RESPONSIVE LEADERBOARD AD AREA
Movie Reviews

MOVIE REVIEW : ಮದುವೆಯಲ್ಲಿ ಮನರಂಜನೆ ಮೆಸೇಜು ಮತ್ತು ಲವ್ವು

ಚಿತ್ರಗೀತೆ ರಚನಾಕಾರ ಕವಿರಾಜ್ ತೂಗುದೀಪ ನಿರ್ಮಾಣ ಸಂಸ್ಥೆಯ ಮೂಲಕ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದು ತೆರೆಗೆ ತಂದಿರುವ ”ಮದುವೆಯ ಮಮತೆಯ ಕರೆಯೋಲೆ” ಚಿತ್ರ ಇಂದು ಬಿಡುಗಡೆಯಾಗಿದೆ, ಸ್ಫುರದ್ರೂಪಿ ನವನಟ ಸೂರಜ್ ಮತ್ತು ಅಮೂಲ್ಯ ಅವರನ್ನೊಳಗೊಂಡ ಆಕರ್ಷಕ ಪೋಸ್ಟರ್ ಗಳಿಂದ, ಹರಿಕೃಷ್ಣ ಸಂಗೀತ ನೀಡಿದ್ದ ಒಂದೆರಡು ಹಾಡುಗಳ ಸಾಧಾರಣ ಯಶಸ್ಸಿನಿಂದ ಭರವಸೆ ಮೂಡಿಸಿದ್ದ ಈ ಸ್ವಮೇಕ್ ಚಿತ್ರ ಚಿತ್ರಮಂದಿರದೊಳಗೆ ಪ್ರೇಕ್ಷಕರ ಮನರಂಜಿಸುವುದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ?
ಕಥೆ
******
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ
ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಈ ಅರ್ಥಪೂರ್ಣ ಸಾಲುಗಳಿಂದ ಪ್ರಭಾವಿತರಾಗಿ ಕವಿರಾಜ್ ಸ್ನೇಹ ಸಂಬಂಧ, ಒಳ್ಳೆಯತನ, ಸಣ್ಣತನ ಮತ್ತು ಕೊನೆಗೆ ಪ್ರೀತಿಯೇ ಗೆಲ್ಲುವ ಕಥೆಯೊಂದನ್ನು ತಮ್ಮ ನಿರ್ದೇಶನದ ಮೊದಲ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಆಯ್ದುಕೊಂಡಿರುವ ಕಥೆ ಈಗಾಗಲೇ ತುಂಬಾ ಸಿನಿಮಾಗಳಲ್ಲಿ ನಾವು ನೋಡಿರುವಂತಹ ಕಥೆಯೇ..
ಸ್ನೇಹದ ಸವಿರುಚಿ ಉಂಡು ನಾವು ಒಂದು ಎಂಬಂತೆ ಬಾಳುತ್ತಿರುವ ಎರಡು ಮನೆಯ ಕುಟುಂಬಗಳು ಸಣ್ಣ ಕಾರಣಕ್ಕೆ ಪರಪರ ಕಿತ್ತಾಡಿಕೊಂಡು ಇದ್ದ ಮತ್ತು ಬೆಸೆಯಬೇಕಿದ್ದ ಸಂಬಂಧ ಮುರಿದುಕೊಂಡು, ಕೊನೆಗೆ ಅವರೊಳಗಿನ ಒಳ್ಳೆಯದು ಪೊರೆಕಳಚಿ ಹೊರಬಂದು ಅಹಂ ನೀಗಿ ಮನಸ್ಸು ಬಾಗಿ ಪ್ರೀತಿಯನ್ನು ಗೆಲ್ಲಿಸಲು ಮುಂದಾಗುತ್ತಾರೆ. ಇಂತಹ ಎರಡು ಸಜ್ಜನ ಕುಟುಂಬಗಳ ”ಸ್ನೇಹ-ಪ್ರೇಮ”ಕಥೆಯೇ ಮದುವೆಯ ಮಮತೆಯ ಕರೆಯೋಲೆ.
