RESPONSIVE LEADERBOARD AD AREA
Film News

ವೃತ್ತಿ ಬದುಕಿನ ‘ಕವಲುದಾರಿ’ಯಲ್ಲಿ ರಿಷಿ..!!

ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವ ನಟರಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಹೆಸರು ರಿಷಿ. ‘ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ತನ್ನ ಸಹಜ ಮತ್ತು ಲವಲವಿಕೆಯ ಅಭಿನಯದಿಂದ ಗಮನ ಸೆಳೆದ ಈ ನಟನ ಕೈಯಲ್ಲಿ ಈಗ ಕೈತುಂಬಾ ಚಿತ್ರಗಳಿವೆ. ‘ಆಪರೇಷನ್ ಅಲಮೇಲಮ್ಮ’ ಚಿತ್ರದ ನಂತರ ಸುಮಾರು ಒಂದೂವರೆ ವರ್ಷದಿಂದ ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗದಿದ್ದರೂ, ಈ ಹುಡುಗ ತಮ್ಮ ನಟನೆಯ ಮೂಲಕ ಭರವಸೆ ಹುಟ್ಟಿಸಿರುವುದಂತೂ ಸತ್ಯ.

ಈ ಕುರಿತು ಮನಬಿಚ್ಚಿ ಮಾತನಾಡಿರುವ ರಿಷಿ, “ನಾನು ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟಿವ್ ಇಲ್ಲದ ವ್ಯಕ್ತಿ. ನನ್ನ ಕೆಲಸ ಗಳಿಂದಲೇ ನಾನು ಹೆಚ್ಚು ಸುದ್ದಿ ಆಗಬೇಕೆಂಬುದು ನನ್ನ ಧ್ಯೇಯ. ಹಾಗಾಗಿಯೇ ಸಾಕಷ್ಟು ಶ್ರಮವಹಿಸಿ ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರ ಬಿಡುಗಡೆಯಾದ ಬಳಿಕ ಸುದ್ದಿ ಆಗುವುದು ಖಚಿತ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಆಪರೇಷನ್ ಅಲಮೇಲಮ್ಮ ಚಿತ್ರ ಬಿಡುಗಡೆಗಿಂತ ಮುಂಚಿತವಾಗಿಯೇ, ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಹೇಳಿರುವ ರಿಷಿ, “ಆಪರೇಷನ್ ಚಿತ್ರದ ನನ್ನ ಅಭಿನಯದ ಕೆಲವು ಭಾಗಗಳನ್ನು ನೋಡಿದ್ದ ನಿರ್ದೇಶಕ ಹೇಮಂತ್ ರಾವ್, ನನ್ನ ಬಗ್ಗೆ ಪುನೀತ್ ರಾಜಕುಮಾರ್ ಅವರೊಂದಿಗೆ ಚರ್ಚಿಸಿ ನನ್ನನ್ನೇ ಮುಖ್ಯ ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಿದ್ದರು. ಈ ಕುರಿತು ಅವರು ನನಗೆ ಹೇಳಿದಾಗ ಮತ್ತು ಈ ಚಿತ್ರದ ವಿಷಯ ವಸ್ತುವನ್ನು ತಿಳಿದ ಮೇಲೆ ಇದೊಂದು ಅತ್ಯುತ್ತಮ ಅವಕಾಶವೆಂದು ನನಗೆ ತಿಳಿಯಿತು”

“ಕನ್ನಡ ಚಿತ್ರರಂಗದ ಒಂದು ದೊಡ್ಡ ಕುಟುಂಬದ ನಿರ್ಮಾಣದಲ್ಲಿ (ಪಿಆರ್ ಕೆ ಪ್ರೊಡಕ್ಷನ್ಸ್) ಬರುತ್ತಿರುವ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೇ ಪುನೀತ್ ಸರ್ ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ನೀಡಿದ್ದಾರೆ”

“ಚಿತ್ರದಲ್ಲಿ ಪ್ರತಿಯೊಬ್ಬರು ಬಹಳ ಶ್ರಮವಹಿಸಿ ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಹಾಗಾಗಿ ಖಂಡಿತವಾಗಿಯೂ ‘ಕವಲು ದಾರಿ’ ಒಂದು ಅತ್ಯುತ್ತಮ ಚಿತ್ರವಾಗಲಿದೆ” ಎನ್ನುವ ಭರವಸೆಯನ್ನು ರಿಷಿ ಹೊಂದಿದ್ದಾರೆ.

ಈ ಚಿತ್ರದಲ್ಲಿ ರಿಷಿ ಒಬ್ಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, “ಬೇರೆ ಸಿನಿಮಾಗಳಲ್ಲಿರುವಂತೆ ‘ಹೀ ಮ್ಯಾನ್’ಗಳಂತೆ ತೋರಿಸುವ ಬದಲು ಪೊಲೀಸ್ ಅಧಿಕಾರಿಯನ್ನು ಸಹಜವಾಗಿರುವ, ಅಂತಃಕರಣದ ಹೃದಯವಂತ ಅಧಿಕಾರಿಯನ್ನಾಗಿ ತೋರಿಸಲಾಗಿದೆ. ಈ ಪಾತ್ರದಲ್ಲಿ ಅಭಿನಯಿಸಿದ ನಂತರ ಪೋಲಿಸ್ ವೃತ್ತಿಯಲ್ಲಿ ನನ್ನ ಗೌರವ ಮತ್ತಷ್ಟು ಹೆಚ್ಚಾಗಿದೆ” ಎಂದರು.

“ನನಗೆ ಮೊದಲಿಂದಲೂ ನಟನಾಗಬೇಕೆಂಬ ಆಸೆ ಇತ್ತು. ಆದರೆ ಓದಿದ್ದು ಇಂಜಿನಿಯರಿಂಗ್. ನಮ್ಮ ಕುಟುಂಬದಲ್ಲಿ ಈ ಮೊದಲು ಯಾರೂ ನಟನ ಕ್ಷೇತ್ರದಲ್ಲಿ ಇರಲಿಲ್ಲ. ಹಾಗಾಗಿ ಈ ಕ್ಷೇತ್ರವನ್ನು ಆಯ್ದುಕೊಳ್ಳುವ ಕುರಿತು ನನಗೆ ಅನುಮಾನಗಳಿದ್ದವು. ನಾನು ನಟರಾದರೆ ನ್ಯಾಯ ಸಲ್ಲಿಸುವೆನೆ ಎಂಬ ಕುರಿತು ಸದಾ ನನ್ನ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ. ಆದರೆ ‘ಆಪರೇಷನ್ ಅಲಮೇಲಮ್ಮ’ ಚಿತ್ರದ ನಂತರ ನನ್ನ ಆತ್ಮ ವಿಶ್ವಾಸ ಹೆಚ್ಚಾಗಿದ್ದು, ನಟನೆಯನ್ನೇ ನನ್ನ ಪ್ರಮುಖ ಕ್ಷೇತ್ರವನ್ನಾಗಿ ಆಯ್ದುಕೊಂಡಿದ್ದೇನೆ” ಎಂದಿದ್ದಾರೆ.

ಭರವಸೆಯ ಈ ಯುವ ನಟನಿಗೆ ‘ನಮ್ ಸಿನಿಮಾ’ ಶುಭ ಹಾರೈಸುತ್ತದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top