
ಕೆಲವು ಸಿನಿಮಾಗಳನ್ನು ನೋಡೋಣ ಅಂತ ಅನಿಸುವುದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಮುಖ್ಯವಾಗಿ ಚಿತ್ರದಲ್ಲಿರೋ ಸ್ಟಾರ್ ಪವರ್,
ಅವು ಸೃಷ್ಟಿಸಿರುವ ವಾತಾವರಣ, ಹುಟ್ಸಿರೋ ಕುತೂಹಲ, ಪಾತ್ರಗಳು ಮತ್ತು ಅದರ ಹಿಂದಿರುವ ದೊಡ್ಡ ಕನಸು ಇವೆಲ್ಲ ಪ್ರೇಕ್ಷಕರಿಗೆ ತಾಕಿದಾಗ ಸಿನಿಮಾ ಮೇಲೆ ತುಸು ಹೆಚ್ಚೆ ಆಸಕ್ತಿ ಇಟ್ಟುಕೊಳ್ಳುವುದು ಸಹಜ.
ಯಶ್ ಅಭಿನಯದ, ಗೀತು ಮೋಹನ್ದಾಸ್ ನಿರ್ದೇಶನದ ‘TOXIC: A Fairy Tale for Grown-Ups’ ಕೂಡ ಅಂಥದ್ದೇ ಒಂದು ಸಿನಿಮಾ.
ಹೆಸರೇ ಹೇಳುವಂತೆ ಇದು ಮಕ್ಕಳಿಗಾಗಿ ಇರುವ ಫೇರಿ ಟೇಲ್ ಅಲ್ಲ.
ದೊಡ್ಡವರ ಜಗತ್ತಿನ ಆಸೆ, ಅಧಿಕಾರ, ದ್ರೋಹ, ಹಿಂಸೆ ಮತ್ತು ಸಂಬಂಧಗಳ ನಡುವೆ ನಡೆಯುವ ಒಂದು ಕತ್ತಲೆಯ ಕಥೆ.
ಹಾಗಾದರೆ TOXIC ಅನ್ನು ಥಿಯೇಟರ್ನಲ್ಲಿ ನೋಡಲೇಬೇಕು ಅನ್ನೋದಕ್ಕೆ ಇರೋ 8 ಕಾರಣಗಳು ಯಾವುವು?
- ಗೀತು ಮೋಹನ್ದಾಸ್ ವಿಭಿನ್ನ ದೃಷ್ಟಿಕೋನದಲ್ಲಿ ಯಶ್
ಮೊದಲ ಕಾರಣವೇ ನಿರ್ದೇಶಕಿ ಗೀತು ಮೋಹನ್ದಾಸ್.
ಒಂದು ಕಡೆ ತಮ್ಮದೇ ಆದ ವಿಭಿನ್ನ ಕಥೆ ಹೇಳುವ ಶೈಲಿಗೆ ಹೆಸರಾಗಿರುವ ನಿರ್ದೇಶಕಿ. ಮತ್ತೊಂದು ಕಡೆ ದೇಶಾದ್ಯಂತ ದೊಡ್ಡ ಮಾಸ್ ಇಮೇಜ್ ಹೊಂದಿರುವ ಯಶ್.
ಈ ಇಬ್ಬರ ಕಾಂಬಿನೇಷನ್ ಹೇಗಿರಬಹುದು ಅನ್ನೋ ಕುತೂಹಲವೇ ದೊಡ್ಡದು.
ಯಶ್ ಅವರನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ.
ಆದರೆ…
ಗೀತು ಮೋಹನ್ದಾಸ್ ಅವರ ಕಣ್ಣಲ್ಲಿ ಕಾಣಿಸುವ ಯಶ್ ಹೇಗಿರುತ್ತಾರೆ?
ಅದನ್ನು ನೋಡಲು TOXICಗೆ ಹೋಗಬೇಕು.
