RESPONSIVE LEADERBOARD AD AREA
Film News

ಅಂದು ಬುಲ್ ಬುಲ್, ಇಂದು ರ‍್ಯಾಂಬೋ 2

ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದ ಬುಲ್ ಬುಲ್ ಸಿನಿಮಾ ನೋಡದವರು ಯಾರಿದ್ದಾರೆ ಹೇಳಿ? 2013ರ ವಿಧಾನಸಭಾ ಚುನಾವಣೆಯ ರಿಸಲ್ಟ್ (ಮೇ 8) ಬಂದ ಎರಡೇ ದಿನಕ್ಕೆ (ಮೇ 10) ಬಿಡುಗಡೆಯಾಗಿದ್ದ ಬುಲ್ ಬುಲ್ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಗುಲ್ಲೆಬ್ಬಿಸಿ ಆಗಿನ ಕಾಲಕ್ಕೆ ರೆಕಾರ್ಡ್ ಕಲೆಕ್ಷನ್ ಮಾಡಿತ್ತು. ಆ ಚಿತ್ರವನ್ನು ಚಿತ್ರದ ನಾಯಕ ದರ್ಶನ್ ಅವರ ಹೋಂ ಬ್ಯಾನರ್ ನಲ್ಲಿ ಚಿತ್ರದ ತಂತ್ರಜ್ಞರೇ ಹಣ ಹೂಡಿ ನಿರ್ಮಿಸಿದ್ದರು. ಚಿತ್ರದ ಬಿಡುಗಡೆಗೆ ಮುಂಚೆಯೇ ಹರಿಕೃಷ್ಣ ಸಂಗೀತ ನೀಡಿದ್ದ ಹಾಡುಗಳು ದೊಡ್ಡ ಸೌಂಡು ಮಾಡಿದ್ದವು. ಬಿಡುಗಡೆಗೆ ಮುಂಚೆಯೇ ಜೀ಼ ಟಿವಿ ಚಿತ್ರದ ಕಿರುತೆರೆಯ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತ್ತು. ಚಿತ್ರ ನರ್ತಕಿಯನ್ನು ಮೇನ್ ಥಿಯೇಟರ್ ಮಾಡಿಕೊಂಡು ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಈಗ 2018 ರಲ್ಲಿ ವಿಧಾನಸಭಾ ಚುನಾವಣೆ ರಿಸಲ್ಟ್ ಬಂದ ಮೂರೇ ದಿನಕ್ಕೆ ಬಿಡುಗಡೆಯಾಗುತ್ತಿದೆ ‘ರ‍್ಯಾಂಬೋ 2’. ನಾಯಕ ಶರಣ್ ಅವರ ಹೋಂ ಬ್ಯಾನರ್ ನಲ್ಲಿ ತಂತ್ರಜ್ಞರೇ ನಿರ್ಮಿಸಿರುವ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಎಲ್ಲಾ ಹಾಡುಗಳು ವೈರಲ್ ಆಗಿರುವ, ಈಗಾಗಲೇ ಜೀ಼ ಟಿವಿಗೆ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿರುವ, ನರ್ತಕಿ ಚಿತ್ರಮಂದಿರವನ್ನು ಮೇನ್ ಥಿಯೇಟರ್ ಮಾಡಿಕೊಂಡು ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ “ರ‍್ಯಾಂಬೋ 2” ಬುಲ್ ಬುಲ್ ಚಿತ್ರದಂತೆಯೇ ದೊಡ್ಡ ಯಶಸ್ಸು ಕಾಣಲಿ ಎಂಬ ಆಶಯ ನಮ್ಮದು.

ಅಂದು ಬುಲ್ಬುಲ್ ಚಿತ್ರದಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಂಡಿದ್ದ ಶರಣ್ ಇಂದು ಪೂರ್ಣ ಪ್ರಮಾಣದ ನಾಯಕ ನಟರಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಬೆಳೆದಿದ್ದಾರೆ. ಅವರು ರ‍್ಯಾಂಬೋ 2 ಚಿತ್ರದ ಕಥೆಯನ್ನು ಬಹಳ ಇಷ್ಟಪಟ್ಟು, ಮೆಚ್ಚಿ, ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚುನಾವಣೆಯ ಗೋಜಲು, ಹಗ್ಗ ಜಗ್ಗಾಟ ಮತ್ತು ಬೇಸಿಗೆ ರಜೆ ಮುಗಿಯುತ್ತಿರುವ ಈ ಭರದಲ್ಲಿ ಒಂದೊಳ್ಳೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಹಪಹಪಿಯಲ್ಲಿ ಸಿನಿ ಪ್ರಿಯರಿದ್ದಾರೆ. ಆ ಒಂದೊಳ್ಳೆ ಕನ್ನಡ ಸಿನಿಮಾ “ರ‍್ಯಾಂಬೋ 2” ಆಗಲಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top