RESPONSIVE LEADERBOARD AD AREA
Movie Reviews

ಈ ರಿಂಗ್ ಮಾಸ್ಟರ್ ನಲ್ಲಿದೆ ಸಕತ್ ಸ್ಟಫ್.. ಮಿಸ್ ಮಾಡದೆ ನೋಡಿ

ಹಾಗೆ ನೋಡಿದರೆ ಅರುಣ್ ಸಾಗರ್ ಹೆಚ್ಚಿನ ಸಂಖ್ಯೆಯ ಗಮನಾರ್ಹ ಪಾತ್ರಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡೇ ಇಲ್ಲ. ಆದರೂ ಅವರೆಂತಹ ಪ್ರತಿಭಾವಂತರೆಂಬ ವಿಷಯ ಕನ್ನಡಿಗರಿಗೆ ಗೊತ್ತು. ಅವರು ಬಿಗ್ ಬಾಸ್ ನಲ್ಲಿ ಸೋತಾಗ ಇಡೀ ರಾಜ್ಯ ಬೇಸರಪಟ್ಟುಕೊಂಡಿತ್ತು. ಅರುಣ್ ಸಾಗರ್ ಗೆ ಒಳ್ಳೆ ಪಾತ್ರಗಳು ಸಿಗಲಿ, ಅವರ ಪ್ರತಿಭೆಗೆ ಪುರಸ್ಕಾರ ಸಿಗಲಿ ಎಂದು ಆಸೆಪಟ್ಟ ಚಿತ್ರರಸಿಕರ ಸಂಖ್ಯೆಯೇನು ಕಡಿಮೆ ಇಲ್ಲ. ಅಂತಹ ಅರುಣ್ ಸಾಗರ್ ನಾಯಕರಾಗಿ ”ರಿಂಗ್ ಮಾಸ್ಟರ್” ಚಿತ್ರದಲ್ಲಿ ನಟಿಸುತ್ತಾರೆ ಅನ್ನೋ ವಿಷಯ ಹೊರಬಿದ್ದಾಗ ಸಹಜವಾಗಿಯೇ ಚಿತ್ರಪ್ರೇಮಿಗಳು ಖುಷಿಯಾದರು.

ಈಗ ರಿಂಗ್ ಮಾಸ್ಟರ್ ಆಗಿ ಅರುಣ್ ಗೆದ್ದಿದ್ದಾರಾ?.. ಹೌದು, ತಮ್ಮ ಮೇಲೆ ಚಿತ್ರಪ್ರೇಮಿಗಳು ಇಟ್ಟ ಭರವಸೆಯನ್ನ ಪೂರ್ತಿಯಾಗಿ ಉಳಿಸಿಕೊಂಡಿದ್ದಾರೆ ಅರುಣ್. ತಮ್ಮ ಮೊದಲ ಚಿತ್ರದಲ್ಲೇ ಅರುಣ್ ಸಾಗರ್ ರಂತಹ ದೈತ್ಯ ಪ್ರತಿಭೆಯಿಂದ ಒಳ್ಳೆಯ ಕೆಲಸ ತೆಗೆದು, ಒಳ್ಳೆಯ ಸಿನಿಮ ಮಾಡಿ ಗೆದ್ದಿದ್ದಾರೆ ನಿರ್ದೇಶಕ ವಿಶ್ರುತ್ ನಾಯಕ್.

