RESPONSIVE LEADERBOARD AD AREA
Movie Reviews

ಪಕ್ಕಾ ಲೋಕಲ್ ಪೈಸಾ ವಸೂಲ್ ವಾಸು

ಟೈಟಲ್ನಲ್ಲೇ ಪಕ್ಕಾ ಕಮರ್ಷಿಯಲ್ ಅಂತ ಇರುವಾಗ ನೀವು ಫಿಕ್ಸ್ ಆಗಿ ಬಿಡಬೇಕು. ಈ ಸಿನಿಮಾನ ನಾನು ಲಾಜಿಕ್ ಹುಡುಕೊಂಡು, ದುರ್ಬಿನ್ ಹಾಕ್ಕೊಂಡು ನೋಡಬಾರದು. ಮೈಂಡ್ ನ ಫ್ರೀಯಾಗಿ ಬಿಟ್ಟು, ಜಾಸ್ತಿ ತಲೆಕೆಡಿಸಿಕೊಳ್ಳದೆ ಕೂಲಾಗಿ ಕೂತು ನೋಡಿದಾಗ ನಿಮಗೆ ರುಚಿಸುತ್ತಾ, ನಿಮ್ಮನ್ನು ರಂಜಿಸುತ್ತಾ ಸಾಗುವ ಸಿನಿಮಾ “ವಾಸು ನಾನ್ ಪಕ್ಕಾ ಕಮರ್ಷಿಯಲ್”.

ಕತೆ

ಬೆಟ್ಟಿಂಗ್ ಗಾಗಿ ಬಾಕ್ಸಿಂಗ್ ಮಾಡೋ “ವಾಸು”ಗೆ ಜೀವಕ್ಕೆ ಜೀವ ಕೊಡೋಕೆ ರೆಡಿ ಇರೋ ನಾಲ್ಕು ಜನ ಫ್ರೆಂಡ್ಸ್ ಇದ್ದಾರೆ. ಬಾಣಂತನಕ್ಕೆ ತವರಿಗೆ ಬಂದಿರುವ ಅಕ್ಕ, ದಿಲ್ದಾರ್ ನೇಚರ್ ಇರೋ ಅಪ್ಪ, ಮುದ್ದಿನ ಅಮ್ಮ ಇರುವ ಯರ್ರಾಬಿರ್ರಿ ಸಪೋರ್ಟಿವ್ ಚಿಕ್ಕದಾದ ಚೊಕ್ಕದಾದ ಫ್ಯಾಮಿಲಿ ಇದೆ. ಅದೊಂದು ದಿನ ಹುಡುಗಿ ಒಬ್ಳು ವಾಸು ಎದುರಿಗೆ ಬಂದವಳೇ ಏಕ್ದಂ “ಐ ಲವ್ ಯೂ” ಅಂತ ಪ್ರಪೋಸ್ ಮಾಡಿಬಿಡ್ತಾಳೆ. ಅವಳದು ಸಿಂಪಲ್ ಲಾಜಿಕ್, ಕಮರ್ಷಿಯಲ್ ಸಿನಿಮಾದಲ್ಲಿ ಬರೋ ಕಮರ್ಷಿಯಲ್ ಹೀರೋ ಥರ ಹುಡುಗ ಅವಳಿಗೆ ಬೇಕು. ಹೀಗಾಗಿ ಅದೇ ಕ್ಯಾಟಗರಿಯ ವಾಸು ಅವಳಿಗೆ ಇಷ್ಟ ಆಗಿದ್ದಾನೆ. ಲವ್ವು ಡವ್ವು ಎಲ್ಲಾ ಕರೆಕ್ಟಾಗಿ ಒಂದಷ್ಟು ದಿನ ನಡೆಯುತ್ತೆ. ಹೀಗಿರುವಾಗ ಹುಡುಗಿ ಸಡನ್ನಾಗಿ ಬಂದು ಇವತ್ತಿಂದ ಬ್ರೇಕ್ ಕಪ್ ಅಂತ ಬಾಂಬ್ ಸಿಡಿಸುತ್ತಾಳೆ. ತಬ್ಬಿಬ್ಬಾದ ವಾಸು ಅವತ್ತಿಂದ ದೇವದಾಸು ಆಗಿ ವಿಲವಿಲ ಅಂತ ಒದ್ದಾಡಿ ಹೋಗ್ತಾನೆ. ಅಸಲಿ ಹುಡುಗಿ ಬ್ರೇಕಪ್ ಮಾಡಿಕೊಂಡಿದ್ದಾದರೂ ಏಕೆ? ಅವಳ ನಿರ್ಧಾರದ ಹಿಂದಿರುವ ಆ ಕಮರ್ಷಿಯಲ್ ವಿಲನ್ ಯಾರು? ಅವನ ಕ್ಯಾರೆಕ್ಟರ್ ಎಂತಹುದು? ದೂರವಾದ ಕಮರ್ಷಿಯಲ್ ಪ್ರೇಮಿಗಳು ಒಂದಾಗೋದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಲು ನೀವು ಸಿನಿಮಾ ನೋಡಬೇಕು.

