RESPONSIVE LEADERBOARD AD AREA
Movie Reviews

ದುಪ್ಪಟ್ಟು ನಗಿಸುವ ಅಪ್ಪಟ ಹಾಸ್ಯ ಚಿತ್ರ – ವಿಕ್ಟರಿ-2

ಇದೇ ವರ್ಷ ರಾಂಬೋ-2 ನಂತಹ ಯಶಸ್ವಿ ಹಾಸ್ಯ ಚಿತ್ರ ನೀಡಿದ್ದ ಶರಣ್ ಹಾಗೂ ತರುಣ್ ಕಿಶೋರ್ ಸುಧೀರ್ ತಂಡ ವಿಕ್ಟರಿ-2 ಮೂಲಕ ಮಗದೊಮ್ಮೆ ಪ್ರೇಕ್ಷಕರ “ಕಾಮಿಡಿ” ನಿರೀಕ್ಷೆಗಳನ್ನು ಹುಸಿಗೊಳಿಸದೆ ಭರಪೂರ ನಗಿಸಿ ಗೆದ್ದಿದೆ. ಅಸಲಿ ಪ್ರೇಕ್ಷಕರು ವಿಕ್ಟರಿ-2 ಚಿತ್ರದಿಂದ ಬಯಸಿದ್ದಾದರೂ ಏನು? ಹೊಟ್ಟೆ ತುಂಬಾ ನಗು. ಎಸ್! ವಿಕ್ಟರಿ ನಗಿಸಿದ್ದಕ್ಕಿಂತ ಒಂದು ಕೈ ಮೇಲೆ ವಿಕ್ಟರಿ-2 ನಿಮ್ಮನ್ನು ನಗಿಸುತ್ತದೆ. ನಿಮ್ಮನ್ನು ಶತಾಯ ಗತಾಯ ನಗಿಸಬೇಕೆಂದೇ ಎರ್ರಾ ಬಿರ್ರಿ ಸ್ಕ್ರೀನ್ ಪ್ಲೇ, ತರಾವರಿ ದೃಶ್ಯಗಳನ್ನು ಹೆಣೆದಿದ್ದಾರೆ ತರುಣ್ ಕಿಶೋರ್ ಸುಧೀರ್. ಸಿನಿಮಾದಲ್ಲಿ ಶರಣ್ ಮತ್ತು ರವಿಶಂಕರ್ ಕೊಡೋ ಮಜಾ ಗಳು ಒಂದಾ ಎರಡಾ? ನೀವು ಲಾಜಿಕ್ಕು, ಸೆನ್ಸು, ಫೀಲಿಂಗು ಎಲ್ಲಾ ಬಿಟ್ಟು ಕಾಮಿಡಿ ಮ್ಯಾಜಿಕ್ ಗ್ರಹಿಸಿಕೊಂಡು ಸಿನಿಮಾ ನೋಡೋದಾದರೆ ವಿಕ್ಟರಿ-2 ನೀವು ಕೊಟ್ಟ ಟಿಕೆಟ್ ಬೆಲೆಯ ದುಡ್ಡಿನ ಪೂರ್ತಿ ಮನರಂಜನೆಯನ್ನು ಫಸ್ಟ್ ಹಾಫ್ ನಲ್ಲಿಯೇ ಕೊಡುತ್ತದೆ. ಸಿನಿಮಾದ ಸೆಕೆಂಡ್ ಹಾಫ್ ನಿಮಗೆ ಪೂರಾ ಬೋನಸ್.

ವಿಕ್ಟರಿ ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಕಥೆಯ ಮುಂದುವರಿಕೆಯನ್ನು ಬಹಳ ಚೆನ್ನಾಗಿ ಮಾಡಲಾಗಿದೆ. 80-90ರ ದಶಕಗಳ ಕಥೆಯ ಎಳೆಯನ್ನು ನೆನಪಿಸುವಂತಹ ಕಥೆಯಲ್ಲಿಯೇ ಇರುವ ಚಿತ್ರ ವಿಚಿತ್ರ ತಿರುವುಗಳು ಸಸ್ಪೆನ್ಸ್ ಸಿನಿಮಾ ನೀಡುವ ಕುತೂಹಲವನ್ನೇ ಕೊಡುತ್ತವೆ. ವಿಕ್ಟರಿ ಚಿತ್ರದಲ್ಲಿ ಇದ್ದ ಎಲ್ಲ ವಿಷಯಗಳು ಇದರಲ್ಲಿ ಡಬ್ಬಲ್ ಇರಲೇಬೇಕು ಎಂಬ ಹಟದಲ್ಲಿ ಚಿತ್ರತಂಡ ಕೆಲಸ ಮಾಡಿದೆ.