ಕಥೆ
*****

ಡಿಸೆಂಬರ್ 31ರ ರಾತ್ರಿ ತನ್ನ ಗೆಳತಿಯರ ಜೊತೆ ಮನೆಯಲ್ಲೇ ಪಾರ್ಟಿ ಮಾಡಲು ನಿರ್ಧರಿಸುತ್ತಾನೆ ಹುಡುಗ, ಅವರಿಗೆ ಕಿಕ್ಕು ಏರಲು ಗಾಂಜಾ ಬೇಕು.. ಗಾಂಜಾ ಡೀಲರ್ ಒಬ್ಬನಿಗೆ ಫೋನ್ ಹಚ್ಚುತ್ತಾರೆ. ಅವನು ಬಂದು ಇವರ ಫ್ಲಾಟ್ ನಲ್ಲಿ ಸೇರಿಕೊಳ್ಳುತ್ತಾನೆ. ಬಂದವನು ನಿಜವಾಗಿಯೂ ಗಾಂಜಾ ಡೀಲರ್ರಾ?ಹುಡುಗಿಯರಾದರೂ ಎಂತಹವರು, ಈ ನಾಲ್ವರ ಮದ್ಯೆ ಘಟಿಸುವುದಾದರೂ ಏನು?

ಅಭಿನಯ
**********

ಚಿತ್ರದಲ್ಲಿರುವುದೇ ನಾಲ್ಕು ಪಾತ್ರಗಳು. ಇಡೀ ಸಿನಿಮಾ ನಾವು ಇವರುಗಳ ಮುಖವನ್ನೇ ನೋಡಬೇಕು. ಹೀಗಿರುವಾಗ ಒಬ್ಬರು ಸ್ವಲ್ಪ ತಪ್ಪಿದರೂ ಪ್ರೇಕ್ಷಕನಿಗೆ ಬೋರ್ ಹೊಡೆಯುವ ಸಾಧ್ಯತೆಗಳೇ ಜಾಸ್ತಿ. ಆದರೆ ಹಾಗೆ ಆಗಿಲ್ಲದಿರುವುದೇ ಚಿತ್ರದ ಹೆಚ್ಚುಗಾರಿಕೆ. ಅರುಣ್ ಸಾಗರ್ ಅಭಿನಯ ಅಬ್ಬರವೆನಿಸಿದರೂ ಸಖತ್ ಖುಷಿಕೊಡುತ್ತದೆ. ಇದಕ್ಕಿದ್ದಂತೆ ನಗುವ, ಇದ್ದಕ್ಕಿದ್ದಂತೆ ಆಳುವ, ವಿಚಿತ್ರ ಮುಖಭಾವ ಮಾಡಿಕೊಳ್ಳುವ, ಸಿಡುಕುವ, ನಿಮಿರುವ, ಅರ್ಥಪೂರ್ಣ ಸಂಭಾಷಣೆಗಳನ್ನು ತಮ್ಮದೇ ಧಾಟಿಯಲ್ಲಿ ಹೇಳುವ ಅವರ ಅಭಿನಯಕ್ಕೆ ಉಘೇ ಅನ್ನಲೇ ಬೇಕು. ಖ್ಯಾತ ನಿರೂಪಕಿ ಅನುಶ್ರೀ ಅಭಿನಯ ಫರ್ಸ್ಟ್ ಕ್ಲಾಸ್. ರಂಗಭೂಮಿ ಕಲಾವಿದರಾದ ಶೃಂಗ ವಾಸುದೇವ ಮೂರ್ತಿ ಮತ್ತು ಶ್ವೇತಾ ಅಭಿನಯ ಅವರ ರಂಗಭೂಮಿ ಹಿನ್ನೆಲೆಯ ಹಿರಿಮೆಯನ್ನು ತೋರಿಸುತ್ತದೆ. ಅದರಲ್ಲೂ ಶ್ವೇತಾ ಅಭಿನಯ ಅಬ್ಬಬ್ಬಾ.. ಏನು ನಟಿಸಿದ್ದಾರೆ. ಸೂಪರ್ ಗುರು.