ತಾಂತ್ರಿಕತೆ

ಡೈರೆಕ್ಟರ್ ಅಜಿತ್ ವಾಸನ್ ಪಕ್ಕಾ ಕಮರ್ಷಿಯಲ್ ಕಥೆಯೊಳಗೆ ಕೆಲವು ಬಹಳ ಫ್ರೆಶ್ ಅನ್ನಿಸುವ ದೃಶ್ಯಗಳನ್ನು ಹೆಣೆದಿದ್ದಾರೆ. ಹೀರೋ ಅಪ್ಪನ ಪಾತ್ರ ಪೋಷಣೆ ಹಾಗೂ ಹಿರೋಯಿನ್ ಪಾತ್ರದ ಪಾತ್ರ ಪೋಷಣೆ ಚಿತ್ರವು ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ಅನೀಶ್ ಅವರನ್ನು ಪಕ್ಕಾ ಮಾಸ್ ಹೀರೋ ಆಗಿ ಪ್ರೆಸೆಂಟ್ ಮಾಡಿರುವ ರೀತಿ ಸೂಪರ್. ಮುಖ್ಯವಾಗಿ ನಿರ್ದೇಶಕರಿಗಿರುವ ಕ್ಲಾರಿಟಿ ಮೆಚ್ಚತಕ್ಕದ್ದು. ತಾನು ಮಾಡ್ತಿರೋ ಕಮರ್ಷಿಯಲ್ ಸಿನಿಮಾ ಎಂತಹುದು? ಅದನ್ನು ನೋಡೋಕೆ ಬರೋ ಟಾರ್ಗೆಟ್ ಆಡಿಯನ್ಸ್ ಯಾರು? ಎಂಬ ವಿಚಾರದಲ್ಲಿ ಅವರಿಗಿರುವ ನಿಚ್ಚಳವಾದ ಕ್ಲಾರಿಟಿ ಚಿತ್ರವನ್ನು ಒಂದು ರೇಂಜಿಗೆ ಗೆಲ್ಲಿಸಿದೆ. ಚಿತ್ರದ ಮತ್ತೊಬ್ಬ ಹೀರೋ ಆಗಿ ಹೊರಹೊಮ್ಮಿರುವುದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ರಂಗೇರಿದೆ ಹಾಗೂ ಹೇಳು ಬಾ ಏನಾದೆನಾ ಹಾಡುಗಳು ಸಿನಿಮಾ ನೋಡುವಾಗ ಬಹಳ ಖುಷಿ ಕೊಡುತ್ತವೆ. ಹಿನ್ನೆಲೆ ಸಂಗೀತ ಜಬರ್ದಸ್ತ್ ಅನ್ನಬಹುದು.

