RESPONSIVE LEADERBOARD AD AREA
Film News

ಈ ಸಲ ಜನ್ಮದಿನ ಆಚರಿಸಿಕೊಳ್ಳದ ಯಶ್ ರ ಮನದಾಳದ ಮಾತು..!

ಕೆಜಿಎಫ್ ನ ದೊಡ್ಡ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಗೆ ಈ ದಿನ (ಜನವರಿ 8) ಜನ್ಮದಿನ. ಈ ಬಾರಿ ತಮ್ಮ ಜನ್ಮ ದಿನಾಚರಣೆಯನ್ನು ಮಾಡಿಕೊಳ್ಳದಿರಲು ಯಶ್ ತೀರ್ಮಾನಿಸಿದ್ದರು. ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ತೀರಿಕೊಂಡಿದ್ದರಿಂದ ಆ ಜನ್ಮದಿನ ಆಚರಿಸಿಕೊಳ್ಳುವ ಮನಸ್ಸಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದರು.

2018 ಯಶ್ ಪಾಲಿಗೆ ಅದೃಷ್ಟದ ವರ್ಷ ಎನ್ನಬಹುದು ಈ ಕುರಿತು ಯಶ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಕೇಳೋಣ ಬನ್ನಿ.

“ನನ್ನ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬುದು ನನ್ನ ದೊಡ್ಡ ಕನಸಾಗಿತ್ತು. ಅದೀಗ ಕೈಗೂಡಿದೆ. ಪ್ರಪಂಚದಾದ್ಯಂತ ಬಿಡುಗಡೆಯಾದ ಎಲ್ಲಾ ಭಾಷೆಗಳ ಪ್ರೇಕ್ಷಕರು ಕೆಜಿಎಫ್ ಅನ್ನು ಒಪ್ಪಿಕೊಂಡಿದ್ದಾರೆ.ಈ ಎಲ್ಲಾ ಭಾಷೆಗಳ ಅಭಿಮಾನಿಗಳು ನನ್ನನ್ನು ಗುರುತಿಸುವುದು ಅತೀ ದೊಡ್ಡ ಸಂತೋಷ ನೀಡಿದೆ. ಜೊತೆಗೆ ಇದೇ ಸಂದರ್ಭದಲ್ಲಿ ನನ್ನ ಮಗಳು ಹುಟ್ಟಿದ್ದು ಅತ್ಯಂತ ವಿಶೇಷವಾದ ಸಂಗತಿ”

ಯಶ್ ಅವರು ಕಷ್ಟಪಟ್ಟು ಮೇಲೆ ಬಂದ ನಟ. ಧಾರಾವಾಹಿಗಳಿಂದ ಪ್ರಾರಂಭಿಸಿ ‘ಕೆಜಿಎಫ್’ ವರೆಗೆ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಅವರ ಚಿತ್ರಗಳು ಬಿಡುಗಡೆಯಾಗುವಾಗ ಹಲವು ಸಮಸ್ಯೆಗಳನ್ನು ಎದುರಿಸಿದ್ದುಂಟು. ‘ಗೂಗ್ಲಿ’, ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ಮೊನ್ನೆಯ ‘ಕೆಜಿಎಫ್’ ವರೆಗೂ ಬಿಡುಗಡೆ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ಗೆದ್ದಿದ್ದಾರೆ. ಈ ಕುರಿತು ಯಶ್ ಹೀಗೆನ್ನುತ್ತಾರೆ.
” ನನಗೆ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಲು ಒಂದು ರೀತಿಯ ಸಂತೋಷವಾಗುತ್ತದೆ. ಸವಾಲುಗಳ ಕಾರಣದಿಂದಲೇ ಈಗ ಈ ಹಂತ ತಲುಪಿದ್ದೇನೆ. ಬಹುಶಃ ಯಶಸ್ಸನ್ನು ಮಾತ್ರವೇ ಅನುಭವಿಸಿದ್ದಲ್ಲಿ, ಈ ಗೆಲುವಿನ ಖುಷಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಪ್ರತಿಸಲ ಎದುರಾಗುವ ವಿಭಿನ್ನ ಸವಾಲನ್ನು ಎದುರಿಸಿದ ನಂತರ ಇನ್ನಷ್ಟು ಗಟ್ಟಿಯಾಗಿದ್ದೇನೆ. ಅಭಿಮಾನಿಗಳ ದೊಡ್ಡ ಬಲ ನನ್ನ ಬೆನ್ನಿಗಿದೆ. ಹಾಗಾಗಿ ಯಾರನ್ನಾದರೂ ಎದುರಿಸಬಲ್ಲೆ ಎಂಬ ಧೈರ್ಯ ಬಂದಿದೆ”

