RESPONSIVE LEADERBOARD AD AREA
Movie Reviews

Samhara review: A realistic and believable thriller

ಗುರು ದೇಶಪಾಂಡೆ ನಿರ್ದೇಶನದ ಸಂಹಾರ ಒಂದು ನೈಜ ಮತ್ತು ನಂಬಲರ್ಹ ಘಟನಾವಳಿಗಳಿಂದ ಹೆಣೆದ ಕಥೆ ಇರುವ ಸಿನಿಮಾ. ಸಿನಿಮಾದಲ್ಲಿರುವ ಪ್ರತಿ ಪಾತ್ರವೂ ತನ್ನ ವಿಚಿತ್ರ ಮತ್ತು ವೈಶಿಷ್ಟ್ಯಗಳಿಂದ ಮುಖ್ಯ ಪಾತ್ರವಹಿಸುತ್ತಾ ಕಥೆಯ ಚಲನೆಗೆ ಪೂರಕವಾಗಿ ವರ್ತಿಸುತ್ತಾ ಕಥೆಯು ಬಹಳ ಆಸಕ್ತಿದಾಯಕವಾಗುವಂತೆ ಮಾಡುವುದರಿಂದ ಸಿನಿಮಾ ರೋಚಕ ಅನುಭವ ನೀಡುತ್ತದೆ.

ಕತೆ

ನಾಯಕ ಶ್ರೀಶೈಲ ಕುರುಡನಾದರೂ ನುರಿತ ಬಾಣಸಿಗ ಮತ್ತು ಯಶಸ್ವಿ ಹೋಟೆಲ್ ಮಾಲೀಕ. ಅವನ ಪ್ರಪಂಚ ಚಿಕ್ಕದು, ಅಲ್ಲಿರುವುದು ಪ್ರೀತಿಸುವ ಅಪ್ಪ ಅಮ್ಮ ಮತ್ತು ಕಾಳಜಿಯುಳ್ಳ ಗೆಳತಿ. ಅದೊಂದು ದಿನ ಅವನ ಹೋಟೆಲ್ ಗೆ ಬರುವ ಹುಡುಗಿಯೊಬ್ಬಳು ಶ್ರೀಶೈಲನ ಮನ ಗೆಲ್ಲುತ್ತಾಳೆ. ಮನ ಮೆಚ್ಚಿದ ಹುಡುಗಿಯ ಜೀವನದಲ್ಲಿ ಹಣದ ಅಭಾವ ದೊಡ್ಡ ಸಮಸ್ಯೆ ಎಂದು ಅರಿತ ಶ್ರೀಶೈಲ ಅವಳಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಅಪಘಾತವೊಂದರಲ್ಲಿ ಆಸ್ಪತ್ರೆ ಸೇರುವ ಶ್ರೀಶೈಲನಿಗೆ ಮತ್ತೆ ಕಣ್ಣು ಬರುವ ಸಾಧ್ಯತೆಯಿಂದ ಒಂದಷ್ಟು ದಿನಗಳು ಕಳೆದು ಹೋಗುತ್ತವೆ. ಆಸ್ಪತ್ರೆಯಿಂದ ಹೊರಬಂದ ಮೇಲೆ ಪ್ರೀತಿಸಿದ ಹುಡುಗಿ ನಾಪತ್ತೆಯಾಗಿರುತ್ತಾಳೆ. ಅವಳಿಗಾಗಿ ಹಪಹಪಿಸುವ ನಾಯಕ ಅವಳ ಜಾಡು ಹಿಡಿದು ಹುಡುಕಲು ಹೊರಡುತ್ತಾನೆ. ಪ್ರೀತಿಯ ಹುಡುಗಿ ಏನಾದಳು? ಅವಳಿಗಿರುವ ಆಪತ್ತು ಎಂತಹದು? ನಾಯಕನಿಗೆ ಎದುರಾಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಹಾಯ ಮಾಡುವವರಾರು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಚಿತ್ರದುದ್ದಕ್ಕೂ ಸಿಗುತ್ತಾ ಹೋಗುತ್ತದೆ.

