RESPONSIVE LEADERBOARD AD AREA
Film News

ಬಾಕ್ಸ್ ಆಫೀಸ್ ದಾಖಲೆಗಳನ್ನು ಚಿಂದಿ ಉಡಾಯಿಸಲು ಬರುತ್ತಿದ್ದಾನೆ ''ರಣವಿಕ್ರಮ''

ಒಂದು ಕಡೆಯಿಂದ ಬೇಸಿಗೆಯ ರಣಬಿಸಿಲಿನ ಬೇಗೆ ರಾಜ್ಯದೆಲ್ಲೆಡೆ ಹರಡಿಕೊಳ್ಳುತ್ತಾ ಜನರ ಮೈಯನ್ನು ಸುಡುತ್ತಿದ್ದರೆ, ಇನ್ನೊಂದು ಕಡೆಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಚಿತ್ರದ ಕ್ರೇಜ಼ು ರಾಜ್ಯಾದ್ಯಂತ ಚಿತ್ರಪ್ರೇಮಿಗಳನ್ನು ಆವರಿಸಿಕೊಂಡು ತೀವ್ರ ಕುತೂಹಲ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಸಿದ ಹೊಟ್ಟೆ ಅನ್ನವನ್ನು ಬಯಸುವಂತೆ, ಹದಿಹರೆಯದ ಹೆಣ್ಣು ಒಡವೆ ವಸ್ತ್ರಗಳಿಗೆ ಆಸೆ ಪಡುವಂತೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ರಣವಿಕ್ರಮ ಚಿತ್ರವು ತೆರೆಯ ಮೇಲೆ ಅಬ್ಬರಿಸುವುದನ್ನು ನೋಡಲು ಕಾಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ನೆನ್ನೆ ಚಿತ್ರಪ್ರೇಮಿಗಳೂ ಮತ್ತು ಪುನೀತ್ ಅಭಿಮಾನಿಗಳು ಸೇರಿಕೊಂಡು ರಣವಿಕ್ರಮ ಸಿನಿಮಾವನ್ನ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ, ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ ಈ ರೀತಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿರುವುದು ಎನ್ನುವುದು ಗಮನಿಸಬೇಕಾದ ವಿಷಯ. ಪುನೀತ್ ಚಿತ್ರವೆಂದ ಮೇಲೆ ನಿರೀಕ್ಷೆಗಳು, ಕ್ರೇಜ಼ುಗಳು ಇದ್ದಿದ್ದೇ, ಆದರೆ ರಣವಿಕ್ರಮನ ವಿಷಯದಲ್ಲಿ ಇದು ದೊಡ್ಡ ಮಟ್ಟಕ್ಕೆ ಹೋಗಿದೆ.

ಅಸಲಿ ಯಾಕಿಷ್ಟೊಂದು ಕ್ರೇಜ಼ು
*********************
ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ಅವರು ಪವರ್ ಸ್ಟಾರ್, ತೆರೆಯ ಮೇಲೆ ಅವರು ನಕ್ಕರೂ ಪವರ್, ಅತ್ತರೂ ಪವರ್, ಸ್ಟೆಪ್ಪು ಹಾಕಿದರೂ ಪವರ್, ವಿಲ್ಲನ್ ಗಳನ್ನು ಹಿಡಿದು ಚಚ್ಚುತ್ತಿದ್ದರಂತೂ ಪವರ್ರೋ ಪವರ್, ಅವರು ಏನು ಮಾಡಿದರೂ ಪವರ್ ಫುಲ್ ಆಗಿ ಮಾಡುತ್ತಾರೆ, ಅದಕ್ಕೇ ಅವರು ಅಷ್ಟು ದೊಡ್ಡ ಸಂಖ್ಯೆಯ ಅಭಿಮಾನಿ ವೃಂದವನ್ನು ತಮ್ಮ ಪವರ್ ನಿಂದ ಆವರಿಸಿಕೊಂಡಿರುವುದು. ಇಂತಹ ಪವರ್ ಸ್ಟಾರ್ ಪವರ್ ಫುಲ್ ಪಾತ್ರಗಳಲ್ಲಿ ಅಂದರೆ ಸಾಹಸ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಸ್ಟೈಲಿಶ್ ಪೋಸ್ಟರ್ ಗಳಲ್ಲಿ ಬೃಹತ್ ಗನ್ ಹಿಡಿದ ಪವರ್ ಸ್ಟಾರ್ ಮತ್ತು ಟೀಸರ್ ನಲ್ಲಿ ಸ್ಟೈಲಿಶ್ ಆಗಿ ವಿಲ್ಲನ್ ಗಳನ್ನು ಶೂಟ್ ಮಾಡುತ್ತಿದ್ದ ಪವರ್ ಸ್ಟಾರ್ ನೋಡಿದ ಅಭಿಮಾನಿಗಳು ಹುಚ್ಚೆದ್ದು ಹೋದರು. ರಣವಿಕ್ರಮ ಒಂದು ಪೂರ್ಣ ಪ್ರಮಾಣದ ಕಮರ್ಶಿಯಲ್ ಆಕ್ಷನ್ ಚಿತ್ರ, ಮೈತ್ರಿಯಂತಹ ಕಲಾವಂತಿಕೆಯ ಸಿನಿಮಾ ನಂತರ ಪವರ್ ಸ್ಟಾರ್ ಪೂರ್ಣ ಪ್ರಮಾಣದ ಆಕ್ಷನ್ ಓರಿಎಂಟೆಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತಿ ಚಿಕ್ಕ ವಯಸ್ಸಿಗೆ ಎರಡು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಸಾಕಷ್ಟು ಭರವಸೆ ಮೂಡಿಸಿರುವ ಪವನ್ ವಡೆಯರ್ ಈ ಚಿತ್ರವನ್ನು ನಿರ್ದೇಶಿಸಿರುವುದು ಕ್ರೇಜ಼ು ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಚಿತ್ರ ಸೆಟ್ ಏರಿದಾಗ ಬಿಡುಗಡೆಗೊಂಡ ಪೋಸ್ಟರ್ ಗಳನ್ನು ನೋಡಿದ ಚಿತ್ರಪ್ರೇಮಿಗಳು ಹುಬ್ಬೇರಿಸಿದ್ದರು, ಈ ಸಿನಿಮಾ ಸಖತ್ತಾಗಿರುತ್ತೆ ಗುರು ಅಂದುಕೊಂಡರು, ಪವನ್ ವಡೆಯರ್ ಪುನೀತ್ ಗೆ ಅಂತ ಹೆಚ್ಚು ಮುತುವರ್ಜಿಯಿಂದ ಸೂಪರ್ ಆಗಿ ವರ್ಕ್ ಮಾಡಿರ್ತಾರೆ ಅಂತ ಮಾತಾಡಿಕೊಂಡರು ಜನ. ಅಂದಿನಿಂದ ಇಂದಿನವರೆಗೂ ಅದೇ ಮಟ್ಟದ ಕ್ರೇಜ಼ು ಉಳಿಸಿಕೊಂಡು ಬಂದಿದ್ದು ಪವನ್ ವಡೆಯರ್ ಶ್ಲಾಘನೆ.

