RESPONSIVE LEADERBOARD AD AREA
Film News

‘ಕೋರ್ಟಿಗೆ ಬಂದೋಳು, ಹಾರ್ಟಿಗೆ ಬರದೆ ಇರ್ತಾಳ..!’ ಅಂತಿದ್ದಾರೆ ವಿನಯ್ ರಾಜಕುಮಾರ್..!!

‘ಕೋರ್ಟಿಗೆ ಬಂದೋಳು, ಹಾರ್ಟಿಗೆ ಬರದೆ ಇರ್ತಾಳ..!’ ಎಂಬ ವಿನಯ್ ರಾಜಕುಮಾರ್ ಅವರ ಪ್ರಶ್ನೆಗೆ ಉತ್ತರ ಪಡೆಯಲು ನಾಳೆವರೆಗೆ ಕಾಯಬೇಕು.. ಹೌದು..! ಹೀಗೊಂದು ವಿಶೇಷ ಟ್ಯಾಗ್ ಲೈನ್ ಹೊಂದಿರುವ ‘ಅನಂತು v/s ನುಸ್ರತ್’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿನಯ್ ಅವರಿಗೆ ನಾಯಕಿಯಾಗಿ ಲತಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ.

ವಿನಯ್ ರಾಜ್ ಕುಮಾರ್ ಅವರ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಇದಾಗಿದೆ. ಚಿತ್ರದ ನಾಯಕಿ, ಕನ್ನಡತಿ ಲತಾ ಹೆಗಡೆ ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್ ನಲ್ಲಿ. ‘ಅತಿರಥ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು ಆಕಸ್ಮಿಕವಾಗಿ ಬಂದ ಅವಕಾಶಗಳಿಂದ ಮಿಂಚುತ್ತಿದ್ದಾರೆ.

“ಎಂಬಿಎ ಪದವೀಧರೆ ಆಗಬೇಕೆಂದು ಬಯಸಿದ್ದ ನಾನು, ಚಿತ್ರ ನಟಿಯಾಗುವ ಬಗ್ಗೆ ಗಂಭೀರವಾಗಿ ಆಲೋಚಿಸಿರಲಿಲ್ಲ ಆದರೆ ಆಕಸ್ಮಿಕವಾಗಿ ಒಲಿದು ಬಂದ ಅವಕಾಶಗಳಿಂದ ಖುಷಿಯಾಗಿದ್ದೇನೆ. ಸಿನಿಮಾದಲ್ಲಿ ನಟಿಸುವುದು ಅತ್ಯುತ್ತಮ ಅನುಭವವಾದರೂ ಶೂಟಿಂಗ್ ಸಮಯದಲ್ಲಿ ಮನೆಯಿಂದ ಹೊರಗೆ ಇರಬೇಕಾಗುತ್ತದೆ ಇದು ತುಂಬಾ ಕಷ್ಟದ ವಿಷಯ”

” ‘ಅನಂತು v/s ನುಸ್ರತ್’ ಚಿತ್ರದಲ್ಲಿ ನಾನು ಮುಸ್ಲಿಂ ಹುಡುಗಿಯೊಬ್ಬಳ ಪಾತ್ರ ಮಾಡುತ್ತಿದ್ದೇನೆ. ಚಿತ್ರದಲ್ಲಿ ನುಸ್ರತ್ ನ್ಯಾಯಾಧೀಶೆ. ತುಂಬಾ ಗಂಭೀರವಾಗಿ, ತೂಕದ ಮಾತುಗಳನ್ನಾಡುವ ವ್ಯಕ್ತಿತ್ವ. ಆದರೆ ನಾನು ಸಂಪೂರ್ಣವಾಗಿ ಇದಕ್ಕೆ ತದ್ವಿರುದ್ಧ. ಮಾತನಾಡಲು ಆರಂಭಿಸಿದರೆ ನಿಲ್ಲಿಸುವುದೇ ಇಲ್ಲ. ನನ್ನ ವ್ಯಕ್ತಿತ್ವಕ್ಕೆ ವಿಭಿನ್ನವಾದ ಸವಾಲಿನ ಪಾತ್ರದಲ್ಲಿ ಅಭಿನಯಿಸಿದ್ದು ಖುಷಿ ನೀಡಿದೆ. ನ್ಯಾಯಾಧೀಶೆಯ ಸ್ಥಾನದಲ್ಲಿ ಕುಳಿತು ಅಭಿನಯಿಸಿದ್ದು ಅದ್ಭುತ ಅನುಭವ ನೀಡಿದೆ” ಎಂದು ಖುಷಿ ಹಂಚಿಕೊಳ್ಳುತ್ತಾರೆ ಲತಾ ಹೆಗಡೆ

ರಾಷ್ಟ್ರ ಪ್ರಶಸ್ತಿ ವಿಜೇತ ತುಳು ಚಿತ್ರ ‘ಮಡಿಪು’ ಗೆ ಸಹ ನಿರ್ದೇಶಕರಾಗಿದ್ದ ಸುಧೀರ್ ಶಾನಬೋಗ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ,ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

‘ವಕೀಲ ವೃತ್ತಿಯ ಯುವಜನರನ್ನು ಹಿನ್ನೆಲೆಯಾಗಿಟ್ಟುಕೊಂಡು, ಚಿತ್ರ ನಿರ್ಮಿಸಲಾಗಿದೆ. ಹೆಚ್ಚಿನ ಸಿನಿಮಾಗಳಲ್ಲಿ ನ್ಯಾಯಾಂಗದ ದೃಶ್ಯಗಳಲ್ಲಿ ವಕೀಲರ ಒಂದೆರಡು ದೃಶ್ಯಗಳು ಬರುವುದು ಸಾಮಾನ್ಯ. ಆದರೆ ಈ ಚಿತ್ರದಲ್ಲಿ ವಕೀಲರನ್ನು ಪೂರ್ಣ ಪ್ರಮಾಣದಲ್ಲಿ ಕೇಂದ್ರೀಕರಿಸಲಾಗಿದ್ದು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ’ಎನ್ನುತ್ತಾರೆ ನಿರ್ದೇಶಕ ಸುಧೀರ್ ಶಾನಭೋಗ್.

ಮಾಣಿಕ್ಯ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರವಿಶಂಕರ್, ಗುರುಪ್ರಸಾದ್, ಭಗವಾನ್, ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top