- ‘KGF’ ನಂತರ ಯಶ್ ಅವರ ಮತ್ತೊಂದು ಮುಖ
ಯಶ್ ಅಂದಾಕ್ಷಣ ರಾಕಿ ಭಾಯ್ ನೆನಪಾಗೋದು ಸಹಜ.
ಆದರೆ TOXIC ರಾಕಿ ಭಾಯ್ನ ಮುಂದುವರಿಕೆ ಅಲ್ಲ.
ಇಲ್ಲಿ ಕಾಣಿಸಿಕೊಳ್ಳುತ್ತಿರುವ ಪಾತ್ರದ ಸ್ಟೈಲ್, ಬಾಡಿ ಲ್ಯಾಂಗ್ವೇಜ್ ಮತ್ತು ಇಡೀ ವಾತಾವರಣವೇ ಬೇರೆ.
ಅದೇ ಕಾರಣಕ್ಕೆ ಒಂದು ಪ್ರಶ್ನೆ ಕಾಡುತ್ತದೆ…
ರಾಕಿ ಭಾಯ್ ಆಗಿ ಜಗತ್ತನ್ನೇ ನಡುಗಿಸಿದ ಯಶ್, ಇಲ್ಲಿ ರಾಯಾ ಆಗಿ ಯಾವ ಪರಿ ರಂಗುರಂಗಿನ ರಂಗಿನ ಆಟ ಆಡಲಿದ್ದಾರೆ? ಟಿಕೆಟ್ ಆಗಿ ಎಂತೆಂಥ ಹಾವಳಿ ಇಡಬಹುದು?
ಈ ಉತ್ತರಕ್ಕಾಗಿ ಥಿಯೇಟರ್ಗೆ ಹೋಗಲೇಬೇಕು.
- ‘Fairy Tale’ ಅಂದಾಕ್ಷಣ ಮಕ್ಕಳ ಕಥೆ ಅಂದುಕೊಳ್ಳಬೇಡಿ!
ಚಿತ್ರದ ಟ್ಯಾಗ್ಲೈನ್ ಗಮನಿಸಿ:
“A Fairy Tale for Grown-Ups.”
ಫೇರಿ ಟೇಲ್ ಅಂದರೆ ಸಾಮಾನ್ಯವಾಗಿ ರಾಜಕುಮಾರ, ರಾಜಕುಮಾರಿ, ಅರಮನೆ, ಕನಸು…
ಆದರೆ ಇಲ್ಲಿ?
ಅರಮನೆಯ ಜಾಗದಲ್ಲಿ ಅಂಡರ್ವಲ್ಡ್.
ರಾಜಕುಮಾರನ ಜಾಗದಲ್ಲಿ ಗ್ಯಾಂಗ್ಸ್ಟರ್.
ಕನಸುಗಳ ಜಾಗದಲ್ಲಿ ಅಧಿಕಾರದ ಆಟ.
ಮಕ್ಕಳ ಫೇರಿ ಟೇಲ್ಗೆ ದೊಡ್ಡವರ ಜಗತ್ತಿನ ಟ್ರೀಟ್ಮೆಂಟ್ ಕೊಟ್ಟರೆ ಹೇಗಿರುತ್ತೆ?
ಅದೇ TOXICನ ಅಸಲಿ ಕುತೂಹಲ.
- ಇದು ಬರೀ ಗ್ಯಾಂಗ್ಸ್ಟರ್ ಸಿನಿಮಾ ಅನಿಸುತ್ತಿಲ್ಲ
ಟ್ರೇಲರ್ ನೋಡಿದಾಗ ಮೊದಲಿಗೆ ಗ್ಯಾಂಗ್ಸ್ಟರ್ ಸಿನಿಮಾ ಅನ್ನಿಸಬಹುದು.
ಆದರೆ ಅದರೊಳಗೆ ಇನ್ನೂ ಏನೋ ಇದೆ ಅನ್ನೋ ಭಾವನೆ ಬರುತ್ತದೆ.
ಅಧಿಕಾರ ಇದೆ.