ಅಭಿನಯ

ಒಂದು ಕಮರ್ಷಿಯಲ್ ಸಿನಿಮಾದ ಹೀರೋ ಹೀರೋಯಿನ್ ಆಗಿ ಅನೀಶ್ ಹಾಗೂ ನಿಶ್ವಿಕಾ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗುತ್ತಾರೆ. ಇಬ್ಬರ ಪೇರು ಸೂಪರ್ರು, ಇಬ್ಬರೂ ಅದ್ಧೂರಿ ಡ್ಯಾನ್ಸರ್ ಗಳೇ. ಈ ಚಿತ್ರದಿಂದ ಮಾಸ್ ಹೀರೋ ಆಗಿ ಅನೀಶ್ ಹಾಗೂ ಯಶಸ್ವಿ ರೆಗ್ಯುಲರ್ ಹೀರೋಯಿನ್ ಆಗಿ ನಿಶ್ವಿಕಾ ಲಾಂಗ್ ಇನ್ನಿಂಗ್ಸ್ ಶುರು ಮಾಡುವ ಎಲ್ಲಾ ಮುನ್ಸೂಚನೆಗಳಿವೆ. ಇನ್ನು ಜವಾಬ್ದಾರಿಯುತ ತಂದೆಯಾಗಿ, ಮಗನ ಗೆಳೆಯನಾಗಿ, ರಿಯಲ್ ಎಸ್ಟೇಟ್ ಬ್ರೋಕರ್ ಆಗಿ, ಮಂಜುನಾಥ ಹೆಗ್ಡೆ ಅವರನ್ನು ತೆರೆಯ ಮೇಲೆ ನೋಡುವುದೇ ಚೆಂದ. ತಾಯಿಯಾಗಿ ನಟಿಸಿರುವ ಅರುಣಾ ಬಾಲರಾಜ್ ಅವರು ಇನ್ನು ಮುಂದೆ ಬರುವ ಕಮರ್ಷಿಯಲ್ ಸಿನಿಮಾಗಳಲ್ಲಿ ರೆಗ್ಯುಲರ್ ತಾಯಿಯಾಗಿ ಕಾಣಿಸಿದರೆ ಆಶ್ಚರ್ಯ ಪಡಬೇಕಿಲ್ಲ ಅವರ ಹಾಗೂ ನಿಶ್ವಿಕಾ ನಡುವಿನ ಸೀರೆ ಅಂಗಡಿ ದೃಶ್ಯ ಸಖತ್ ಆಗಿದೆ.

ಕೊನೆಯ ಮಾತು

ಸಿನಿಮಾದಲ್ಲಿ ಒಂದೇ ಒಂದು ಡಬಲ್ ಮೀನಿಂಗ್ ಡೈಲಾಗ್ ಇಲ್ಲ, ಅಶ್ಲೀಲತೆ ಇಲ್ಲ. ಕನೆಕ್ಟ್ ಆಗಬಹುದಾದಂತಹ ನಾಯಕ ನಾಯಕಿಯ ಪಾತ್ರವಿದೆ, ಫ್ಯಾಮಿಲಿ ಸೆಂಟಿಮೆಂಟ್ ಗಳಿವೆ ಮುಖ್ಯವಾಗಿ ಶಿಳ್ಳೆ ಹೊಡೆಯುವಂತಹ ದೃಶ್ಯಗಳಿವೆ. ಸಾಂಗು, ಡಾನ್ಸು ಮತ್ತು ಫೈಟ್ಗಳಲ್ಲಿ ಖದರ್ ಇದೆ. ಪೊಲೀಸ್ ಠಾಣೆಯ ದೃಶ್ಯಗಳು ಅತಿರೇಕವೆನಿಸಿದರೂ ಮಜಾ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ಫಸ್ಟ್ ಹಾಫ್ ಇದ್ದಷ್ಟು ಮಜವಾಗಿ ಸೆಕೆಂಡ್ ಹಾಫ್ ಇದ್ದಿದ್ದಿದ್ರೆ ವಾಸು ಮತ್ತಷ್ಟು ಕಮರ್ಷಿಯಲ್ ಲಾಭಗಳನ್ನು ಪಡೆಯುತ್ತಿದ್ದ. ದ್ವಿತೀಯಾರ್ಧದ ನಿರೂಪಣೆಯಲ್ಲಿನ ದೋಷಗಳ ಹೊರತಾಗಿಯೂ “ವಾಸು ನಾನ್ ಪಕ್ಕಾ ಕಮರ್ಷಿಯಲ್” ಒಂದು ಎಂಜಾಯ್ ಮಾಡಬಹುದಾದ ಪಕ್ಕಾ ಲೋಕಲ್ ಮಾಸ್ ಸಿನಿಮಾ.

ರೇಟಿಂಗ್ 3.25/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top