ನಾಲ್ಕು ಪಾತ್ರಗಳಲ್ಲಿ ಶರಣ್ ಇಡೀ ಚಿತ್ರವನ್ನು ಆವರಿಸಿಕೊಂಡು “ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ” ಆಗಿದ್ದಾರೆ. ರವಿಶಂಕರ್ ಕಾಮಿಡಿ ಮಾಡಲು ನಿಂತರೆ ಅವರಂತಹ ಕಾಮಿಡಿಯನ್ ಇನ್ನೊಬ್ಬರಿಲ್ಲ ಎನ್ನುವ ಹಾಗೆ ನಟಿಸಿದ್ದಾರೆ. ಅವರ ಕಾಮಿಡಿ ಟೈಮಿಂಗ್ ಸೂಪರ್‌. ಅವರು ಮತ್ತಷ್ಟು ದೃಶ್ಯಗಳಲ್ಲಿ ಇದ್ದು ಇನ್ನೂ ಮಜಾ ಕೊಡಬೇಕಿತ್ತು ಅನ್ನಿಸುವ ರೇಂಜಿಗೆ ಅದ್ಭುತ ಮನರಂಜನೆ ನೀಡಿದ್ದಾರೆ. ಹೀರೋಯಿನ್ ಗಳಾದ ಅಸ್ಮಿತಾ ಹಾಗೂ ಅಪೂರ್ವ ಒಬ್ಬರಿಗಿಂತ ಒಬ್ಬರು ಮಾದಕ, ಕಣ್ಣಿಗೆ ವಿಪರೀತ ತಂಪು. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ವಿಕ್ಟರಿ ಮತ್ತು ರಾಂಬೋ-2 ಹಾಡುಗಳಷ್ಟು ಚೆನ್ನಾಗಿಲ್ಲದಿದ್ದರೂ ಸಿನಿಮಾ ನೋಡುವಾಗ ಖುಷಿ ಕೊಡುತ್ತವೆ. ಚಿತ್ರದ ಮೇಕಿಂಗ್ ಬಹಳ ರಿಚ್ ಆಗಿದೆ. ಕ್ಯಾಮರಾ ವರ್ಕ್, ಎಡಿಟಿಂಗ್, ಹಿನ್ನೆಲೆಯ ಸಂಗೀತ ಎಲ್ಲವೂ ಅಚ್ಚುಕಟ್ಟು. ಈ ಚಿತ್ರದ ಮೂಲಕ ನಿರ್ದೇಶಕ ಹರಿ ಸಂತು ಅವರಿಗೆ ಕಾಲೇಜ್ ಕುಮಾರ್ ನಂತರ ಇದು ಮತ್ತೊಂದು ವಿಕ್ಟರಿ. ನಿರ್ಮಾಪಕ ತರುಣ್ ಶಿವಪ್ಪ ಅವರಿಗೆ ಕನ್ಫರ್ಮ್ ಬಾಕ್ಸ್ ಆಫೀಸ್ ‘ವಿಕ್ಟರಿ’.

ಸೆನ್ಸಿಬಲ್ ಕಾಮಿಡಿ ಸಿನಿಮಾ ಅರಸಿ ವಿಕ್ಟರಿ-2 ನೋಡತಕ್ಕದ್ದಲ್ಲ. ಇದೊಂದು ಪಕ್ಕಾ ಮಾಸ್ ಕಾಮಿಡಿ ಜಾನರ್ ಸಿನಿಮಾ, ಇಲ್ಲಿರುವ ಹಾಸ್ಯ ಸಿಲ್ಲಿ ಅನ್ನಿಸೋದು ನಿಜವಾದರೂ ನಗಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಒಟ್ಟಾರೆಯಾಗಿ ವಿಕ್ಟರಿ-2 ತನ್ನನ್ನು ನಂಬಿ ಬಂದ ಪ್ರೇಕ್ಷಕರಿಗೆ ಮೋಸ ಮಾಡದೆ ಹೇಳಿಕೊಂಡ ಹಾಗೆ “ದುಪ್ಪಟ್ಟು” ನಗೆ ರಂಜನೆ ನೀಡಿ ಮನೆಗೆ ಕಳಿಸುತ್ತದೆ. ನಗು ಅರಸಿ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ಹೊರಗೆ ಹೋಗುವಾಗ ವಿಕ್ಟರಿ ಸಿಂಬಲ್ ತೋರಿಸಿ ಹೋಗೋದು ಗ್ಯಾರಂಟಿ.

ರೇಟಿಂಗ್ 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top