ದ್ರೋಹ ಇದೆ. ಅತಿಯಾದ ಕಾಮವೂ ಇದೆ.
ಸಂಬಂಧಗಳ ಸಂಘರ್ಷ ಇದೆ.
ಹಣದ ಆಟ ಇದೆ.
ಹಿಂಸೆ ಇದೆ.
ಅದರ ನಡುವೆ ಒಂದು ಪ್ರಶ್ನೆ…
ಇಲ್ಲಿ ನಿಜವಾದ ವಿಲನ್ ಯಾರು?
ಅದನ್ನೇ ತಿಳಿಯಲು ಸಿನಿಮಾ ನೋಡಬೇಕು.
- ಮಹಿಳಾ ಪಾತ್ರಗಳೂ ಕುತೂಹಲ ಹುಟ್ಟಿಸುತ್ತಿವೆ
ನಯನತಾರಾ, ಕಿಯಾರಾ ಅಡ್ವಾಣಿ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ನಮ್ಮ ರುಕ್ಮಿಣಿ ವಸಂತ್…
ಇಷ್ಟು ದೊಡ್ಡ ಮಹಿಳಾ ತಾರಾಬಳಗ ಒಂದೇ ಸಿನಿಮಾದಲ್ಲಿರುವುದು ಗಮನ ಸೆಳೆಯುವ ವಿಚಾರ.
ಆದರೆ ಇಲ್ಲಿ ಮುಖ್ಯವಾಗೋದು ಸ್ಟಾರ್ಗಳ ಸಂಖ್ಯೆ ಅಲ್ಲ.
ಅವರ ಪಾತ್ರಗಳ ತೂಕ ಎಷ್ಟು?
ಯಶ್ ಸುತ್ತಮುತ್ತ ಇರೋ ಪಾತ್ರಗಳಾ?
ಅಥವಾ ಇಡೀ ಕಥೆಯ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವ ಇರುವ ಪಾತ್ರಗಳಾ?
ಅದು ಗೊತ್ತಾಗಬೇಕಾದರೆ ಸಿನಿಮಾ ನೋಡಲೇಬೇಕು.
- ಕಣ್ಣು ತುಂಬಿಸುವ ದೃಶ್ಯ ವೈಭವ
TOXICನ ಮತ್ತೊಂದು ಬಹು ದೊಡ್ಡ ಆಕರ್ಷಣೆ ಅದರ ವಿಸ್ಯುವಲ್ಸ್.
ಸೆಟ್ಗಳು, ಲೊಕೇಷನ್ಗಳು, ವಸ್ತ್ರ ವಿನ್ಯಾಸ, ಲೈಟಿಂಗ್, ಕ್ಯಾಮೆರಾ ವರ್ಕ್, ಆಕ್ಷನ್…
ಪ್ರತಿ ಫ್ರೇಮ್ನಲ್ಲೂ ಒಂದು ದೊಡ್ಡ ಜಗತ್ತನ್ನು ಕಟ್ಟುವ ಪ್ರಯತ್ನ ಸಿನಿಮಾಟೋಗ್ರಾಫರ್ ರಾಜೀವ್ ರವಿ ಅವರ ದಕ್ಷ ಕಲಾ ಕುಸುರಿನಿಂದ ಕಾಣಿಸುತ್ತಿದೆ.
ರಾಜೀವ್ ರವಿ ಅವರ ಕ್ಯಾಮೆರಾ, ರವಿ ಬಸ್ರೂರ್ ಅವರ ಸಂಗೀತ ಮತ್ತು ದೊಡ್ಡ ತಾಂತ್ರಿಕ ತಂಡದ ಕೆಲಸ — ಇವೆಲ್ಲ ಸೇರಿ ಸಿನಿಮಾ ಹೇಗೆ ಮೂಡಿಬಂದಿದೆ ಅನ್ನೋದು ದೊಡ್ಡ ಪರದೆಯಲ್ಲೇ ಸರಿಯಾಗಿ ಗೊತ್ತಾಗುತ್ತದೆ.
