RESPONSIVE LEADERBOARD AD AREA
Film News

ಶಿವಣ್ಣರ 33 ವರ್ಷಗಳ ಸುದೀರ್ಘ ಸಿನಿ ಪಯಣ…!

1986ರ ‘ಆನಂದ್’ ಚಿತ್ರದಿಂದ ಪ್ರಾರಂಭಿಸಿ, 2019ರ ‘ಆನಂದ್’ ವರೆಗೆ 33 ವರ್ಷಗಳ ಸುದೀರ್ಘ ಚಿತ್ರ ಜೀವನದ ಒಂದು ಸುತ್ತು ಪೂರೈಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇನ್ನೂ ಯಶಸ್ಸಿನ ಓಟ ಮುಂದುವರೆಸಿದ್ದಾರೆ. ತಮ್ಮ ಈ ಅದ್ಭುತ ಸಿನಿ ಜರ್ನಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

“33 ವರ್ಷಗಳು ಹೇಗೆ ಕಳೆದುಹೋದವು..! ನೆನಪಿಸಿಕೊಂಡಾಗ 33 ಕ್ಷಣಗಳಂತೆ ಅನಿಸುತ್ತದೆ. ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳ ಹಾರೈಕೆಯಿಂದ ಇಷ್ಟು ವರ್ಷಗಳವರೆಗೆ ಚಿತ್ರರಂಗದಲ್ಲಿದ್ದೇನೆ. ಒಂದೊಂದು ವರ್ಷ ಕಳೆದಂತೆ ಎಲ್ಲರಿಂದ ಸಿಕ್ಕ ಅಮಿತ ಪ್ರೀತಿಯನ್ನು ನೆನಪಿಸಿಕೊಂಡು ಪುಳಕಿತನಾಗಿದ್ದೇನೆ. ಇದೆಲ್ಲವನ್ನೂ ಪಡೆದ ನಾನು ಅದೃಷ್ಟವಂತ. ಸ್ನೇಹಿತರ, ಹಿರಿಯರ, ವಿಮರ್ಶಕರ ಸಲಹೆ, ವಿಮರ್ಶೆ, ಟೀಕೆಗಳಿಂದ ನಿರಂತರವಾಗಿ ನನ್ನ ನಟನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಉತ್ತಮಗೊಳಿಸಿ ಕೊಳ್ಳುತ್ತಾ ಬಂದಿದ್ದೇನೆ” ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಶಿವಣ್ಣ.

56 ವರ್ಷದ ಶಿವಣ್ಣ, ಇಂದಿಗೂ ಕನ್ನಡ ಚಿತ್ರರಂಗದ ಅತ್ಯಂತ ಬ್ಯುಜಿಯೆಸ್ಟ್ ನಟರಲ್ಲಿ ಒಬ್ಬರು. ಮೇಲಿಂದ ಮೇಲೆ ಅವರ ಹೊಸ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಪ್ರತಿವರ್ಷವೂ ಹೊಸ ಹೊಸ ನಟರು ಬರುತ್ತಲೇ ಇದ್ದಾರೆ. ಶಿವಣ್ಣನ ಜೊತೆಗೆ ಅಥವಾ ಬಳಿಕ ಬಂದ ಎಷ್ಟೋ ನಟರು ತೆರೆಮರೆಗೆ ಸರಿದಿದ್ದಾರೆ. ಆದರೆ ಶಿವಣ್ಣಂದು ಮಾತ್ರ ಅದೇ ತಾಜಾತನ..ಅದೇ ಲವಲವಿಕೆ.

ಚಿತ್ರರಂಗದಲ್ಲಿ ಸ್ಪರ್ಧೆಯ ಕುರಿತು ಎಂದಿಗೂ ತಲೆ ಕೆಡಿಸಿಕೊಳ್ಳದ ಶಿವಣ್ಣ, ಬರುವ ಜುಲೈಗೆ 57 ನೇ ವಯಸ್ಸಿಗೆ ಕಾಲಿಡಲಿದ್ದಾರೆ. ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಅಚ್ಚುಕಟ್ಟುತನದಿಂದ ನಿರ್ವಹಿಸುವುದೇ ಅವರ ನಿರಂತರ ಯಶಸ್ಸಿನ ಗುಟ್ಟಂತೆ..!

