RESPONSIVE LEADERBOARD AD AREA
Movie Reviews

ಪತ್ತೇದಾರಿ ಕಾದಂಬರಿ ಮಾದರಿಯ ಥ್ರಿಲ್ಲರ್ ‘ವೆನಿಲ್ಲಾ’

ವೆನಿಲ್ಲಾ ಅಂದ ಕೂಡಲೇ ನೆನಪಾಗೋದು ಐಸ್‌ಕ್ರೀಂ. ವೆನಿಲ್ಲಾವನ್ನು ಬೇರೆ ಉತ್ಪನ್ನಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಆದರೆ ವೆನಿಲ್ಲಾ ಫ್ಲೇವರ್‌ನ ಐಸ್‌ಕ್ರೀಂ ಜನಪ್ರಿಯ. ವೆನಿಲ್ಲಾ ಎಂಬ ಪದವೇ ಬಹಳ ಕ್ಯಾಚಿ, ಬೇಗ ಆಕರ್ಷಣೆ ಮೂಡಿಸುವಂತಹುದು. ಅಂತಹ ವೆನಿಲ್ಲಾ ಬಳಸಿಕೊಂಡು ಒಂದು ಕೊಲೆ ಮತ್ತು ಅದರ ಸುತ್ತ ಸುತ್ತಿಕೊಂಡಿರುವ ಹಲವು ನಿಗೂಢ ಸಂಗತಿಗಳ ವಿಷಯಗಳ ಮೇಲೆ ಸಸ್ಪೆನ್ಸ್‌ ಥ್ರಿಲ್ಲರ್ ಕಥೆಯನ್ನು ಹೇಳಿದ್ದಾರೆ ನಿರ್ದೇಶಕರು.

ಮರ್ಡರ್‌ ಮಿಸ್ಟರಿಯನ್ನು ರೋಚಕವಾದ ಚಿತ್ರಕಥೆಯ ಮೂಲಕ ಪ್ರೇಕ್ಷಕನ ಮುಂದಿಟ್ಟಾಗ ಅವನು ಸೀಟಿನ ತುದಿಗೆ ಜಾರುತ್ತಾನೆ. ಮರ್ಡರ್ ಮಿಸ್ಟರಿ ಸಿನಿಮಾಗಳ ವಿಶೇಷವೇ ಅಂತಹುದು. ಜನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಂದ ಬಯಸುವುದು ಕೂಡ ಅಂತಹ ಕುತೂಹಲ ಭರಿತ ಮನರಂಜನೆಯನ್ನೇ. ನಿರ್ದೇಶಕ ಜಯತೀರ್ಥ ಅವರು ಸಾಧ್ಯವಾದಷ್ಟು ರೋಚಕತೆಯನ್ನು ಚಿತ್ರಕಥೆಯಲ್ಲಿ ತುಂಬಿದ್ದಾರೆ, ಕಥೆಯ ಮುಂದಿನ ಮಜಲುಗಳನ್ನು ನೋಡುಗ ಎಣಿಸದ ಹಾಗೆ ದೃಶ್ಯಗಳನ್ನು ಪೋಣಿಸಿದ್ದಾರೆ.

ಕತೆ

ನಾಯಕ ಅವಿನಾಶ್‌ ಮತ್ತು ನಾಯಕಿ ಅನಘಾ ಬಾಲ್ಯ ಸ್ನೇಹಿತರು. ಒಂದಷ್ಟು ವರ್ಷಗಳ ನಂತರ ಭೇಟಿಯಾಗುತ್ತಾರೆ. ಭೇಟಿಯಾದ ದಿನವೇ ನಾಯಕಿ ವಿಚಿತ್ರವಾದ ಕ್ರೈಮ್ ಒಂದರಲ್ಲಿ ಸಿಲುಕಿಕೊಳ್ಳುತ್ತಾಳೆ. ಅವಳನ್ನು ನಾಯಕ ಅವಿ ರಕ್ಷಿಸಿ, ಮನೆಗೆ ಬಿಟ್ಟು ಬರುತ್ತಾನೆ. ಮರುದಿನವೇ ನಾಯಕಿ ನಾಯಕನಿಗೆ ಹೇಳದೇ ಕೇಳದೆ ವಿದೇಶಕ್ಕೆ ಹಾರುತ್ತಾಳೆ. ಇದರಿಂದ ಕ್ರೈಮ್ ವಿಷಯ ನಾಯಕನಿಗೆ ಆಪತ್ತು ತರುವ ಸಂದಿಗ್ಧ ಸೃಷ್ಟಿಯಾಗುತ್ತೆ, ಅವನು ನಾಯಕಿಯ ಬೆನ್ನುಹತ್ತಿ ವಿದೇಶಕ್ಕೆ ಹೋಗುತ್ತಾನೆ. ಆಗ ಅವನಿಗೆ ಕ್ರೈಮ್ ಸೀನ್ ನಲ್ಲಿ ಅಸಲಿ ಏನು ನಡೆದಿತ್ತು ಎಂಬ ಸಂಪೂರ್ಣ ಚಿತ್ರಣ ಸಿಗುತ್ತೆ. ಮತ್ತೊಂದು ಕಡೆ ನಾಯಕಿಗೆ ಸಂಬಂಧಪಟ್ಟಂತೆ ಮತ್ತೆರೆಡು ಕೊಲೆಗಳು ನಡೆದಿರುತ್ತವೆ. ಇದನ್ನು ಬೆನ್ನತ್ತಿದಾಗ ಕೊಲೆಗಳ ಸುರುಳಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ತಾಂತ್ರಿಕತೆ