ಅಭಿನಯ

ಚಿರಂಜೀವಿ ಸರ್ಜಾ ಅವರ ಅಭಿನಯ ಪಾತ್ರಕ್ಕೆ ಪೂರಕವಾಗಿದೆ. ಹರಿಪ್ರಿಯಾ ಅವರು ಪಾತ್ರದ ಮನಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ಜೀವತುಂಬಿದ್ದಾರೆ. ಪ್ರಜ್ಞಾಪೂರ್ವಕವಾಗಿ ನಟಿಸದೇ ಕೇವಲ ಪಾತ್ರವಾಗಿ ಕಾಣಿಸಿಕೊಂಡು ಚಿತ್ರದ ಕಥೆಯ ರಸಾನುಭೂತಿಯನ್ನು ಹೆಚ್ಚಿಸಿದ್ದಾರೆ. ಕಾವ್ಯಾಶೆಟ್ಟಿ ಮುದ್ದಾಗಿ ಕಾಣಿಸುವುದರ ಜೊತೆಗೆ ಕಥೆಯನ್ನು ಮುನ್ನಡೆಸುವ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಚಿಕ್ಕಣ್ಣ ಕೇವಲ ಮುಖದ ಭಾವದಿಂದಲೇ ನಗುವಿನ ರಂಗಪ್ರವೇಶ ಮಾಡಿಸುತ್ತಾರೆ. ಸಹಜ ಅಭಿನಯ, ಹಾವಾಭಾವ ನೋಡುಗರಲ್ಲಿ ಮಂದಹಾಸ ಮೂಡಿಸುತ್ತದೆ. ರಾಜಾಹುಲಿ ಹೆಸರಿನ ಕಾನ್ಸ್ಟೆಬಲ್ ಆಗಿ ಇಡೀ ಚಿತ್ರದುದ್ದಕ್ಕೂ ನಗೆ ಉಕ್ಕಿಸುತ್ತಾರೆ.

ತಾಂತ್ರಿಕತೆ

ತಮಿಳಿನ ‘ಅದೇ ಕಂಗಳ’ ಚಿತ್ರವನ್ನು ಯಾವುದೇ ಲೋಪವಿಲ್ಲದೇ, ನಿಷ್ಠೆಯಿಂದ, ನಾಜೂಕಾಗಿ, ರಂಜನೀಯವಾಗಿ ನಿರ್ದೇಶಕ ಗುರು ದೇಶಪಾಂಡೆ ರೀಮೇಕಿಸಿದ್ದಾರೆ. ರವಿ ಬಸ್ರೂರು ಸಂಗೀತ ಮತ್ತು ಹಿನ್ನೆಲೆ ಸಂಗೀತ ಓಕೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಚಿತ್ರದ ದೊಡ್ಡ ಪ್ಲಸ್.

ಕೊನೆಯ ಮಾತು

ಒಂದು ಸಿನಿಮಾಗೆ ಮುಖ್ಯವಾಗುವುದೇ ಕಥೆ. ಸಂಹಾರ ಚಿತ್ರದಲ್ಲಿ ನಮ್ಮನ್ನು ಬರಸೆಳೆದು ನೋಡಿಸಿಕೊಳ್ಳುವ ಇಂಟರೆಸ್ಟಿಂಗ್ ಆದ ರೋಚಕ ಕಥೆ ಇದೆ. ಕಥೆಯ ಚಲನೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ತಾಂತ್ರಿಕತೆ ಪ್ರೇಕ್ಷಕನನ್ನು ಮತ್ತಷ್ಟು ಕುತೂಹಲ ಗೊಳ್ಳುವಂತೆ ಮಾಡುತ್ತದೆ. ಇಂಟರ್ವೆಲ್ ನಂತರ ಪ್ರೇಕ್ಷಕ ಸೀಟಿನ ತುದಿಗೆ ಬಂದು ಕೂರುವಂತೆ ಸಿನಿಮಾ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಂದ ಒಂದು ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಂಹಾರ. ಕೊಟ್ಟ ಕಾಸು ಮೋಸವಾಗುವುದಿಲ್ಲ, ಚಿತ್ರಮಂದಿರಕ್ಕೆ ಹೋಗಿ ನೋಡಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top