RESPONSIVE LEADERBOARD AD AREA
Movie Reviews

Rajaratha Movie Review

ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ ಎಂದ ರಾಜರಥ

ತಮ್ಮ ಸೃಜನಶೀಲತೆಯಿಂದ ಚಿತ್ರೋದ್ಯಮದ ಗಮನ ಸೆಳೆದ, ತಮ್ಮ ಮೊದಲ ಚಿತ್ರ ರಂಗಿತರಂಗದ ಚಿತ್ರಕಥೆ-ಸಂಭಾಷಣೆ-ಹಾಡು-ನಿರ್ದೇಶನಕ್ಕೆ ಪ್ರೇಕ್ಷಕ ವೃಂದದ ಮೆಚ್ಚುಗೆ ಪಡೆದ ಅನೂಪ್ ಭಂಡಾರಿ ”ರಾಜರಥ” ಚಿತ್ರವನ್ನು ಶುರುಮಾಡಿದ ದಿನದಿಂದಲೇ ದೊಡ್ಡ ನಿರೀಕ್ಷೆಗಳನ್ನು ಗರಿಗೆದರಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಮೂಡಿಬರುತ್ತಿದೆ ಎಂದು ತಿಳಿದಾಗ ಕನ್ನಡ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ”ರಾಜರಥ” ಎತ್ತಿ ಕೂರಿಸಲಿದೆ ಎಂಬ ಆಸೆಗೆ ಚಿತ್ರದ ಟ್ರೈಲರ್ ಇಂಬು ನೀಡಿತ್ತು.

ಕಥೆ – ರಾಜರಥ ಅನ್ನೋ ಬಸ್ ತನ್ನೊಳಗೆ ಕುಳಿತ ಪ್ರಯಾಣಿಕರ ಅದರಲ್ಲೂ ಅಭಿ ಮತ್ತು ಮೇಘ ಅನ್ನೋ ಕಾಲೇಜು ಜೋಡಿಯ ಕಥೆಯನ್ನು ಹೇಳುತ್ತದೆ. ರಾಜರಥ ಬಸ್ ಗೆ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಪ್ರೇಮಕಥೆಯ ಜೊತೆಗೆ ನಾಡಿನ ಚರ್ಚಾರ್ಹ ವಿಷಯವೊಂದರ ಕೊಂಡಿ ಚಿತ್ರಕಥೆಯಲ್ಲಿದ್ದು ಕೊನೆಗೆ ”ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ” ಎಂಬ ಸಂದೇಶ ನೀಡುವಲ್ಲಿ ಬಳಕೆಯಾಗಿದೆ.

ಒಳ್ಳೆಯದು– ಕಣ್ತಣಿಸುವ ಛಾಯಾಗ್ರಹಣ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅರ್ಥಗರ್ಭಿತವಾದ ಸಂಭಾಷಣೆಗಳಿರುವ, ಸಭ್ಯ ಚಿತ್ರವಿದು. ತಾಂತ್ರಿಕ ಸೌಂದರ್ಯಕ್ಕೆ ಕೊರತೆಯೇ ಇಲ್ಲ. ಯುವ ಜೋಡಿಯನ್ನು ಆಧರಿಸಿ ಮಾಡಿದ ಪ್ರೇಮಕಥೆಯಿರುವ ಕಾರಣ, ನಿರುಪ್ ಭಂಡಾರಿ ಮತ್ತು ಅವಂತಿಕಾ ಶೆಟ್ಟಿ ಜೋಡಿಯನ್ನು ತೆರೆಯ ಮೇಲೆ ತೋರಿರುವ ಶೈಲಿ ಆಕರ್ಷಣೀಯ. ಇವರಿಗೆ ಪೂರಕವಾಗಿ ಮನೋಜ್ಞ ಅಭಿನಯ ನೀಡಬಲ್ಲ ನುರಿತ ಕಲಾವಿದರ ದೊಡ್ಡ ತಂಡವಿದೆ. ಯುವಜನತೆಗೆ ಬೇಕಾದ ಪ್ರೀತಿಯ ಸಿಹಿ ಸಿನಿಮಾದ ಉದ್ದಕ್ಕೂ ಇದೆ. ಮಿಸ್ಟರ್ ಪಚ್ಚಬಾಳೆ – ಅಲಿಯಾಸ್ ಅಭಿ ಎಂಬ ಮುಗ್ಧ ಮನಸ್ಸಿನ ಪ್ರೇಮಿಯಾಗಿ ನಿರೂಪ್ ಭಂಡಾರಿ ತಮ್ಮ ಶಕ್ತಿ ಮೀರಿ ಅಭಿನಯಿಸಿದ್ದರೆ, ಮೇಘ ರೆಡ್ಡಿ ಆಗಿ ಆವಂತಿಕಾ ಶೆಟ್ಟಿ ಪಾತ್ರಕೆ ಜೀವ ತುಂಬಿದ್ದಾರೆ. ರಕ್ಷಣಾ ವೇದಿಕೆಯ ಸ್ವಾಭಿಮಾನಿ ನಾಯಕನಾಗಿ ಆರ್ಯ ಅಭಿನಯದಲ್ಲಿ ಲೋಪವಿಲ್ಲ.