ನಿರ್ದೇಶಕರ ರೋಚಕ ಮರ್ಡರ್ ಮಿಸ್ಟರಿ ಕಥೆಗೆ ಅತ್ಯುತ್ತಮ ತಾಂತ್ರಿಕ ಗುಣಮಟ್ಟದ ನಿರೂಪಣೆಯ ಅಗತ್ಯವಿತ್ತು. ಜಯತೀರ್ಥ ಅವರು ಮಗದೊಮ್ಮೆ ತಾನೊಬ್ಬ ಒಳ್ಳೆಯ ಕಥೆಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ಭರತ್ ಬಿ.ಜೆ. ಸಂಗೀತ ನಿರ್ದೇಶನದ ‘ಆವರಿಸುವ ಬಾ ಮೆಲ್ಲನೆ..’ ಹಾಡು ತಲೆಯಲ್ಲಿ ಉಳಿಯುತ್ತದೆ. ಹಿನ್ನೆಲೆ ಸಂಗೀತ ಕೂಡಾ ಬಹಳ ಚೆನ್ನಾಗಿಯೇ ಇದೆ. ಕಿರಣ್ ಹಂಪಾಪುರ ಛಾಯಾಗ್ರಹಣ ಕಲರ್ ಫುಲ್. ಮೊದಲ ಚಿತ್ರದಲ್ಲೇ ನಾಯಕ ಅವಿನಾಶ್ ಗಮನಸೆಳೆಯುತ್ತಾರೆ. ನಾಯಕಿ ಸ್ವಾತಿ ಒಳ್ಳೆಯ ನಟಿಯಾಗುವ ಭರವಸೆ ನೀಡುತ್ತಾರೆ. ರವಿಶಂಕರ್ ಗೌಡ ನಿರ್ವಹಿಸಿರುವ ಪೊಲೀಸ್ ಆಫೀಸರ್ ಪಾತ್ರಕ್ಕೆ ಮತ್ತಷ್ಟು ಪೋಷಣೆಯ ಅವಶ್ಯಕತೆ ಇತ್ತು.

ಕೊನೆಯ ಮಾತು

ವೆನಿಲ್ಲಾ ಚಿತ್ರದಲ್ಲಿ ರಂಜನೆಗಿಂತ ರೋಚಕತೆ ಹೆಚ್ಚಿದೆ. ವೆನಿಲ್ಲಾ ಮರ್ಡರ್‌ ಮಿಸ್ಟರಿಯು ಪ್ರೇಕ್ಷಕರನ್ನು ಕೆಲವೊಮ್ಮೆ ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿರೋದೆ ಚಿತ್ರದ ದೊಡ್ಡ ಹೆಚ್ಚುಗಾರಿಕೆ. ಒಂದು ಒಳ್ಳೆಯ ಪತ್ತೇದಾರಿ ಕಾದಂಬರಿಯ ಗುಣ ವೈಶಿಷ್ಟ್ಯಗಳನ್ನು ಹೊಂದಿರುವ ಸಿನಿಮಾ. ಸಸ್ಪೆನ್ಸ್ ಸಿನಿಮಾಗಳಲ್ಲಿ ಆಸಕ್ತಿ ಉಳ್ಳವರು ಒಮ್ಮೆ ನೋಡಬಹುದು.

ರೇಟಿಂಗ್ 3/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top