ಇಂಥ ಸಿನಿಮಾ ಮೊಬೈಲ್ನಲ್ಲಿ ನೋಡುವುದಕ್ಕೆ ಅಲ್ಲ.
ಥಿಯೇಟರ್ನ ದೊಡ್ಡ ಸ್ಕ್ರೀನ್ ಬೇಕು.
ದೊಡ್ಡ ಸೌಂಡ್ ಬೇಕು.
ಮತ್ತು ಅದಕ್ಕೆ ತಕ್ಕ ಪ್ರೇಕ್ಷಕರ ಅನುಭವ ಬೇಕು.
- ಕನ್ನಡ ಸಿನಿಮಾದ ಮತ್ತೊಂದು ದೊಡ್ಡ ಪ್ರಯತ್ನ
ಕನ್ನಡ ಸಿನಿಮಾ ಈಗ ತನ್ನ ಗಡಿಗಳನ್ನು ದಾಟಿ ಬಹಳ ದೂರ ಬಂದಿದೆ.
TOXIC ಕೂಡ ಆ ಪ್ರಯಾಣದ ಮತ್ತೊಂದು ದೊಡ್ಡ ಹೆಜ್ಜೆ.
ದೊಡ್ಡ ಸ್ಟಾರ್.
ದೊಡ್ಡ ಬಜೆಟ್.
ದೊಡ್ಡ ತಾರಾಬಳಗ.
ದೊಡ್ಡ ತಾಂತ್ರಿಕ ತಂಡ.
ಮತ್ತು ಪ್ಯಾನ್-ಇಂಡಿಯಾ ಮಟ್ಟದ ನಿರೀಕ್ಷೆ.
ಆದರೆ ಸಿನಿಮಾ ದೊಡ್ಡದಾಗೋದು ಇವೆಲ್ಲದಿಂದ ಮಾತ್ರ ಅಲ್ಲ.
ಅದರೊಳಗೆ ತನ್ನದೇ ಆದ ಒಂದು ಆತ್ಮ ಇರಬೇಕು.
TOXICನಲ್ಲಿ ಆ ವಿಭಿನ್ನತೆ ಎಷ್ಟಿದೆ ಅನ್ನೋದನ್ನು ನೋಡೋದೇ ಈಗಿನ ಕುತೂಹಲ.
- ಎಲ್ಲವನ್ನೂ ಹೇಳಿಬಿಟ್ಟಿಲ್ಲ — ಇದೇ ದೊಡ್ಡ ಪ್ಲಸ್!
ಇವತ್ತಿನ ದಿನಗಳಲ್ಲಿ ಟ್ರೇಲರ್ ನೋಡಿದರೆ ಸಿನಿಮಾದ ಅರ್ಧ ಕಥೆ ಗೊತ್ತಾಗಿಬಿಡುತ್ತೆ.
ಆದರೆ TOXIC ಇನ್ನೂ ಕೆಲವು ಪ್ರಶ್ನೆಗಳನ್ನು ಹಾಗೇ ಉಳಿಸಿದೆ.
ರಾಯಾ ಯಾರು?
ಅವನ ಸುತ್ತಲಿರುವವರ ಅಸಲಿ ಆಟ ಏನು?
ಯಾರು ಸ್ನೇಹಿತರು?
ಯಾರು ಶತ್ರುಗಳು?
ಮತ್ತು…
‘Fairy Tale for Grown-Ups’ ಅನ್ನೋ ಮಾತಿನ ಹಿಂದಿರುವ ಅಸಲಿ ಅರ್ಥವೇನು?
ಇದಕ್ಕೆಲ್ಲ ಉತ್ತರ ಥಿಯೇಟರ್ನಲ್ಲಿ ಸಿಗಬೇಕು.
ಅದೇ ಈ ಸಿನಿಮಾದ ಮೇಲಿರುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಹಾಗಾದರೆ TOXIC ಯಾಕೆ ನೋಡಬೇಕು?
