RESPONSIVE LEADERBOARD AD AREA
Film News

ಹೊಟ್ಟೆ ಹುಣ್ಣಾಗುವಷ್ಟು ನಗಿಸಿ ಸುಸ್ತು ಮಾಡಲು ಬರುತ್ತಿದೆ ವಾಸ್ತು ಪ್ರಕಾರ

ಲೇಟ್ ಅದರೂ ಲೇಟೆಸ್ಟ್ ಆಗಿ ಈ ವಾರ ಬಿಡುಗಡೆಯಾಗುತ್ತಿದೆ ವಾಸ್ತು ಪ್ರಕಾರ, ವಿಕಟ ಕವಿ ಯೋಗರಾಜ ಭಟ್ಟರ ಮತ್ತೊಂದು ಪರಮ ಓತ್ಲಾ ಹಾಸ್ಯಮಯ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ, ಹಿರಿಯ ನಟ ನವರಸ ನಾಯಕ ಜಗ್ಗೇಶ್ ಮತ್ತು ಸಿಂಪಲ್ ಸ್ಟಾರ್ ಎಂದೇ ಖ್ಯಾತರಾಗಿರುವ ರಕ್ಷಿತ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ವಾಸ್ತು ಪ್ರಕಾರ
ಸಹಜವಾಗಿಯೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಈ ಚಿತ್ರ ಮುಲಾಜಿಲ್ಲದೆ ಗೆದ್ದೇ ಗೆಲ್ಲುತ್ತದೆ ಅಂತ ನಮಗೆ ಅನಿಸುತ್ತಿದೆ, ಅದಕ್ಕೆ ಮುಖ್ಯ ಕಾರಣಗಳು ಏನೆಂದರೆ –

1. ವಿಕಟಕವಿ ಯೋಗರಾಜ ಭಟ್ಟರು – ಕನ್ನಡ ಚಿತ್ರರಂಗದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದ ”ಮುಂಗಾರು ಮಳೆ”ಯಂತಹ ಚಿತ್ರವನ್ನು ಕೊಟ್ಟ ಯೋಗರಾಜ ಭಟ್ಟರಂತೆ ಜನರ ನಾಡಿ ಮಿಡಿತ ಬಲ್ಲ ಮತ್ತೊಬ್ಬ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿ ಇಲ್ಲ, ಐದು ನಿಮಿಷಕ್ಕೆ ಐವತ್ತು ಅರ್ಥ ಕೊಡುವ ಹಾಡು ಬರೆಯಬಲ್ಲ, ಒಂದು ಸಣ್ಣ ಕಥೆಯ ಎಳೆ ಇಟ್ಟುಕೊಂಡು ಮೂರು ಘಂಟೆ ಸಿನಿಮಾ ಮಾಡಬಲ್ಲ ಚಾಕಚಕ್ಯತೆ ಉಳ್ಳ ಭಟ್ಟರು ಮಾಡಿದ ಸಿನಿಮಾಗಳಲ್ಲಿ ಹೆಚ್ಚಿನವು ಬಾಕ್ಸ್ ಆಫೀಸ್ ನಲ್ಲಿ ಜಯಭೇರಿ ಬಾರಿಸಿವೆ. ವಿಭಿನ್ನ ನಿರೂಪಣೆ ಮತ್ತು ಕಚಗುಳಿಯಿಡುವ ತರ್ಲೆ ಸಂಭಾಷಣೆಗಳು ಭಟ್ಟರ ಸಿನಿಮಾಗಳ ದೊಡ್ಡ ತಾಕತ್ತು. ಭಟ್ಟರ ಬ್ರಾಂಡ್ ಸಿನಿಮಾಗಳನ್ನು ಆದರಿಸುವ ದೊಡ್ಡ ಸಂಖ್ಯೆಯ ಪ್ರೇಕ್ಷಕರು ರಾಜ್ಯಾದ್ಯಂತ ಇದ್ದಾರೆ, ಹೀಗಾಗಿಯೇ ಜನರು ಯೋಗರಾಜ ಭಟ್ ಸಿನಿಮ ಅಂದರೆ ಒಂದ್ಸಾರಿ ಆರಾಮಾಗಿ ನೋಡಬಹುದು ಅಂದುಕೊಂಡು ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಾರೆ.

2. ನವರಸ ನಾಯಕ ಜಗ್ಗೇಶ್ – ತನ್ನ ಹಾಸ್ಯ ಚಟಾಕಿಯಿಂದ, ಮನೋಘ್ನ ಅಭಿನಯದಿಂದ ಪ್ರೇಕ್ಷಕರನ್ನು 3 ದಶಕಗಳಿಂದ ರಂಜಿಸುತ್ತಾ ಬಂದಿದ್ದಾರೆ ನವರಸ ನಾಯಕ ಜಗ್ಗೇಶ್, ಇತ್ತೀಚಿನ ವರ್ಷಗಳಲ್ಲಿ ಬಂದ ಅವರ ಚಿತ್ರಗಳಲ್ಲಿ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಪ್ರೇಕ್ಷಕರಿಗೆ ಇನ್ನಿಲ್ಲದಂತೆ ಮೋಡಿ ಮಾಡಿದ್ದವು, ಒಬ್ಬ ಸಶಕ್ತ ನಿರ್ದೇಶಕ ಅವರನ್ನು ಚೆನ್ನಾಗಿ ಬಳಸಿಕೊಂಡರೆ ಅವರೆಂತಹ ಮಾಸ್ಟರ್ ಬ್ಲಾಸ್ಟರ್ ಪರ್ಫಾರ್ಮರ್ ಎಂದು ಈ ಎರಡು ಸಿನಿಮಾಗಳು ತೋರಿಸಿಕೊಟ್ಟಿವೆ, ಈಗ ವಿಕಟ ಕವಿ ಭಟ್ಟರ ಕೈಗೆ ಸಿಕ್ಕಿರುವ ನವರಸ ನಾಯಕನ ಬಾಯಿಯಿಂದ ಹೊರಡುವ ಚಿಂದಿ ಚಿತ್ರಾನ್ನ ಡೈಲಾಗ್ ಗಳೇ ಸಾಕು ವಾಸ್ತು ಪ್ರಕಾರ ಚಿತ್ರವನ್ನು ಹಿಟ್ ಮಾಡಲು.

3. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ – ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮತ್ತು ಉಳಿದವರು ಕಂಡಂತೆ ಚಿತ್ರಗಳಿಂದ ಸಾಕಷ್ಟು ಹೆಸರಾದ ರಕ್ಷಿತ್ ತಮ್ಮದೇ ಆದ ಪ್ರೇಕ್ಷಕ ವೃಂದವನ್ನು ಕಟ್ಟಿಕೊಂಡಿದ್ದಾರೆ, ಚುರುಕು ಸಂಭಾಷಣೆ ಮತ್ತು ನಟನೆಯಿಂದ ಸಿಂಪಲ್ ಆಗೇ ಮನಗೆಲ್ಲುವ ಸಿಂಪಲ್ ಸ್ಟಾರ್ ಮತ್ತೊಮ್ಮೆ ಲವರ್ ಬಾಯ್ ಆಗಿ ”ವಾಸ್ತು ಪ್ರಕಾರ”ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಅವರ ಜೊತೆಗಿನ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ದೂಡುವುದು ಖಂಡಿತ. ಮಲ್ಟಿಪ್ಲೆಕ್ಷ್ ಪ್ರೇಕ್ಷಕರಲ್ಲಿ ಹೆಚ್ಚು ಜನಪ್ರಿರಾಗಿರುವ ರಕ್ಷಿತ್ ವಾಸ್ತು ಪ್ರಕಾರ ಮಲ್ಟಿಪ್ಲೆಕ್ಷ್ ನಲ್ಲಿ ಮಸ್ತು ಬಿಸಿನೆಸ್ ಮಾಡಲು ಸಹಾಯಕಾರಿಯಾಗಿದ್ದಾರೆ.

4. ಹರಿಕೃಷ್ಣ ಸಂಗೀತ – ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕ ಹರಿ ಕೃಷ್ಣ ಅವರು ಕೆಲವು ಗಮನ ಸೆಳೆಯುವ ಹಾಡುಗಳನ್ನು ಚಿತ್ರಕ್ಕೆ ಕೊಟ್ಟಿದ್ದಾರೆ. ಬಿದ್ದಲ್ಲಿ ಬೇರೂರಿ, ಸಿಂಪ್ಲಿ ಮೆಟ್ ಹರ್ ಸಂ ಟೈಮ್ ಬ್ಯಾಕ್ ಮತ್ತು ಬೇಸರ ಕಾತರ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ, ಚಿತ್ರವನ್ನು ನೋಡುತ್ತಾ ಹಾಡುಗಳು ಹೆಚ್ಚು ಇಷ್ಟ ಆಗುವ ಸಾಧ್ಯತೆಗಳಿವೆ.

5. ಫುಲ್ ಟೈಮ್ ಪಾಸು ಕಾಮಿಡಿ ಫಿಲಂ ಗುರು – ಹೇಳಿ ಕೇಳಿ ಇದು ಓತ್ಲ ಕಿಂಗ್ ಯೋಗರಾಜ ಭಟ್ಟರ ಸಿನಿಮಾ, ಜನಕ್ಕೆ ಬೇಕಾಗಿರುವುದು ಮಜಾ, ಭಟ್ಟರು ಕೊಡುವುದೂ ಅದನ್ನೇ, ಜನ ಕೇಳಿದ್ದನ್ನು ಕೊಟ್ಟು ಕಳಿಸುವಲ್ಲಿ ಭಟ್ಟರು ಎತ್ತಿದ ಕೈ, ವಾಸ್ತು ಪ್ರಕಾರ ಚಿತ್ರದಲ್ಲಿರುವ ಸಾಕಷ್ಟು ಹಾಸ್ಯ ಸನ್ನಿವೇಶಗಳು, ಕಚಗುಳಿ ಇದುವ ಸಂಭಾಷಣೆಗಳು ಜನರು ಎಲ್ಲಾ ಮರೆತು ನಕ್ಕು ನಲಿಯುವಂತೆ ಮಾಡಲಿವೆ. ನಮ್ಮ ಪ್ರೇಕ್ಷಕರು ಕಾಮಿಡಿ ಸಿನಿಮಾಗಳನ್ನೂ ಬೇಗ ಒಪ್ಪಿಕೊಳ್ಳುತ್ತಾರೆ, ಹೀಗಾಗಿ ವಾಸ್ತು ಸೂಪರ್ ಹಿಟ್ ಆಗುವುದು ಗ್ಯಾರಂಟಿ.

RESPONSIVE LEADERBOARD AD AREA
RESPONSIVE LEADERBOARD AD AREA
To Top