ತಾಂತ್ರಿಕತೆ
***********

ಚಿತ್ರದ ಕಥೆ ಹಾಲೀವುಡ್ ಸಿನಿಮಾಗಳ ಪ್ರೇರಣೆಯಂತೆ ಕಂಡುಬರುವುದು ನಿಜ. ಆದರೂ ಇಂತಹ ಒಂದೇ ಸ್ಥಳದಲ್ಲಿ ನಡೆಯುವ ಕಥೆಯ ಸಿನಿಮಾ ಮಾಡಿ ಜಯಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ತಮ್ಮ ಚಾಕಚಕ್ಯತೆಯ ನಿರ್ದೇಶನದಿಂದ ವಿಶೃತ್ ನಾಯಕ್ ಸಂಪೂರ್ಣವಾಗಿ ಗೆದ್ದಿದ್ದಾರೆ. ಕನ್ನಡಕ್ಕೆ ಮತ್ತೊಬ್ಬ ಒಳ್ಳೆಯ ನಿರ್ದೇಶಕನ ಆಗಮನವಾಯಿತು ಎಂದು ಮುಲಾಜಿಲ್ಲದೆ ಖುಷಿಪಡಬಹುದು.

ಉಗ್ರಂ ನಂತರ ಮತ್ತೊಮ್ಮೆ ವಿಜೃಂಭಿಸಿದ್ದಾರೆ ರವಿ ಬಸ್ರೂರ್, ಸಿನಿಮಾದಲ್ಲಿರುವ ಎರಡೂ ಹಾಡುಗಳು ಚೆನ್ನಾಗಿವೆ. ಹಿನ್ನೆಲೆ ಸಂಗೀತ ಸಿನಿಮಾದ ಏರಿಳಿತಗಳ ನಿರ್ವಹಣೆಗೆ ದೊಡ್ಡಮಟ್ಟದಲ್ಲಿ ಸಹಾಯ ಮಾಡಿವೆ. ರವಿ ಅವರ ಪ್ರತಿಭೆಯನ್ನು ನಮ್ಮ ಚಿತ್ರರಂಗ ಹೆಚ್ಚಾಗಿ ಬಳಸಿಕೊಳ್ಳಬೇಕು.

ಚಿತ್ರದ ಧನಾತ್ಮಕ ಅಂಶಗಳು
**************************

1. ವಿಶೃತ್ ನಾಯಕ್ ನಿರ್ದೇಶನ

2. ಅರುಣ್ ಸಾಗರ್ ಅವರ ನಟನೆ

3. ಶ್ವೇತಾ ಅವರ ನಟನೆ

4. ಶೃಂಗ ಅವರ ನಟನೆ

5. ರವಿ ಬಸ್ರೂರ್ ಸಂಗೀತ ಮತ್ತು ಹಿನ್ನೆಲೆ ಸಂಗೀತ

ಋಣಾತ್ಮಕ ಅಂಶ
*****************
ಹಿಂಸೆಯ ಪರಾಕಾಷ್ಟೆ ಎನಿಸುವ ಕೆಲವು ದೃಶ್ಯಗಳು
ಕೊನೆಯ ಮಾತು.
****************
ಕನ್ನಡಕ್ಕೆ ಮತ್ತೊಂದು ಒಳ್ಳೆಯ ಥ್ರಿಲರ್ ಸಿನಿಮಾ.. ಸಿನಿಮಾದಲ್ಲಿ ನಟಿಸಿರುವ ಎಲ್ಲರ ಅಭಿನಯ ಸೂಪರ್, ನಿರ್ದೇಶನ ಚೆನ್ನಾಗಿದೆ. ತಾಂತ್ರಿಕವಾಗಿ ಅಚ್ಚುಕಟ್ಟಾಗಿದೆ. ಒಳ್ಳೆಯ ಕಥೆಯಿದೆ, ಮೆಸೇಜ್ ಇದೆ. ಇನ್ನೇನು ಬೇಕು ಸ್ವಾಮಿ ನಿಮಗೆ ಸಿನಿಮಾ ನೋಡೋಕೆ. ಮಿಸ್ ಮಾಡದೆ ನೋಡಿ ”ರಿಂಗ್ ಮಾಸ್ಟರ್”
Rating – 3.5

 

RESPONSIVE LEADERBOARD AD AREA
RESPONSIVE LEADERBOARD AD AREA
To Top