“ಸ್ಪರ್ಧೆ ಎನ್ನುವುದಕ್ಕಿಂತ, ಪ್ರತಿಯೊಬ್ಬ ನಟನೂ ತಮ್ಮದೇ ಆದಂತಹ ವಿಶಿಷ್ಟ ಶೈಲಿಯನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ಅಭಿಮಾನಿಗಳ ಹೃದಯದಲ್ಲಿ ಸ್ಥಾನವಿರುತ್ತದೆ. ಯುವ ನಟರಾದ ಅಪ್ಪು, ಸುದೀಪ್, ದರ್ಶನ್, ಯಶ್, ಗಣೇಶ್, ಧ್ರುವ, ಮುರುಳಿ ಹೀಗೆ ಪ್ರತಿಯೊಬ್ಬ ನಟರು ತಮ್ಮದೇ ಆದಂತಹ ವಿಶಿಷ್ಟ ಶೈಲಿಯನ್ನು ಹೊಂದಿದ್ದಾರೆ. ಈ ಎಲ್ಲರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಇಷ್ಟ”

“ಹೊಸ ನಿರ್ದೇಶಕರು, ಹೊಸ ತಂತ್ರಜ್ಞರು, ಹೊಸ ಹೊಸ ಕಥೆಗಳೊಂದಿಗೆ ನನ್ನ ಬಳಿ ಬರುತ್ತಾರೆ. ‘ಯಾವ ಹುತ್ತದಲ್ಲಿ ಯಾವ ಹಾವು ಇದೆ’ ಹೇಳುವುದು ಕಷ್ಟ. ಅವರ ಕನಸುಗಳನ್ನು ಆಲಿಸುತ್ತೇನೆ. ಅವರ ಆ ಹೊಸ ಕನಸುಗಳೊಂದಿಗೆ ನಾನೂ ಪಾಲ್ಗೊಳ್ಳುತ್ತ ಈ ಹಂತ ತಲುಪಿದ್ದೇನೆ” ಎಂದು ವಿವರಿಸುತ್ತಾರೆ ಶಿವಣ್ಣ.

ಶ್ರೀ ಮುತ್ತು ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಶಿವಣ್ಣ, “ಈ ಮೊದಲು ನನ್ನ ತಾಯಿ ಪಾರ್ವತಮ್ಮ ರಾಜಕುಮಾರ್, ನಮ್ಮ ಮೊದಲ ಸಂಸ್ಥೆಯನ್ನು ಹುಟ್ಟುಹಾಕಿದರು. ಇದೀಗ ಪತ್ನಿ ಗೀತಾ ಶಿವರಾಜ್ ಕುಮಾರ್ ಆ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಲದೆ ಮಗಳು ನಿವೇದಿತ ಕೂಡ ನಿರ್ಮಾಣದಲ್ಲಿ ಆಸಕ್ತಿಯನ್ನು ವಹಿಸಿದ್ದಾರೆ”

“ನನ್ನ 125ನೇ ಚಿತ್ರ, ‘ಬೈರತಿ ರಣಗಲ್’ ನ್ನು ನಮ್ಮ ನಿರ್ಮಾಣ ಸಂಸ್ಥೆ ನಿರ್ಮಿಸಲಿದೆ” ಎಂದಿದ್ದಾರೆ. ಸದ್ಯ, ಪಿ ವಾಸು ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿ , ಕೇರಳದಲ್ಲಿದ್ದಾರೆ.

ಅಭಿಮಾನಿಗಳ ಪಾಲಿನ ಚಿರಯೌವನಿಗ, ಸರಳ ಸಜ್ಜನ ಶಿವಣ್ಣ ಹೀಗೆಯೇ ಇನ್ನಷ್ಟು ಚಿತ್ರಗಳೊಂದಿಗೆ ರಂಜಿಸುತ್ತಿರಲಿ ಎಂಬುದೇ ಅವರ ಅಭಿಮಾನಿಗಳ ಆಶಯ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top