
ಬೆಂಗಳೂರು: ‘ಉಪಾಧ್ಯಕ್ಷ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೇ 27ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರತಂಡದ ವಿವರ:
- ನಿರ್ಮಾಣ: ಅನ್ನಪೂರ್ಣ ಎ.ಪಿ. ಅರ್ಜುನ್ (ಸಹ ನಿರ್ಮಾಣ: ಆರ್.ಕೆ. ರವಿಕುಮಾರ್)
- ಕಥೆ, ಚಿತ್ರಕಥೆ, ಸಾಹಿತ್ಯ: ಎ.ಪಿ. ಅರ್ಜುನ್ (ಸಂಭಾಷಣೆ: ಪ್ರಶಾಂತ್ ರಾಜಪ್ಪ, ವಿಜಯ್ ಈಶ್ವರ್)
- ನಿರ್ದೇಶನ: ವಿಜಯ್ ಎಸ್. ಸ್ವಾಮಿ (ಚೊಚ್ಚಲ ನಿರ್ದೇಶನ)
- ಸಂಗೀತ: ಅರ್ಜುನ್ ಜನ್ಯ
- ತಾರಾಗಣ: ಚಿಕ್ಕಣ್ಣ, ವಂದಿತಾ, ತಾರಾ, ಮಿತ್ರ, ಶಿವರಾಜ್ ಕೆ.ಆರ್. ಪೇಟೆ, ಧರ್ಮಣ್ಣ, ಕುರಿ ಪ್ರತಾಪ್.
ಚಿಕ್ಕಣ್ಣನಿಗೆ ‘ಸೂಪರ್ ಸ್ಟಾರ್’ ಭವಿಷ್ಯ ನುಡಿದ ಶಿವಣ್ಣ: ಟ್ರೇಲರ್ ವೀಕ್ಷಿಸಿ ಮಾತನಾಡಿದ ಶಿವರಾಜ್ಕುಮಾರ್, ಚಿಕ್ಕಣ್ಣನ ನೃತ್ಯ ಮತ್ತು ಅಭಿನಯವನ್ನು ಮನಸಾರೆ ಕೊಂಡಾಡಿದರು. “ಚಿಕ್ಕಣ್ಣ ಈ ಚಿತ್ರದಲ್ಲಿ ತುಂಬಾ ಲೀಲಾಜಾಲವಾಗಿ ಡ್ಯಾನ್ಸ್ ಮಾಡಿದ್ದು, ಅವರನ್ನು ನೋಡಿದರೆ ಪ್ರಭುದೇವ ನೆನಪಾಗುತ್ತಾರೆ. ಅವರ ಹಾಸ್ಯದಲ್ಲಿ ಆಡಂಬರವಿಲ್ಲ, ಬಹಳ ಸಟಲ್ ಆಗಿ ನಟಿಸುತ್ತಾರೆ. ಬರೆದಿಟ್ಟುಕೊಳ್ಳಿ, ಇನ್ನೆರಡು-ಮೂರು ವರ್ಷಗಳಲ್ಲಿ ಚಿಕ್ಕಣ್ಣ ದೊಡ್ಡ ಸೂಪರ್ ಸ್ಟಾರ್ ಆಗುತ್ತಾರೆ” ಎಂದು ಭವಿಷ್ಯ ನುಡಿದರು.
ತಾಯಿ ಸೆಂಟಿಮೆಂಟ್ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಅವರ ತಾಯಂದಿರ ಫೋಟೋಗಳನ್ನು ಬಳಸಿರುವುದಕ್ಕೆ ಭಾವುಕರಾದ ಶಿವಣ್ಣ, ಅಮ್ಮ ಹೊಡೆಯಲು ಬಂದಾಗ 20 ಅಡಿ ಮಹಡಿಯಿಂದ ಜಿಗಿದಿದ್ದ ತಮ್ಮ ಬಾಲ್ಯದ ತುಂಟಾಟವನ್ನೂ ನೆನೆದರು. ನಾಯಕಿ ವಂದಿತಾ ಹಾಗೂ ತಾರಾ ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ತಂದೆ-ತಾಯಿ ಮಾಡಿದ ಪುಣ್ಯ: ಚಿಕ್ಕಣ್ಣ ಶಿವಣ್ಣನ ಮಾತುಗಳಿಗೆ ಭಾವುಕರಾದ ಚಿಕ್ಕಣ್ಣ, “ಅಣ್ಣಾವ್ರ ಮಗನ ಬಾಯಲ್ಲಿ ಇಂತಹ ಮಾತು ಕೇಳಿರುವುದು ನಮ್ಮ ತಂದೆ-ತಾಯಿ ಮಾಡಿದ ಪುಣ್ಯ. ಈ ಮಾತು ಕೇಳಿದಾಗಲೇ ನಾನು ಸೂಪರ್ ಸ್ಟಾರ್ ಆದಷ್ಟೇ ಖುಷಿಯಾಯಿತು” ಎಂದರು. ಮುಂದುವರಿದು, “ಇದು ಕೇವಲ ಕಾಮಿಡಿ ಸಿನಿಮಾವಲ್ಲ, ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಜೀವನದ ನೈಜ ಕಥೆ. ಇದೇ 27ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಇಷ್ಟವಾದರೆ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಿ” ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು.
ಇದು ರಾಯರ ಪವಾಡ: ಎ.ಪಿ. ಅರ್ಜುನ್ ಚಿತ್ರ ನಿರ್ಮಾಣದ ಹಾದಿ ನೆನೆದ ಎ.ಪಿ. ಅರ್ಜುನ್, “ಚಿತ್ರ ಶುರು ಮಾಡಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವೇ ಕಾರಣ. ಶೂಟಿಂಗ್ ಸಮಯದಲ್ಲಿ ಎಷ್ಟೇ ಕಷ್ಟ ಬಂದರೂ ಪ್ರತಿ ಗುರುವಾರ ಹಣದ ವ್ಯವಸ್ಥೆಯಾಗುತ್ತಿತ್ತು. ನನಗೆ ಬೆನ್ನೆಲುಬಾಗಿ ನಿಂತ ಆರ್.ಕೆ. ರವಿಕುಮಾರ್, ಸಚಿವ ಸಂತೋಷ್ ಲಾಡ್ ಸೇರಿದಂತೆ ಚಿತ್ರಕ್ಕೆ ಸಹಕರಿಸಿದ ಅನೇಕರ ಹೆಸರುಗಳು ‘ರಾ’ ಅಕ್ಷರದಿಂದಲೇ ಆರಂಭವಾಗಿರುವುದು ರಾಯರ ಪವಾಡ” ಎಂದು ಸ್ಮರಿಸಿದರು.

“ನನಗೆ ಸಣ್ಣ-ದೊಡ್ಡ ಸಿನಿಮಾ ಎಂಬ ಭೇದವಿಲ್ಲ. ಈ ಚಿತ್ರಕ್ಕೆ ಚಿಕ್ಕಣ್ಣನೇ ದೊಡ್ಡ ಸ್ಟಾರ್. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದೆ ಅದ್ದೂರಿಯಾಗಿ ಸಿನಿಮಾ ಮಾಡಿದ್ದೇವೆ” ಎಂದು ಅರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.