RESPONSIVE LEADERBOARD AD AREA
Film News

ರಕ್ಷಿತ್ ಶೆಟ್ಟಿ ಇನ್ ‘ಅವನೇ ಶ್ರೀಮನ್ನಾರಾಯಣ’

‘ಕಿರಿಕ್ ಪಾರ್ಟಿ’ ನಂತರ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಉಳಿದವರು ಕಂಡಂತೆ’ ಚಿತ್ರದ ಬಳಿಕ ,ತಾವೇ ಚಿತ್ರಕಥೆ ರಚಿಸಿ, ಅಭಿನಯಿಸುತ್ತಿರುವ ರಕ್ಷಿತ್, ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಸ್ಥಾನ ಹೊಂದಿದ್ದಾರೆ.

ಇದೀಗ ‘ಶ್ರೀಮನ್ನಾರಾಯಣ’ ಚಿತ್ರದ ಮೊದಲ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಎರಡನೇ ಭಾಗದ ಚಿತ್ರೀಕರಣ ನಡೆಯುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಹೆಚ್ ಕೆ ಪ್ರಕಾಶ್ ಜೊತೆಗೂಡಿ ರಕ್ಷಿತ್ ಶೆಟ್ಟಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಮತ್ತು ಅಜನೀಶ್ ಲೊಕನಾಥ್ ಸಂಗೀತ, ಕರಮ್ ಚಾವ್ಲಾ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಚೊಚ್ಚಲ ಚಿತ್ರವನ್ನು ನಿರ್ದೇಶಿಸುತ್ತಿರುವ ಸಚಿನ್ ಬಿ ಆರ್, ‘ಈ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಗೆ ಹೊಸ ಇಮೇಜ್ ದೊರೆಯಲಿದೆ. ಉಳಿದವರು ಕಂಡಂತೆ ಚಿತ್ರದಲ್ಲಿ ಅವರು ವಿಶಿಷ್ಟ ಮ್ಯಾನರಿಸಂ ಉಳ್ಳ, ರಿಮ್ಯಾಂಡ್ ಹೋಮ್ ನಿಂದ ಆಚೆ ಬಂದ ರಗಡ್ ಯುವಕನ ಪಾತ್ರದಲ್ಲಿ ಅಭಿನಯಿಸಿದಾಗ ಈ ಚಾಕಲೇಟ್ ಹೀರೋ ಹೀಗೂ ನಟಿಸಬಹುದೇ!  ಎನ್ನುವ ಅಚ್ಚರಿ ಮೂಡಿಸಿದ್ದರು. ಈ ಚಿತ್ರದಲ್ಲಿ ಇನ್ನೊಂದು ಬೇರೆಯದ್ದೇ ಶೇಡ್ ನಲ್ಲಿ ನಟಿಸಿದ್ದಾರೆ’ ಎನ್ನುತ್ತಾರೆ.

ಸ್ಕ್ರಿಪ್ಟ್ ರಚನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದ ರಕ್ಷಿತ್ ಗೆ ತಮ್ಮ ಕಲ್ಪನೆಯಂತೆ ಪೊಲೀಸ್ ಅಧಿಕಾರಿಯ ಪಾತ್ರ ಮೂಡಿ ಬರುತ್ತಿರುವ ಬಗ್ಗೆ ಹೆಮ್ಮೆ ಇದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಲವ್ವರ್ ಬಾಯ್, ಕಿರಿಕ್ ಪಾರ್ಟಿ ಯಲ್ಲಿ ಕಾಲೇಜ್ ಹುಡುಗ, ರಿಕ್ಕಿಯಲ್ಲಿ ನಕ್ಸಲೈಟ್, ಹೀಗೆ ಪ್ರತಿ ಚಿತ್ರದಲ್ಲಿ ಹೊಸತನ ಹುಡುಕುವ ರಕ್ಷಿತ್, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಲಿದ್ದಾರೆ.

ಚಿತ್ರದ ಕಥೆಯ ಎಳೆಯನ್ನು ಬಿಟ್ಟುಕೊಡದ ನಿರ್ದೇಶಕ ಸಚಿನ್, ಈ ಚಿತ್ರ ಮೂಡಿಬರುತ್ತಿರುವ ರೀತಿಯ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದಾರೆ. ಈ ವರ್ಷದ ಮತ್ತೊಂದು ಸೂಪರ್ ಹಿಟ್ ಚಿತ್ರ ಇದಾಗಲಿದೆ ಎನ್ನುತ್ತದೆ, ಈ ಚಿತ್ರದಲ್ಲಿ ದುಡಿದ ಚಿತ್ರತಂಡ. ಚಿತ್ರದಲ್ಲಿ ಪ್ರತಿಯೊಂದು ಪಾತ್ರವೂ ಪ್ರಾಮುಖ್ಯತೆ ಹೊಂದಿದ್ದು, ಪಾತ್ರ ಸೃಷ್ಟಿ ಗಾಗಿ ಸಾಕಷ್ಟು ವರ್ಕ್ ಮಾಡಲಾಗಿದೆಯಂತೆ.

ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿದ್ದು ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ ಅಚ್ಯುತ್ ಕುಮಾರ್, ಚಿತ್ರದ ಪ್ರಮುಖ ಪಾತ್ರದಲ್ಲಿ ಇದ್ದಾರೆ, ಅಲ್ಲದೆ ಚಿತ್ರದಲ್ಲಿ ಗನ್ ಕೂಡ ಮಹತ್ವದ ಪಾತ್ರ ಹೊಂದಿದ್ದು, ಅದಕ್ಕೂ ಹೆಸರಿದೆಯಂತೆ. ಶೇಕಡಾ 85 ಪರ್ಸೆಂಟ್ ಚಿತ್ರವನ್ನು ಒಳಾಂಗಣದಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದ ಭಾಗವನ್ನ ಚಿತ್ರೀಕರಿಸಲು ಯೋಜನೆ ಸಿದ್ಧವಾಗಿದೆ. ಕ್ಲೈಮ್ಯಾಕ್ಸ್ ಬಹಳ ವಿಭಿನ್ನವಾಗಿದ್ದು ಅದರ ಚಿತ್ರೀಕರಣ ಒಂದು ಸವಾಲು ಎಂದು ನಿರ್ದೇಶಕರು ಹೇಳಿದ್ದಾರೆ. ಕೋಟೆಯಂತಹ ಸೆಟ್ ಹಾಕಿದ್ದು, ಸುಮಾರು 150 ರಿಂದ 200 ಜನರ ನಡುವೆ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸಲು ಯೋಜಿಸಲಾಗಿದೆ.

ತನ್ನ ವಿಶಿಷ್ಟ ಹೆಸರು ಹಾಗೂ ರಕ್ಷಿತ್ ಶೆಟ್ಟಿಯ ವಿಭಿನ್ನ ಲುಕ್ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಿವೆ. ಅವರ ಹಿಂದಿನ ಚಿತ್ರಗಳಂತೆ ಈ ಚಿತ್ರವು ಯಶಸ್ಸು ಕಾಣಲಿದೆಯೇ..? ಕಾಲವೇ ಹೇಳಬೇಕು. ‘ಶ್ರೀಮನ್ನಾರಾಯಣ’ನಿಗೆ ಆಲ್ ದಿ ಬೆಸ್ಟ್ ಎನ್ನೋಣವೇ?

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top