RESPONSIVE LEADERBOARD AD AREA
Film News

ಹಲವು ಸ್ಟಾರ್ ನಟರ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಸೂರಿ..!

ಕನ್ನಡದ ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಸೂರಿ ಅವರ ಚಿತ್ರಗಳೆಂದರೆ ಅಭಿಮಾನಿಗಳಿಗೆ ಏನೋ ಕುತೂಹಲ. ಒಂದು ಸಲಕ್ಕೆ ಒಂದೇ ಚಿತ್ರವನ್ನು ಕೈಗೆತ್ತಿಕೊಳ್ಳುವ ಸೂರಿ, ಧನಂಜಯ್ ನಾಯಕರಾಗಿರುವ ‘ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಈ ನಡುವೆ ಹೊಸ ಸುದ್ದಿಯೊಂದು ಬಂದಿದ್ದು ಸೂರಿ, ಕಿಚ್ಚ ಸುದೀಪ ಅವರಿಗಾಗಿ ಹೊಸ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ.

ಈ ಕುರಿತು ಮಾತನಾಡಿರುವ ಸೂರಿ, “ಈ ಸುದ್ದಿ ನಿಜ. ನಾನು ಮತ್ತು ಸುದೀಪ್ ಈಗಾಗಲೇ ಒಪ್ಪಿಕೊಂಡಿರುವ ಸಾಕಷ್ಟು ಕೆಲಸಗಳಲ್ಲಿ ಬಿಜಿಯಾಗಿದ್ದೇವೆ. ಈ ಚಿತ್ರದ ಕುರಿತು ಸುದೀಪ್ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಎಲ್ಲವೂ ಅಂತಿಮವಾದ ಬಳಿಕ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುತ್ತೇವೆ. ಈ ಚಿತ್ರಕ್ಕೆ ಕತೆಯೊಂದು ಹೊಳೆದಿದ್ದು, ಟೈಟಲ್ ಕೂಡ ಮನಸ್ಸಿನಲ್ಲಿದೆ. ಆದರೆ ಯಾವುದು ಅಂತಿಮವಾಗದ ಕಾರಣ ಇದರ ಬಗ್ಗೆ ಅಧಿಕೃತವಾಗಿ ಈಗ ಹೇಳಲಾರೆ” ಎನ್ನುತ್ತಾರೆ ಸೂರಿ.

ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ಸೂರಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎನ್ನುವುದು. ಈ ಸುದ್ದಿಯನ್ನು ಒಪ್ಪಿಕೊಂಡಿರುವ ಸೂರಿ, “ದರ್ಶನ್ ಅವರಿಗೆ ಸೂಕ್ತವಾಗುವ ಕಥೆಯೊಂದು ಸಿದ್ಧವಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ದರ್ಶನ್ ಅವರಿಗಾಗಿ ಚಿತ್ರ ಮಾಡುವುದು ಖಚಿತ’ ಎಂದಿದ್ದಾರೆ.

ಇದಿಷ್ಟೇ ಅಲ್ಲದೆ ಸೂರಿ, ಪುನೀತ್ ರಾಜಕುಮಾರ್ ಮತ್ತು ಶಿವಣ್ಣರನ್ನು ಒಂದೇ ಚಿತ್ರದಲ್ಲಿ ತೋರಿಸಲಿದ್ದಾರೆ ಎನ್ನುವ ಸುದ್ದಿ ಬಗ್ಗೆ ಕೇಳಿದಾಗ ಈ ಸುದ್ದಿಯನ್ನು ಒಪ್ಪಿಕೊಳ್ಳುವ ಸೂರಿ, “ಹೌದು.. ಅಂತಹ ಒಂದು ಸಾಧ್ಯತೆ ಇದೆ. ಆದರೆ ಅದಕ್ಕೆ ಅತ್ಯುತ್ತಮವಾದ ಕಥೆ ಅವಶ್ಯಕವಿದೆ. ಎರಡು- ಮೂರು ಐಡಿಯಾಗಳು ಇದ್ದು ಅವು ಅಂತಿಮಗೊಂಡಾಗ ಖಂಡಿತ ಅವರ ಸಿನಿಮಾ ಮಾಡಲಿದ್ದೇನೆ. ಆದರೆ ಅದು ‘ಟಗರು’ ಚಿತ್ರದ ಸೀಕ್ವೆಲ್ ಆಗಿರುವುದಿಲ್ಲ. ಬೇರೆಯದೇ ಚಿತ್ರಕಥೆಯನ್ನು ಅದಕ್ಕೋಸ್ಕರ ಸಿದ್ಧಪಡಿಸಲಿದ್ದೇನೆ” ಎಂದಿದ್ದಾರೆ ಸೂರಿ.

ಸೂರಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಬಳಿಕ, ‘ಕಾಗೆ ಬಂಗಾರ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೂರಿ, “ಈ ಪ್ರಾಜೆಕ್ಟ್ ಕೈಬಿಡುವ ಯೋಚನೆಯಲ್ಲಿದ್ದೆ. ಆದರೆ ಅಭಿಮಾನಿಗಳು ಮತ್ತು ಸ್ನೇಹಿತರು ಈ ಚಿತ್ರದ ಬಗ್ಗೆ ಸಾಕಷ್ಟು ಬಾರಿ ಕೇಳುತ್ತಿದ್ದುದರಿಂದ ಇದೇ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಈಗಾಗಲೇ ಪೂರ್ಣವಾದ ಸ್ಕ್ರಿಪ್ಟ್ ಸಿದ್ಧವಾಗಿದ್ದು, ‘ಮಂಕಿ ಟೈಗರ್..’ ಬಳಿಕ ಈ ಚಿತ್ರದ ಕೆಲಸದಲ್ಲಿ ತೊಡಗಿಕೊಳ್ಳಲಿದ್ದೇನೆ” ಎಂದರು.

ಸ್ವತಃ ಅತ್ಯುತ್ತಮ ಚಿತ್ರಕಾರರಾಗಿರುವ ಸೂರಿ, ಒಬ್ಬ ಬಹುಮುಖ ಪ್ರತಿಭೆ. ಅವರು ಅತ್ಯುತ್ತಮ ಪೇಂಟಿಂಗ್ಸ್ ಅನ್ನು ಮಾಡಬಲ್ಲರು. ಅವರ ಎಲ್ಲ ಪೇಂಟಿಂಗ್ಸ್ ಗಳನ್ನು ಪ್ರದರ್ಶಿಸುವ ಕುರಿತು ಆಲೋಚನೆಯಲ್ಲಿದ್ದಾರಂತೆ. ಇದಲ್ಲದೆ ಶಾರ್ಟ್ ಫಿಲಂಸ್ ಗಳನ್ನು ಮಾಡುವ ಆಲೋಚನೆಯೂ ಇದ್ದು ಅವುಗಳನ್ನು ಡಿಜಿಟಲ್ ಪ್ಲಾಟ್ ಫಾರ್ಮ್ ಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ.

ಹೀಗೆ ವಿಭಿನ್ನವಾದ ಕನಸುಗಳನ್ನು ಕೈತುಂಬಾ ಇಟ್ಟುಕೊಂಡಿರುವ ಸೂರಿಯವರಿಂದ ಖಂಡಿತವಾಗಿಯೂ ಅತ್ಯುತ್ತಮವಾದ ಪ್ರೊಡಕ್ಟ್ ಅನ್ನು ನಿರೀಕ್ಷಿಸಬಹುದು. ಈ ಪ್ರತಿಭಾವಂತ ನಿರ್ದೇಶಕರಿಗೆ ಆಲ್ ದ ಬೆಸ್ಟ್ ಹೇಳೋಣವೇ..?!

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top