ಯಶ್ ಇದ್ದಾರೆ ಅನ್ನೋ ಕಾರಣಕ್ಕೆ ಮಾತ್ರ ಅಲ್ಲ.
ಗೀತು ಮೋಹನ್ದಾಸ್ ನಿರ್ದೇಶನ ಅನ್ನೋ ಕಾರಣಕ್ಕೆ ಮಾತ್ರ ಅಲ್ಲ.
ದೊಡ್ಡ ಬಜೆಟ್, ದೊಡ್ಡ ಆಕ್ಷನ್, ದೊಡ್ಡ ತಾರಾಬಳಗ ಇದೆ ಅನ್ನೋ ಕಾರಣಕ್ಕೂ ಮಾತ್ರ ಅಲ್ಲ.
ಇವೆಲ್ಲದರ ನಡುವೆ ಒಂದು ಹೊಸ ಜಗತ್ತನ್ನು ಕಟ್ಟುವ ಪ್ರಯತ್ನ ಕಾಣಿಸುತ್ತಿದೆ ಅನ್ನೋ ಕಾರಣಕ್ಕೆ.
ಬಹುಶಃ TOXIC ಒಂದು ಸಿನಿಮಾ ಮಾತ್ರ ಆಗಿರಬಹುದು.
ಆದರೆ ಅದಕ್ಕಿಂತ ಹೆಚ್ಚಾಗಿ…
ನಮ್ಮೊಳಗೆ ಎಲ್ಲೋ ಉಳಿದುಹೋಗಿರುವ ಫೇರಿ ಟೇಲ್ಗಳನ್ನು ದೊಡ್ಡವರ ಕಣ್ಣಿನಿಂದ ಮತ್ತೆ ಹೇಳುವ ಪ್ರಯತ್ನವಾಗಿರಬಹುದು.
ಇಲ್ಲಿ ರಾಜಕುಮಾರನಿರಬಹುದು…
ಆದರೆ ಅವನು ಒಳ್ಳೆಯವನಾಗಿರಬೇಕೆಂದಿಲ್ಲ.
ಇಲ್ಲಿ ವಿಲನ್ ಇರಬಹುದು…
ಆದರೆ ಅವನೇ ಕಥೆಯ ಹೀರೋ ಆಗಿರಬಹುದು.
ಇಲ್ಲಿ ಗೆಲುವಿರಬಹುದು…
ಆದರೆ ಅದಕ್ಕೆ ಕಟ್ಟಿರೋ ಬೆಲೆ ತುಂಬಾ ದೊಡ್ಡದಿರಬಹುದು..
ಯಾಕೆಂದರೆ ಇದು ಮಕ್ಕಳ ಫೇರಿ ಟೇಲ್ ಅಲ್ಲ.
ಇದು ದೊಡ್ಡವರಿಗಾಗಿ… ಒಂದು TOXIC ಫೇರಿ ಟೇಲ್.
ಸ್ವಲ್ಪ ಜನ ಟ್ರೈಲರ್ ನೋಡಿ ಇದು ಬಬ್ರುವಾಹನ ತರ ಅಪ್ಪ-ಮಗನ ಜಿದ್ದಾಜಿದ್ದಿ ಕಥೆ ಅಂದುಕೊಂಡಿದ್ದಾರೆ. ಅದು ಸಹಜವೇ ಆದರೆ ನೀವು ಕಥೆ ಏನು ಅಂತ ತಿಳಿಯಲು ಹೋಗಬೇಡಿ.
ಆ ಲೋಕ ಹೇಗಿದೆ ಅಂತ ಅನುಭವಿಸಲು ಹೋಗಿ.. ಏಕೆಂದರೆ ಇಲ್ಲಿ ಯಶ್ ಮತ್ತು ತಂಡ ಸೃಷ್ಟಿಸಿರುವ ಪ್ರಪಂಚವೇ ಬೇರೆ ಗತ್ತಿನದು.