RESPONSIVE LEADERBOARD AD AREA
Film News

ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಲೇಟೆಸ್ಟ್ ಅಪ್ಡೇಟ್ಸ್…!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹೊಸ ಚಿತ್ರ ‘ಅವನೇ ಶ್ರೀಮನ್ನಾರಾಯಣ’ ದ ಲೇಟೆಸ್ಟ್ ಅಪ್ಡೇಟ್ ಲಭ್ಯವಾಗಿದ್ದು, ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅವುಗಳ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಶೇಷವೆಂದರೆ, ಚಿತ್ರದ ಬಹುತೇಕ ಹಾಡುಗಳಲ್ಲಿ ರಕ್ಷಿತ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕಿಯ ಜೊತೆ ಡುಯೆಟ್ ನಲ್ಲಿಯೂ ಹೀಗೆಯೇ ಕಾಣಿಸಲಿದ್ದಾರೆಯೇ? ಎಂಬ ಪ್ರಶ್ನೆಗೆ ಚಿತ್ರದ ನಿರ್ದೇಶಕ ಸಚಿನ್ ರವಿ ಹೌದು ಎಂದು ಮುಗುಳ್ನಗುತ್ತಾರೆ!!

ಚಿತ್ರಕ್ಕೆ ನೃತ್ಯ ನಿರ್ದೇಶನವನ್ನು ಇಮ್ರಾನ್ ಸರ್ದಾರಿಯಾ ಮಾಡಲಿದ್ದು, ನಾಗಾರ್ಜುನ ಸಾಹಿತ್ಯ ಒದಗಿಸಿದ್ದಾರೆ. ಚರಣರಾಜ್ ಮತ್ತು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.ಕರಮ್ ಚಾವ್ಲಾ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದೊಂದು ಪಿರಿಯಾಡಿಕಲ್ ಡ್ರಾಮಾ ಆಗಿದ್ದು 80ರ ದಶಕದ ಸನ್ನಿವೇಶಗಳನ್ನು ಸೃಷ್ಟಿಸಲಾಗುವುದು. ಇದಕ್ಕಾಗಿ ವಿಶೇಷ VFX ಮತ್ತು 3D ಎಫೆಕ್ಟ್ ನೀಡಲಾಗುವುದಂತೆ.

ಸ್ಯಾಂಡಲ್ ವುಡ್ ನ ಸಿನಿಮಾಗಳು ಇತ್ತೀಚೆಗೆ ಇಡೀ ದೇಶದಲ್ಲಿ ಮನ್ನಣೆ ಪಡೆದುಕೊಳ್ಳುತ್ತಿವೆ. ಯಶ್ ಅಭಿನಯದ ‘ಕೆಜಿಎಫ್’ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದೆ. ಇದೀಗ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಕೂಡ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

‘ಕಿರಿಕ್ ಪಾರ್ಟಿ’ ನಂತರ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ತೊಡಗಿಕೊಂಡಿದ್ದು, ‘ಉಳಿದವರು ಕಂಡಂತೆ’ ಚಿತ್ರದ ಬಳಿಕ ,ತಾವೇ ಚಿತ್ರಕಥೆ ರಚಿಸಿ, ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಸಚಿನ್ ರವಿ ನಿರ್ದೇಶಿಸುತ್ತಿದ್ದಾರೆ.

ರಕ್ಷಿತ್ ರ ‘ಉಳಿದವರು ಕಂಡಂತೆ’ ಸಿನಿಮಾವನ್ನು ತಮಿಳು ಮತ್ತು ಮಲಯಾಳಂ ನಲ್ಲಿ ರಿಮೇಕ್ ಮಾಡಲಾಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ‘ಕಿರಿಕ್ ಪಾರ್ಟಿ’ಯನ್ನು ತೆಲುಗು ಮತ್ತು ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ. ಹಾಗಾಗಿ ರಕ್ಷಿತ್ ಸಿನಿಮಾಗಳಿಗೆ ಹೊರ ರಾಜ್ಯಗಳಲ್ಲೂ ಮನ್ನಣೆ ಸಿಗುತ್ತಿರುವುದು ಕಂಡುಬರುತ್ತಿದೆ. ‘ಶ್ರೀಮನ್ನಾರಾಯಣ’ ನ ಫಸ್ಟ್ ಟೀಸರನ್ನು ಎಲ್ಲಾ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಿತ್ರದ ಕಥೆಯ ಎಳೆಯನ್ನು ಬಿಟ್ಟುಕೊಡದ ನಿರ್ದೇಶಕ ಸಚಿನ್, ‘ಶ್ರೀಮನ್ನಾರಾಯಣನ ಕಥೆ ಸಾರ್ವತ್ರಿಕವಾಗಿದ್ದು, ಎಲ್ಲಾ ಭಾಷೆಗಳ ಪ್ರೇಕ್ಷಕರ ಮನಸ್ಸಿಗೆ ತಟ್ಟಲಿದೆ. ಈ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಸಿನಿಮಾಗಳು ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿಯೂ ದೊಡ್ಡ ಮಟ್ಟದ ಮಾರ್ಕೆಟ್ ಸೃಷ್ಟಿಸಲಿವೆ’ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿದ್ದು ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ ಅಚ್ಯುತ್ ಕುಮಾರ್, ಚಿತ್ರದ ಪ್ರಮುಖ ಪಾತ್ರದಲ್ಲಿ ಇದ್ದಾರೆ, ಅಲ್ಲದೆ ಚಿತ್ರದಲ್ಲಿ ಗನ್ ಕೂಡ ಮಹತ್ವದ ಪಾತ್ರ ಹೊಂದಿದ್ದು, ಅದಕ್ಕೂ ಹೆಸರಿದೆಯಂತೆ.

ನಾಲ್ಕು ಭಾಷೆಯಲ್ಲಿ ಡಬ್ಬಿಂಗ್ ಮಾಡಲು ನುರಿತ ಬರಹಗಾರರು ಮತ್ತು ಡಬ್ಬಿಂಗ್ ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಚಿತ್ರವನ್ನು 2019ರ ಬೇಸಿಗೆ ರಜೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ .

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top