ಸದ್ಯ ಯೋಗರಾಜ್ ಭಟ್ಟರು ‘ಪಂಚತಂತ್ರ’ವನ್ನು ಕನ್ನಡದಲ್ಲಿ ಹೇಳುವಲ್ಲಿ ಬ್ಯುಸಿಯಾಗಿದ್ದುದು ನಮಗೆಲ್ಲ ತಿಳಿದಿದೆ. ಈಗ ಬಂದಿರುವ ಸುದ್ದಿಯ ಪ್ರಕಾರ ಭಟ್ಟರು ಇದೇ ‘ಪಂಚತಂತ್ರ’ ಸಿನಿಮಾವನ್ನು ತೆಲುಗು ಮತ್ತು ಹಿಂದಿಯಲ್ಲಿ ಹೇಳಲು ಹೊರಟಿದ್ದಾರೆ..!
ತಮ್ಮದೇ ಚಿತ್ರದ ರಿಮೇಕ್ ಅನ್ನು ಇದೇ ಮೊದಲ ಬಾರಿಗೆ ಎರಡು ಭಾಷೆಗಳಲ್ಲಿ ನಿರ್ದೇಶಿಸಲು ಭಟ್ಟರು ಒಪ್ಪಿಕೊಂಡಿದ್ದಾರೆ. ಈ ಎರಡು ಚಿತ್ರಗಳನ್ನು ಒಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ನಿರ್ಮಿಸಲು ಒಪ್ಪಿಕೊಂಡಿದ್ದು, ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಕೆಲವು ಮೂಲಗಳ ಪ್ರಕಾರ, ಈ ಚಿತ್ರ ನಿರ್ಮಾಣ ಸಂಸ್ಥೆ ಹಿಂದಿಯಲ್ಲಿಯೂ ಚಿತ್ರವನ್ನು ನಿರ್ಮಿಸಲು ಆಸಕ್ತಿ ತೋರಿಸಿದ್ದು ಈ ಮೆಗಾ ಪ್ರಾಜೆಕ್ಟ್ ಗೆ ಭಟ್ಟರು ಸಹಿ ಮಾಡುವುದೊಂದೇ ಬಾಕಿ. ಭಟ್ರು ಕನ್ನಡದಲ್ಲಿ ನಿರ್ದೇಶಿಸಿದ ‘ಮುಂಗಾರು ಮಳೆ’ ಸೇರಿದಂತೆ ಹಲವು ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗಿ ಭಟ್ಟರು ಅಲ್ಲಿಯೂ ಚಿರಪರಿಚಿತರು.
ಯೋಗರಾಜ್ ಭಟ್ ಅವರು, ಆಯ್ದುಕೊಳ್ಳುವ ವಿಶಿಷ್ಟ ಪ್ರೇಮಕಥೆಗಳು, ಚಿತ್ರವನ್ನು ನಿರೂಪಿಸುವ ಶೈಲಿ, ಸಂಭಾಷಣೆ ಮತ್ತು ಚಿತ್ರ ಸಾಹಿತ್ಯ ಮುಂತಾದವುಗಳಿಂದ ತಮ್ಮ ಬಹುಮುಖ ಪ್ರತಿಭೆಯನ್ನು, ಚಿತ್ರದ ಎಲ್ಲಾ ಭಾಗಗಳಲ್ಲಿ ಅಭಿವ್ಯಕ್ತ ಗೊಳಿಸುವ ಅಭಿಜಾತ ಪ್ರತಿಭಾವಂತ. ಅವರು ಈಗ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನಿರ್ದೇಶಿಸುತ್ತಿರುವುದು ಕುತೂಹಲ ಹುಟ್ಟಿಸಿದೆ.
‘ಪಂಚತಂತ್ರ’ದ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಶಶಿಧರ್ ಅಡಪ ಕಲಾ ನಿರ್ದೇಶನ ಮತ್ತು ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಇದೇ ಅಕ್ಟೋಬರ್ ಕೊನೆಯಲ್ಲಿ ಚಿತ್ರದ ಆಡಿಯೋ ಲಾಂಚ್ ಆಗಲಿದೆ. ಹಿರಿಯ ಮತ್ತು ಕಿರಿಯರ ನಡುವಿನ ಜನರೇಷನ್ ಗ್ಯಾಪ್ ಹಿನ್ನೆಲೆಯಲ್ಲಿ ಅರಳಿದ ಸಿನಿಮಾ ಇದಾಗಿದ್ದು, ವಿಹಾನ್, ಸೋನಲ್ ಮಂಟೇರಿಯಾ ಮತ್ತು ಅಕ್ಷರ ಗೌಡ ಈ ಚಿತ್ರದಲ್ಲಿ ನಟಿಸಿದ್ದಾರೆ.
