RESPONSIVE LEADERBOARD AD AREA
Film News

ರಂಗನಾಯಕಿ – ಈ ಶತಮಾನದ ಮಾದರಿ ಹೆಣ್ಣು

1981ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾ “ರಂಗನಾಯಕಿ” ಚಿತ್ರದಲ್ಲಿ ನಟಿಯಾಗಿ ಬದುಕನ್ನು ಆಯ್ದುಕೊಂಡ ಹೆಣ್ಣುಮಗಳು ತನ್ನ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ್ದರೂ ಸಹ, ಸಮಾಜವು ಆಕೆಯನ್ನು ಸ್ವೀಕರಿಸುವ ರೀತಿ, ಉದ್ಯೋಗ ಕ್ಷೇತ್ರದಲ್ಲಿ ಆಕೆ ಎದುರಿಸುವ ಸಮಸ್ಯೆಗಳು, ವಿಕೃತ ಮನಸ್ಸಿನ ಪುರುಷರಿಂದ ಆಕೆ ಅನುಭವಿಸುವ ನೋವು ಹತಾಶೆಗಳ ಕಥಾಹಂದರದಿಂದಾಗಿ ಇಂದಿಗೂ ಪ್ರಸ್ತುತ ಎನಿಸಿದೆ. ಆ ಚಿತ್ರವು ನಟನಾ ಮಹಿಳೆಯರ ಸ್ಥಾನಮಾನಗಳು, ಅವರು ಎದುರಿಸುವ ಸಮಸ್ಯೆಗಳು, ಸಮಾಜ ಅವರನ್ನು ಸ್ವೀಕರಿಸುವ ರೀತಿ ಮೊದಲಾದವುಗಳ ಬಗ್ಗೆ ನಾವೆಲ್ಲರೂ ಇಂದಿಗೂ ಯೋಚಿಸುವಂತೆ ಮಾಡುತ್ತದೆ. ಈಗ ಅದೇ ಹೆಸರಿನಲ್ಲಿ ತೆರೆ ಕಂಡಿರುವ ದಯಾಳ್ ಪದ್ಮನಾಭನ್ ಅವರ “ರಂಗನಾಯಕಿ” ಸಿನಿಮಾದಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಆಧರಿಸಿ, ಹೆಣ್ಣಿನ ಕನ್ಯತ್ವದ ಬಗ್ಗೆಯೂ ಚರ್ಚೆ ಮಾಡಿ, ಒಂದು ಅರ್ಥಪೂರ್ಣ ಹಾಗೂ ಸಂದೇಶ ಜೊತೆಗೆ ಜಾಗೃತಿ ಮೂಡಿಸುವಂಥ ಸಿನಿಮಾ ಆಗಿ ಹೊರಹೊಮ್ಮಿದೆ.

ಕತೆ

ಅವಘಡವೊಂದರಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು ಅನಾಥೆಯಾಗಿದ್ದರೂ, ಅಪಾರ್ಟ್ಮೆಂಟ್ನಲ್ಲಿ ಲವಲವಿಕೆಯಿಂದ ವಾಸ ಮಾಡುತ್ತಾ, ವಯಸ್ಸಿನ ಅಂತರ ಇಲ್ಲದೆ ಎಲ್ಲರೊಡನೆ ಪ್ರೀತಿ ವಿಶ್ವಾಸ ಸ್ನೇಹದಿಂದ ನಡೆದುಕೊಳ್ಳುತ್ತಾ ಶಾಲೆಯೊಂದರಲ್ಲಿ ಸಂಗೀತ ಕಲಿಸುವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ರಂಗನಾಯಕಿ ನೇರವಂತಿಕೆಯ ಹೆಣ್ಣುಮಗಳು. ಅವಳು ಕೆಲಸ ಮಾಡುತ್ತಿರುವ ಶಾಲೆಯಲ್ಲಿಯೇ ಇರುವ ಇಬ್ಬರು ಶಿಕ್ಷಕರು ಅವಳನ್ನು ಪ್ರೀತಿಸುತ್ತಾರೆ. ಅವರಲ್ಲಿ ಒಬ್ಬನಿಗೆ ಮನಸ್ಸು ಕೊಡುವ ರಂಗನಾಯಕಿ ಅವನ ಮನೆಯವರೊಡನೆ ಕಲೆತು, ಬೆರೆತು ಮಾತನಾಡಿ ಮದುವೆಗೆ ಸಿದ್ಧಳಾಗುತ್ತಾಳೆ. ಇನ್ನೇನು ಸುಖ ಜೀವನಕ್ಕೆ ಮೂರೇ ಗೇಣು ಎಂಬಂತಹ ಸಂದರ್ಭದಲ್ಲಿ ಅದೊಂದು ಕರಾಳ ರಾತ್ರಿ ಅವಳ ಜೊತೆ ನಡೆಯಬಾರದ್ದು ನಡೆದು ಹೋಗುತ್ತದೆ. ಅದೊಂದು ದುರಂತದ ನಂತರ ಅವಳ ಜೀವನದ ಗತಿ ಏನಾಯಿತು? ಎನ್ನುವುದೇ ಚಿತ್ರದ ಸಾರಾಂಶ.

