥಾಹಂದರ ಹೊಂದಿರುವ ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಬಹು ನಿರೀಕ್ಷಿತ “ಫಾದರ್” ಚಿತ್ರದ ಮಾತಿನ ಜೋಡಣೆ (ಡಬ್ಬಿಂಗ್) ಕೆಲಸ ಈಗ ಸಂಪೂರ್ಣಗೊಂಡಿದೆ. ಪ್ರಕಾಶ್ ರಾಜ್, ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ, ತನ್ನ ಕಥೆಯ ಮೂಲಕವೇ ಗಮನ ಸೆಳೆಯಲು ರೂಪುಗೊಂಡಿದೆ.

ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿರುವ ತಮ್ಮ ಸ್ಟುಡಿಯೋದಲ್ಲೇ “ಫಾದರ್” ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ. ಇನ್ನು, ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್ ಮಾಕ್ಟೇಲ್ ೩” ಭರ್ಜರಿ ಯಶಸ್ಸಿನ ನಂತರ, ಅವರ ಮುಂದಿನ ಚಿತ್ರವಾದ “ಫಾದರ್” ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇದೇ ಹಿಟ್ ಹವಾ ನಡುವೆ, ಚಿತ್ರದ ಪ್ರಚಾರ ಕಾರ್ಯಕ್ಕೂ ಚಾಲನೆ ಸಿಕ್ಕಿದ್ದು, ಬೇಗನೆ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಜೋರಾಗಿದೆ.

ಈಗಾಗಲೇ ಬಿಡುಗಡೆಯಾದ ಫಸ್ಟ್ ಲುಕ್ ಹಾಗೂ ಸುದೀಪ್ ಅನಾವರಣಗೊಳಿಸಿದ ಟೀಸರ್ ಸಿನಿಪ್ರಿಯರ ಮನ ಗೆದ್ದಿದೆ. ಆರ್.ಸಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ “ಫಾದರ್” ಚಿತ್ರವು, ನೋಡುಗರನ್ನು ಭಾವುಕ ಪಯಣಕ್ಕೆ ಕರೆದೊಯ್ಯುವ ಹೃದಯಸ್ಪರ್ಶಿ ಕಥೆಯಾಗಲಿದೆ ಎನ್ನುವ ಭರವಸೆ ಇದೆ.

“ಫಾದರ್” ಅಂದರೆ ಒಂದು ಭಾವನೆ, ಒಂದು ಶಕ್ತಿ. ಆ ಪಾತ್ರಕ್ಕೆ ಜೀವ ತುಂಬುವಲ್ಲಿ ಪ್ರಕಾಶ್ ರಾಜ್ ಎಂದಿನಂತೆ ತಮ್ಮ ಅದ್ಭುತ ನಟನೆ ಮೂಲಕ ಮಿಂಚಲಿದ್ದಾರೆ. ಡಾರ್ಲಿಂಗ್ ಕೃಷ್ಣ ಕೂಡ ಚಿತ್ರದ ಪ್ರಮುಖ ಆಕರ್ಷಣೆ. ಇವರಿಬ್ಬರ ಕಾಂಬಿನೇಷನ್ ಈಗಾಗಲೇ ಸಿನಿರಸಿಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. “ಲವ್ ಮಾಕ್ಟೇಲ್” ಜೋಡಿ ಇಲ್ಲಿ ಮತ್ತೆ ಒಂದಾಗಿರುವುದು ವಿಶೇಷವಾಗಿದ್ದು, ಅಮೃತಾ ಅಯ್ಯಂಗಾರ್ ಅವರ ಹಾಜರಾತಿ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಲಿದೆ.

ತಂದೆ–ಮಗನ ಬಾಂಧವ್ಯವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿರುವ “ಫಾದರ್” ಚಿತ್ರ, ಈ ವರ್ಷದ ಹಿಟ್ ಲಿಸ್ಟ್‌ಗೆ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಲಾಗುತ್ತಿದೆ. ಈಗಾಗಲೇ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮುಂಬೈನ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಅರ್ಪಣೆಯಲ್ಲಿ, ಅಲಂಕಾರ್ ಪಾಂಡ್ಯನ್ ಸಹಯೋಗದೊಂದಿಗೆ ಆರ್.ಸಿ. ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ರಾಜ್ ಮೋಹನ್ ನಿರ್ದೇಶನದ ಈ ಚಿತ್ರಕ್ಕೆ ಮಂಜು ಮಾಂಡವ್ಯ ಅವರ ಹರಿತವಾದ ಸಂಭಾಷಣೆ ಇದೆ. ಸುಜ್ಞಾನ್ ಅವರ ಛಾಯಾಗ್ರಹಣ ಹಾಗೂ ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿವೆ.

Leave a Reply

Your email address will not be published. Required fields are marked *