ಅಭಿನಯ
**********
ಚಿತ್ರದ ಪೋಸ್ಟರ್ ಗಳಲ್ಲಿ ಸೂರಜ್ ಅವರನ್ನು ನೋಡಿದ ಅದೆಷ್ಟೋ ಚಿತ್ರಪ್ರೇಮಿಗಳು ಕನ್ನಡಕ್ಕೆ ಮತ್ತೊಬ್ಬ ಸ್ಫುರದ್ರೂಪಿ ನಾಯಕನಟನ ಆಗಮನವಾಗುತ್ತಿದೆ, ಈ ಹುಡುಗ ಸಖತ್ತಾಗಿ ನಟಿಸಿ ಸ್ಟಾರ್ ಆಗಬಹುದು ಎಂದು ಖುಷಿಪಟ್ಟುಕೊಂಡಿದ್ದರು, ಆದರೆ ಸಿನಿಮಾದಲ್ಲಿ ಸೂರಜ್ ಅವರನ್ನು ನೋಡಿದಾಗ ತುಂಬಾ ನಿರಾಸೆಯಾಯಿತು, ಹುಡುಗ ತುಂಬಾ ಆಕರ್ಷಕವಾಗಿ ತೆರೆಯ ಮೇಲೆ ಕಾಣುತ್ತಾರೆ ಆದರೆ ಅಭಿನಯ ತುಂಬಾ ಸಪ್ಪೆ, ಮೊದಲ ಚಿತ್ರ ಎಂದು ಗ್ರೇಸ್ ಮಾರ್ಕ್ ಕೊಟ್ಟು ನೋಡಿದರೂ ಕೆಲವು ಕಡೆ ಅವರ ಅಭಿನಯ ತೀರಾ ನೀರಸ ಅನಿಸಿಬಿಡುತ್ತದೆ.
ಚಿತ್ರದುದ್ದಕ್ಕೂ ಕ್ಯೂಟ್ ಆಗಿ, ಹಾಟ್ ಆಗಿ ಕಾಣುತ್ತಾ, ತನ್ನ ಎಂದಿನ ಬಬ್ಲೀ ಅಭಿನಯದೊಂದಿಗೆ ಅಮೂಲ್ಯ ತೆರೆಯನ್ನು ಅಂದಗೊಳಿಸುತ್ತಾರೆ, ಇನ್ನು ಚಿತ್ರದ ದೊಡ್ಡ ಆಸ್ತಿಯಾಗಿ ಹಿರಿಯ ನಟ ಅನಂತ್ ನಾಗ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅಚ್ಯುತರಾವ್, ಚಿಕ್ಕಣ್ಣ ಗಮನ ಸೆಳೆಯುತ್ತಾರೆ.
ತಾಂತ್ರಿಕತೆ
***********
ಕವಿರಾಜ್ ಆಯ್ಕೆಮಾಡಿಕೊಂಡಿರುವ ಕಥೆಯೇ ಹಳೆಯದು, ಪರವಾಗಿಲ್ಲ, ಕಮರ್ಶಿಲ್ ಸಿನಿಮಾಗಳಲ್ಲಿ ಹೊಸ ಹೊಸ ಕಥೆಯನ್ನೇನು ಜನ ಕೇಳೋದಿಲ್ಲ, ಆದರೆ ಕಥೆಗೆ ಬಿಗಿಯಾದ ನಿರೂಪಣೆ, ವಿಭಿನ್ನವಾದ ಪಾತ್ರಪೋಷಣೆ, ದೃಶ್ಯದ ತೀವ್ರತೆಯನ್ನು ಹೆಚ್ಚಿಸುವ ಪಂಚ್ ಡೈಲಾಗ್ ಗಳು ಸಿನಿಮಾದಲ್ಲಿ ಮಿಳಿತವಾಗಿರದಿದ್ದರೆ ಸಿನಿಮಾ ಪ್ರೇಕ್ಷಕನನ್ನು ಹಿಡಿದು ಕೂರಿಸುವುದಿಲ್ಲ. ನಿರ್ದೇಶನಕ್ಕೆ ಇಳಿಯುವ ಮುನ್ನ ಕವಿರಾಜ್ ಮತ್ತಷ್ಟು ಹೋಮ್ ವರ್ಕ್ ಮಾಡಿಕೊಳ್ಳಬೇಕಿತ್ತು.
ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಒಂದೆರಡು ಹಾಡುಗಳು ಖುಷಿಕೊಡುತ್ತವೆ, ಛಾಯಾಗ್ರಹಣ ತುಂಬಾನೇ ಚೆನ್ನಾಗಿದೆ.
ಕೊನೆಯ ಮಾತು
****************
ಮದುವೆ ಅಂದುಕೊಂಡಷ್ಟು ಅದ್ದೂರಿಯಾಗಿಯೇನು ಇಲ್ಲ, ಆದರೆ ಸರಳವಾಗಿ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಮನೆಮಂದಿಯೆಲ್ಲ ಬಂದು ನೋಡಿ ಖುಷಿಪಟ್ಟುಕೊಂಡು ಹೋಗಲು ಯೋಗ್ಯವಾಗಿ ಮೂಡಿಬಂದಿದೆ.
RESPONSIVE LEADERBOARD AD AREA
RESPONSIVE LEADERBOARD AD AREA
To Top