RESPONSIVE LEADERBOARD AD AREA
Film News

ನಾಗತಿಹಳ್ಳಿ ಪ್ರೇಮ ಕಥೆಯಲ್ಲಿ ವಶಿಷ್ಟ ಮತ್ತು ಮಾನ್ವಿತಾ…!!

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ವಶಿಷ್ಟ ಸಿಂಹ ಮತ್ತು ಮಾನ್ವಿತ ಕಾಮತ್ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾ ಮುಗಿಯುವ ಹಂತಕ್ಕೆ ಬಂದಿದೆ. ಬಹುದಿನಗಳ ನಂತರ ನಾಗತಿಹಳ್ಳಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಚಿತ್ರದ ಹೆಸರಿನ ಬಗ್ಗೆ ತಲೆಕೆಡಿಸಿಕೊಂಡಿರುವ ನಾಗತಿಹಳ್ಳಿಯವರು ಚಿತ್ರದ ಕಥಾ ಲೇಖಕಿ ಕನಸು (ನಾಗತಿಹಳ್ಳಿ ಪುತ್ರಿ) ಅವರೊಂದಿಗೆ ಸಮಾಲೋಚಿಸು ತ್ತಿದ್ದಾರಂತೆ. ಇನ್ನೊಂದು ಐದಾರು ದಿನಗಳಲ್ಲಿ ಚಿತ್ರದ ಟೈಟಲ್ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ.

‘ಬಾ ನಲ್ಲೆ ಮಧುಚಂದ್ರಕೆ’, ‘ನನ್ನ ಪ್ರೀತಿಯ ಹುಡುಗಿ’, ‘ಅಮೃತಧಾರೆ’, ‘ಅಮೆರಿಕಾ ಅಮೆರಿಕಾ’ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಾಗತಿಹಳ್ಳಿ ಅವರ ಚಿತ್ರಗಳೆಂದರೆ ಪ್ರೇಕ್ಷಕರಿಗೆ ಅತೀವ ಕುತೂಹಲ. ಅವರು ರಮ್ಯ ಪ್ರೇಮ ಕಥೆಗಳನ್ನು ನಿರ್ದೇಶಿಸುವುದರಲ್ಲಿ ಸಿದ್ಧಹಸ್ತರು, ಅಲ್ಲದೆ ವಿದೇಶಗಳನ್ನು ತೋರಿಸುವಂತಹ ಅವರ ಕೌಶಲ್ಯ ಅಪ್ರತಿಮ.

ಹಲವು ಚಿತ್ರಗಳಲ್ಲಿ ಖಳನಾಯಕರಾಗಿ ಮಿಂಚಿದ್ದ ವಶಿಷ್ಟ ಸಿಂಹ ಗೆ ಇದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುವ ಅವಕಾಶ. ನಾಗತಿಹಳ್ಳಿಯವರ ವಿಶಿಷ್ಟ ಪ್ರೇಮಕಥೆಯ ನಾಯಕನಾಗುವುದು ಸಿಂಹಗೆ ಹೆಚ್ಚು ಖುಷಿ ತಂದಿದೆಯಂತೆ. ಹಿರಿಯ ನಟ ಅನಂತನಾಗ್ ಮತ್ತು ಸುಮಲತಾ ಅಂಬರೀಶ್ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡು ದೇಶಗಳ ನಡುವಿನ ಸಂಸ್ಕೃತಿ ಮತ್ತು ಸಂಪ್ರದಾಯಗಳ ವೈರುಧ್ಯವನ್ನು, ಕ್ರೈಂ ಮತ್ತು ಪ್ರೇಮ ಕತೆಯಲ್ಲಿ ಹದವಾಗಿ ಮಿಳಿತಗೊಳಿಸಿ ಚಿತ್ರದ ಕಥೆಯನ್ನು ಸಿದ್ಧಗೊಳಿಸಲಾಗಿದೆ ಎಂದಿದ್ದಾರೆ ನಿರ್ದೇಶಕರು.

ಚಿತ್ರದ ಡಬ್ಬಿಂಗ್ ಮತ್ತು ರೀರೆಕಾರ್ಡಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಗದಿತ ಅವಧಿಯಲ್ಲಿ ಮುಗಿಯಲಿವೆ ಎಂದಿದ್ದಾರೆ. ಚಿತ್ರವನ್ನು ಶಂಕರೇಗೌಡ ವೈ ಎನ್ ನಿರ್ಮಾಣ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇಂಗ್ಲೆಂಡ್ ನ ವಿಲ್ ಪ್ರೈಸ್ ಕ್ಯಾಮೆರಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರಂತೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top