RESPONSIVE LEADERBOARD AD AREA
Film News

‘ಸ.ಹಿ.ಶಾಲೆ ಕಾಸರಗೋಡು’ ಚಿತ್ರಕ್ಕೆ ಶತದಿನೋತ್ಸವದ ಸಡಗರ..!

ಇದೇ ನವೆಂಬರ್ 30 ರಂದು ರಿಶಬ್ ಶೆಟ್ಟಿ ಅವರ ‘ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ’ ಚಿತ್ರ 100 ದಿನ ಪೂರೈಸಿ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದೆನಿಸಿದೆ.

ಅವರ ನಿರ್ದೇಶನದ ‘ಕಿರಿಕ್ ಪಾರ್ಟಿ’ 200 ದಿನಗಳ ಓಡಿತ್ತು. ರಕ್ಷಿತ್ ಶೆಟ್ಟಿ, ಕ್ಯೂಟ್ ಚೆಲುವೆ ರಶ್ಮಿಕ ಮಂದಣ್ಣ ರಂತಹ ಸ್ಟಾರ್ ಕಾಸ್ಟ್ ಒಳಗೊಂಡಿದ್ದ ‘ಕಿರಿಕ್ ಪಾರ್ಟಿ’ 200 ದಿನಗಳ ಭರ್ಜರಿ ಓಟ ಕಂಡಿತ್ತು.
ಹಿರಿಯ ನಟ ಅನಂತ್ ನಾಗ್ ರನ್ನು ಹೊರತುಪಡಿಸಿ ಬಹುತೇಕ ಹೊಸಬರೇ ನಟಿಸಿದ್ದ ಈ ಚಿತ್ರ ಯಶಸ್ಸು ಕಂಡಿರುವುದು ಅವರಿಗೆ ಹೆಚ್ಚು ಖುಷಿ ನೀಡಿದೆ.

ಸರ್ಕಾರಿ ಶಾಲೆಯೊಂದು ಜನರ ಅನಾದರಕ್ಕೊಳಕಾಗಿ ಮುಚ್ಚುವ ಹಂತ ತಲುಪಿದ ಸ್ಥಿತಿಯ ಕತೆಯನ್ನು ‘ಸರ್ಕಾರಿ…’ ಚಿತ್ರ ಹೊಂದಿತ್ತು. ಹಿರಿಯನಟ ಅನಂತ್ ನಾಗ್ ಬಾಲ ನಟರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

“ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಿದ್ದ ನಾನು ಮತ್ತು ಪ್ರಮೋದ್ ಶೆಟ್ಟಿ ಹಲವರ ಬಳಿ ಸಾಲ ಮಾಡಿ ಚಿತ್ರವನ್ನು ಬಿಡುಗಡೆಗೊಳಿಸಿದ್ದೆವು. ಆದರೆ ಪ್ರೇಕ್ಷಕರ ಅಭಿಮಾನದಿಂದ ಚಿತ್ರ ನೂರರ ಗಡಿದಾಟಿದೆ. ಜನರ ಭಾವನೆಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಉತ್ತಮ ಅಭಿರುಚಿಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಮ್ಮ ಚಿತ್ರದ ಗೆಲುವೇ ಸಾಕ್ಷಿ” ಎನ್ನುತ್ತಾರೆ ರಿಶಬ್

“ಚಿತ್ರವನ್ನು ಬಿಡುಗಡೆಗೊಳಿಸಲು ನಿರ್ಮಾಪಕರನ್ನು ಸಂಪರ್ಕಿಸಿದಾಗ ಅವರು ‘ಇದೊಂದು ಕ್ಲಾಸ್ ಸಿನಿಮಾವಾಗಿದ್ದು, ಪ್ರಶಸ್ತಿ ಗೆಲ್ಲಬಹುದು. ಆದರೆ ಕಮರ್ಷಿಯಲ್ ಆಗಿ ಯಶಸ್ಸು ಗಳಿಸುವುದು ಕಷ್ಟ’ ಎಂಬ ಅಭಿಪ್ರಾಯವನ್ನು ನೀಡಿದ್ದರು. ಇದೀಗ ಜನರು ಚಿತ್ರವನ್ನು ಗೆಲ್ಲಿಸಿರುವುದು ನನ್ನ ಆತ್ಮ ವಿಶ್ವಾಸ ಹೆಚ್ಚಿಸಿದೆ” ಎನ್ನುತ್ತಾರೆ ರಿಶಬ್ ಶೆಟ್ಟಿ.

ಕನ್ನಡ ಮತ್ತು ಹಿಂದಿಯಲ್ಲಿ ಬರಲಿರುವ ಮತ್ತೊಂದು ಪ್ರಾಜೆಕ್ಟ್ ನಲ್ಲಿ , ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಒಟ್ಟಾಗಿ ತೋರಿಸಲಿರುವ ದೊಡ್ಡ ಪ್ರಾಜೆಕ್ಟ್ ಒಂದನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಓದುತ್ತಿರುವಾಗಲೇ ಈ ಕಥೆಯನ್ನು ರಿಷಬ್ ಶೆಟ್ಟಿ ಬರೆದಿದ್ದರಂತೆ.

ಕನ್ನಡದ ಯುವ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ರಿಷಬ್ ಶೆಟ್ಟಿ, ನಿರ್ದೇಶನದ ಎರಡು ಚಿತ್ರಗಳು ಒಂದರ ಹಿಂದೆ ಮತ್ತೊಂದು ಸೂಪರ್ ಹಿಟ್ ಆಗಿರುವುದು ಅವರು ಇನ್ನಷ್ಟು ಪ್ರಯೋಗಗಳನ್ನು ಮಾಡಲು ಸ್ಪೂರ್ತಿ ನೀಡಬಹುದು. ಇವರಿಂದ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top