“ಕೆಜಿಎಫ್ ನ ಯಶಸ್ಸಿನ ಜೊತೆಯಲ್ಲಿಯೇ ಜವಾಬ್ದಾರಿ ಕೂಡ ಹೆಚ್ಚಿದೆ. ಕೆಜಿಎಫ್ ಗಾಗಿ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೆ. ಮುಂದೆಯೂ ಕೂಡ ನನ್ನ ಚಿತ್ರಗಳಿಗೆ, ಶೇಕಡ ನೂರರಷ್ಟು ಶ್ರಮ ವಹಿಸಲಿದ್ದೇನೆ. ಭಿನ್ನ ಭಾಷೆಯ ಜನರನ್ನು ತಲುಪುವಂತಹ ಸಬ್ಜೆಕ್ಟ್ ಗಳಿದ್ದರೆ ನನ್ನ ಚಿತ್ರವನ್ನು ಬೇರೆ ರಾಜ್ಯಗಳ ಮಾರುಕಟ್ಟೆಗೂ ಕೊಂಡೊಯ್ಯುತ್ತೇನೆ. ಈಗಾಗಲೇ ಹಲವು ರಾಜ್ಯಗಳ ಸಿನಿ ತಯಾರಕರು ನನ್ನನ್ನು ಸಂಪರ್ಕಿಸಿದ್ದಾರೆ. ಹಲವು ಪ್ರಸ್ತಾಪಗಳನ್ನು ಇಟ್ಟಿದ್ದಾರೆ. ಎಲ್ಲವನ್ನೂ ನೋಡಿಕೊಂಡು ಮುಂದುವರಿಯಲಿದ್ದೇನೆ” ಎಂದು ಮನಸ್ಸು ಬಿಚ್ಚಿಡುತ್ತಾರೆ.

“ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಕೆಜಿಎಫ್ ಚಿತ್ರಕ್ಕಿಂತ ಮೊದಲು ಕೂಡ ಯಶಸ್ಸನ್ನು ಕಂಡಿದ್ದೇನೆ. ಹಾಗಾಗಿ ಈಗ ಬಂದಿರುವ ಯಶಸ್ಸನ್ನು ತಲೆಗೇರಿಸಿಕೊಳ್ಳದೆಯೇ ನಿಭಾಯಿಸುವುದನ್ನು ಅರ್ಥ ಮಾಡಿಕೊಂಡಿದ್ದೇನೆ” ಎನ್ನುತ್ತಾರೆ ಯಶ್.

ಯಶ್ ಅವರ ಮುಂದಿನ ಯೋಜನೆಯ ಬಗ್ಗೆ ಕೇಳಿದರೆ ‘ವೆಯಿಟ್ ಅಂಡ್ ವಾಚ್’ ಎಂದು ಮುಗುಳ್ನಗುವ ಯಶ್ “ನಾನು ನನ್ನ ಮುಂದಿನ ಚಿತ್ರದ ಬಗ್ಗೆ ಈಗಾಗಲೇ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಘೋಷಿಸಲಿದ್ದೇನೆ. ನಾನು ಒಬ್ಬ ಮಹತ್ವಕಾಂಕ್ಷೆಯ ಮನುಷ್ಯ. ಮಾಡುವುದನ್ನು ದೊಡ್ಡದಾಗಿ ಮಾಡಬೇಕೆಂಬ ಕನಸು ಇಟ್ಟುಕೊಂಡಿರುವವನು. ಒಟ್ಟಿನಲ್ಲಿ ನನ್ನ ಅಭಿಮಾನಿಗಳು ಹೆಮ್ಮೆಪಡುವಂತಹ ಚಿತ್ರಗಳನ್ನು ಮುಂದೆಯೂ ಮಾಡಬೇಕೆಂಬ ಸಂಕಲ್ಪ ಇಟ್ಟುಕೊಂಡಿದ್ದೇನೆ” ಎನ್ನುತ್ತಾರೆ.

ಯಶ್ ಚಿತ್ರ ಜೀವನ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ‘ನಮ್ ಸಿನೆಮಾ’ ತಂಡ ಅವರ ಜನ್ಮದಿನದ ಸಂದರ್ಭದಲ್ಲಿ ಶುಭ ಹಾರೈಸುತ್ತದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top