ಮುರಿದು ಬೀಳಲು ಸಿದ್ದವಾಗಿರುವ ಬಾಕ್ಸ್ ಆಫೀಸ್ ದಾಖಲೆಗಳು
*******************************************
ಕನ್ನಡ ಚಿತ್ರರಂಗ ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದ ಬಿಡುಗಡೆಗೆ ರಣವಿಕ್ರಮ ಸಜ್ಜಾಗಿದೆ, ಕರ್ನಾಟಕದಲ್ಲಿ 250 ಮತ್ತು ಹೊರ ರಾಜ್ಯಗಳಲ್ಲಿ 50 ಚಿತ್ರಮಂದಿರಗಳು ಒಟ್ಟು ಅನಾಮತ್ತು 300 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಬಾಕ್ಸ್ ಆಫೀಸ್ ದಾಖಲೆಗಳ ಮೇಲೆ ಮುರಕೊಂಡು ಬೀಳಲಿರುವ ರಣವಿಕ್ರಮ ಹೊಸ ಮತ್ತು ಹಳೆಯ ದಾಖಲೆಗಳನ್ನು ಸಲೀಸಾಗಿ ಮುರಿಯಬಲ್ಲದು, ಚಿತ್ರ ಹೇಗೆ ಮೂಡಿಬಂದಿದೆ ಎನ್ನುವುದರ ಮೇಲೆ ಎಲ್ಲಾ ಅವಲಂಬಿತವಾಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕ ನಗು ಮೊಗದಿಂದ ಚಿತ್ರಮಂದಿರದ ಹೊರಕ್ಕೆ ಬಂದನೆಂದರೆ ದಾಖಲೆಗಳ ಪುಡಿ ಪುಡಿಯ ಆರಂಭ ಶುರುವಾಯಿತು ಅಂತ ಅರ್ಥ.

ಎಲ್ಲಾ ಒಳ್ಳೆಯದಾಗಲಿ
***************
ರಣವಿಕ್ರಮ – ರಣವಿಕ್ರಮ ನೀ ಮಾಡು ಕನ್ನಡವ ಸಕ್ರಮ ಎನ್ನುವ ಸಾಲು ಚಿತ್ರದ ಹಾಡೊಂದರಲ್ಲಿ ಬಂದು ಹೋಗುತ್ತದೆ, ಈ ಚಿತ್ರ ಚೆನ್ನಾಗಿ ಮೂಡಿಬಂದು ಯಶಸ್ವಿಯಾಯಿತೆಂದರೆ ಅದು ಕೇವಲ ಪುನೀತ್ ಮತ್ತು ಚಿತ್ರತಂಡದ ಗೆಲುವು ಮಾತ್ರವಾಗುವುದಿಲ್ಲ. ಇಡೀ ಕನ್ನಡ ಚಿತ್ರರಂಗದ ಭರವಸೆಯ ಗೆಲುವಾಗುತ್ತದೆ, ಮಾರುಕಟ್ಟೆಯ ವಿಸ್ತೀರ್ಣವನ್ನು ಸಾಧಿಸಿದ ಗೆಲುವಾಗುತ್ತದೆ. ಮತ್ತಷ್ಟು ದೊಡ್ಡ ಬಜೆಟ್ ನ ಚಿತ್ರಗಳ ಹುಟ್ಟಿನ ಗೆಲುವಾಗುತ್ತದೆ. ಹೀಗಾಗಿ ರಣವಿಕ್ರಮ ಗೆಲ್ಲಬೇಕು, ಅಭಿಮಾನಿಗಳಿಗಾಗಿ ಗೆಲ್ಲಬೇಕು, ಕನ್ನಡ ಚಿತ್ರರಂಗಕ್ಕಾಗಿ ಗೆಲ್ಲಬೇಕು. ಕನ್ನಡಕಾಗಿ ಗೆಲ್ಲಬೇಕು.
ಜೈ ಕರ್ನಾಟಕ ಮಾತೆ.

RESPONSIVE LEADERBOARD AD AREA
RESPONSIVE LEADERBOARD AD AREA
To Top