
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ನಿರ್ದೇಶಕ ದುನಿಯಾ ಸೂರಿ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರ ಸದ್ಯಕ್ಕೆ ಮುಂದೂಡಲ್ಪಟ್ಟಿದೆ.
ಹಲವು ತಿಂಗಳುಗಳ ಸಿದ್ಧತೆ, ಕಥೆ, ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದರೂ, ಈ ಪ್ರಾಜೆಕ್ಟ್ನಿಂದ ಸೂರಿ ಹೊರಬಂದಿದ್ದಾರೆ.
ಈ ಬಗ್ಗೆ ಸ್ವತಃ ಸೂರಿಯವರೇ ಪ್ರತಿಕ್ರಿಯಿಸಿದ್ದು, “ಸಿನಿಮಾ ನಿಂತಿಲ್ಲ. ಆದರೆ ಸದ್ಯಕ್ಕೆ ನಾನು ಬೇರೆ ಪ್ರಾಜೆಕ್ಟ್ ಕಡೆ ಗಮನ ಹರಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಸೂರಿ ಹೇಳುವಂತೆ, ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಮೂಲಕ ಧ್ರುವ ಸರ್ಜಾ ಜೊತೆ ಪರಿಚಯವಾಗಿ, ನಂತರ ತಂಡ ಕಥೆ, ಬೌಂಡ್ ಸ್ಕ್ರಿಪ್ಟ್, ಪಾತ್ರಗಳ ಸ್ಕೆಚ್, ಬಜೆಟ್, ಶೆಡ್ಯೂಲ್ ಸೇರಿದಂತೆ ಎಲ್ಲಾ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಿತ್ತು. ನಿರ್ಮಾಣ ಸಂಸ್ಥೆಯೊಂದಿಗೂ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಶೂಟಿಂಗ್ ಆರಂಭಿಸಲು ತಂಡ ಸಂಪೂರ್ಣ ಸಜ್ಜಾಗಿತ್ತು. ಧ್ರುವ ಜೊತೆ ಸ್ಕ್ರಿಪ್ಟ್ ರೀಡಿಂಗ್ ಸೆಷನ್ಗಳನ್ನೂ ನಡೆಸಲಾಗಿತ್ತು.
ಆದರೆ ಧ್ರುವ ಸರ್ಜಾ ಅವರ ಈಗಿನ ಸಿನಿಮಾ ‘ಕ್ರಿಮಿನಲ್’ ಚಿತ್ರೀಕರಣ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಹೊಸ ಸಿನಿಮಾ ಆರಂಭಿಸುವುದು ಮತ್ತಷ್ಟು ತಡವಾಗುತ್ತಿದೆ. ಇದೇ ಕಾರಣದಿಂದ ತಮ್ಮ ತಂಡದ ಸಮಯ ಹಾಗೂ ಹೂಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಸೂರಿ ಹೇಳಿದ್ದಾರೆ.
ಆದರೂ ಈ ಕಥೆ ಧ್ರುವ ಸರ್ಜಾಗಾಗಿಯೇ ಬರೆದದ್ದು ಎಂಬುದನ್ನು ಸೂರಿ ಸ್ಪಷ್ಟಪಡಿಸಿದ್ದಾರೆ. “ಧ್ರುವ ಜೊತೆ ಈ ಸಿನಿಮಾ ಮಾಡುವ ಆಸೆ ಇನ್ನೂ ಇದೆ. ಆದರೆ ಅವರು ಸಂಪೂರ್ಣ ಸಮಯ ಕೊಡಬಹುದಾದ ಸಂದರ್ಭ ಬಂದಾಗ ಮಾತ್ರ ಈ ಸಿನಿಮಾ ಶುರುವಾಗಬೇಕು. ಅವರು ತಮ್ಮ ಈಗಿನ ಜವಾಬ್ದಾರಿಗಳನ್ನು ಮುಗಿಸಲಿ, ನಂತರ ಮತ್ತೆ ಇದೇ ಪ್ರಾಜೆಕ್ಟ್ಗೆ ಮರಳುತ್ತೇವೆ” ಎಂದು ಹೇಳಿದ್ದಾರೆ.
ಇದೀಗ ಸೂರಿ ತಮ್ಮ ಬಹುಕಾಲದ ಕನಸಿನ ಪ್ರಾಜೆಕ್ಟ್ ‘ಕಾಗೆ ಬಂಗಾರ’ ಕಡೆ ಗಮನ ಹರಿಸುತ್ತಿದ್ದು, ಶೀಘ್ರದಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಇಂದಿನ ಸಿನಿಮಾ ಪ್ರೇಕ್ಷಕರ ಅಭಿರುಚಿ ಬಗ್ಗೆಯೂ ಮಾತನಾಡಿರುವ ಸೂರಿ, “ಇವತ್ತು ಪ್ರೇಕ್ಷಕರು ತುಂಬಾ ಜಾಗೃತರಾಗಿದ್ದಾರೆ. ಕಂಟೆಂಟ್ನೇ ಮುಖ್ಯ. ಕೇವಲ ಹೈಪ್ ಅಥವಾ ಸುಳ್ಳು ಭರವಸೆಯಿಂದ ಸಿನಿಮಾಗಳನ್ನು ಮಾರಲು ಸಾಧ್ಯವಿಲ್ಲ. ಪ್ರಾಮಾಣಿಕ ಕಥೆ ಮತ್ತು ಉತ್ತಮ ಸಿನಿಮಾ ನೀಡುವುದು ಚಿತ್ರರಂಗದ ಜವಾಬ್ದಾರಿ” ಎಂದು ಅಭಿಪ್ರಾಯಪಟ್ಟಿದ್ದಾರೆ.