ಅಭಿನಯ

ರಂಗನಾಯಕಿ ಟೈಟಲ್ಗೆ ಇರುವ ತೂಕಕ್ಕೆ ತಕ್ಕ ಅಭಿನಯವನ್ನು ನಾಯಕಿ ಅದಿತಿ ಪ್ರಭುದೇವ ನೀಡಿದ್ದಾರೆ. ದ್ವಿತಿಯಾರ್ಧದಲ್ಲಿ ಶೋಷಿತ ಸ್ಥಿತಿಯಲ್ಲಿಯೂ ಎದೆಗುಂದದೆ ದಿಟ್ಟವಾಗಿ ಕಾನೂನಾತ್ಮಕ ಹೋರಾಟ ನಡೆಸುವ ಧೀಮಂತ ಹೆಣ್ಣುಮಗಳಾಗಿ ಅದಿತಿ ಅವರ ಅಭಿನಯ ಮನೋಜ್ಞವಾಗಿ ಮೂಡಿ ಬಂದಿದೆ. ಬೀರ್ಬಲ್ ಖ್ಯಾತಿಯ ಶ್ರೀನಿ ಗಮನ ಸೆಳೆಯುತ್ತಾರೆ. ಇನ್ಸ್ಪೆಕ್ಟರ್ ಪಾತ್ರಧಾರಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಸುಚೇಂದ್ರ ಪ್ರಸಾದ್ ಅತಿ ಚಿಕ್ಕ ಪಾತ್ರದಲ್ಲೂ ಶಿಳ್ಳೆ ಗಿಟ್ಟಿಸುತ್ತಾರೆ.

ತಾಂತ್ರಿಕತೆ

ರಚಿಸಿ ನಿರ್ದೇಶಿಸಿರುವ ದಯಾಳ್ ಪದ್ಮನಾಭನ್ ಅವರ ಕಥೆ ಹೇಳುವಿಕೆಯಲ್ಲಿ ನಾಜೂಕುತನ ಎದ್ದು ಕಾಣುತ್ತದೆ. ಇಂತಹುದೊಂದು ಸೂಕ್ಷ್ಮಾತಿಸೂಕ್ಷ್ಮ ವಿಷಯವನ್ನು ತೆರೆಯ ಮೇಲೆ ತಿಳಿಯಾಗಿ ಹಾಗೂ ಅಷ್ಟೇ ಬಿಗಿಯಾಗಿ ಪ್ರೇಕ್ಷಕರ ಮುಂದೆ ಸಾದರ ಪಡಿಸಿದ್ದಾರೆ. ಸಂಭಾಷಣೆ ರಚಿಸಿರುವ ನವೀನ್ ಕೃಷ್ಣ ಅವರ ಪದ ಪ್ರಯೋಗ ಸಿನಿಮಾದ ಹೈಲೈಟ್ಗಳಲ್ಲಿ ಒಂದು. ಹರಿ ದಾಸರ ಪದಗಳನ್ನು ಹಾಡುಗಳಾಗಿ ಬಳಸಿಕೊಂಡಿರುವ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಗೆ ಹ್ಯಾಟ್ಸಾಫ್. ಸಿನಿಮಾ ಮುಗಿದ ಮೇಲೂ ಚಿತ್ರದ “ಅಧರಂ ಮಧುರಂ” ನಿಮ್ಮ ಮನಸ್ಸಿನಲ್ಲಿ ಉಳಿಯದೇ ಇರದು.

ಕೊನೆಯ ಮಾತು

ಚಿತ್ರದ ಕೊನೆಯಲ್ಲಿ ಜಡ್ಜ್ ಪಾತ್ರಧಾರಿಯ ಸುಚೇಂದ್ರ ಪ್ರಸಾದ್ ಅವರು ಹೇಳುತ್ತಾರೆ.. ಹೆಣ್ಣನ್ನು, ಹೆಣ್ತನವನ್ನು ಗೌರವಿಸೋಣ – ನಮ್ಮ ಸಮಾಜವನ್ನು ಕಾಪಾಡಿಕೊಳ್ಳೋಣ.. ಎಂದು. ಹೌದಲ್ಲವೇ..?? ಹೆಣ್ಣಿಗೆ ಗೌರವ ನೀಡದೆ, ಹೆಣ್ಣಿಗೆ ಶೋಷಣೆಗಳನ್ನು ಮಾಡಿ, ಹೆಣ್ಣನ್ನು ಅಳಿಸಿ, ತುಳಿದು, ನಿಂದನೆ ಮಾಡುವ ಸಮಾಜವು ಬದುಕಲು ಯೋಗ್ಯ ಹೇಗೆ ಆದೀತು?? ನಾವೆಲ್ಲರೂ ಹೆಣ್ಣನ್ನು ಗೌರವಿಸುವುದನ್ನು ಕಲಿಯಬೇಕು. ರಂಗನಾಯಕಿ ಸಿನಿಮಾ ಕೊನೆಗೆ ಎಲ್ಲರಲ್ಲೂ ವಿನಂತಿಸಿಕೊಳ್ಳುವುದು ಇದನ್ನೇ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top