ಟೀಕಿಸುವಂತದ್ದು – ಚಿತ್ರದ ಮೊದಲರ್ಧದುದ್ದಕ್ಕೂ ಪಾತ್ರಗಳ ಪರಿಚಯವೇ ತುಂಬಿ ಹೋಗಿರುವುದು ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ. ಚಿತ್ರಕಥೆ ಸಾಗುವ ರೀತಿ ವಿಭಿನ್ನವಾಗಿರುವುದು ನಿಜವಾದರೂ ನೋಡುಗನಿಗೆ ಗಜಿಬಿಜಿ ಭಾವ ಕೊಡಮಾಡಿದೆ. ಅನೂಪ್ ಭಂಡಾರಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಖುಷಿ ನೀಡುವುದಿಲ್ಲ. ಕಥೆ ಎತ್ತ ಕಡೆ ಸಾಗುತ್ತಿದೆ ಎಂಬ ಅರಿವೇ ಆಗದಂತೆ ಸಾಗುವ ನಿರೂಪಣೆ ಚಿತ್ರಕ್ಕೆ ವಿರುದ್ಧವಾಗಿ ಕೆಲಸ ಮಾಡಿಬಿಟ್ಟಿದೆ. ಚಿತ್ರದ ಕ್ಲೈಮಾಕ್ಸ್ ನಲ್ಲಿರುವ ತೀವ್ರತೆ ಹಾಗೂ ಸಂದೇಶವನ್ನು ಅನುಭವಿಸುವ ಮತ್ತು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಪ್ರೇಕ್ಷಕ ಇರದಂತೆ ಇಡೀ ಚಿತ್ರ ಸಾಗಿದೆ.

ಕೊನೆಯದಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರು ತಮ್ಮ ಮೊದಲ ಸಿನಿಮಾ ”ರಂಗಿತರಂಗ”ದಿಂದ ಎಲ್ಲರೂ ಬೆರಳು ಬಾಯ ಮೇಲೆ ಇಟ್ಟು, ತನ್ನ ಕಡೆ ನೋಡುವಂತೆ ಮಾಡಿಕೊಂಡಿದ್ದರು. ಚಿತ್ರದ ವಿಷಯ ವಸ್ತು ಮತ್ತು ಡೈರೆಕ್ಟರ್ ಜಾಣ್ಮೆಗೆ ಪ್ರೇಕ್ಷಕ ಪ್ರಭುಗಳು ಫುಲ್ ಮಾರ್ಕ್ ಕೊಟ್ಟು ಭೇಷ್ ಎಂದಿದ್ದರು. ಅವರು ಬಹಳ ಇಷ್ಟಪಟ್ಟು ಮಹತ್ವಾಕಾಂಕ್ಷೆಯಿಂದ ರೂಪಿಸಿದ ”ರಾಜರಥ” ಸಿನಿಮಾದಲ್ಲಿ ಮಾಧುರ್ಯಕ್ಕೆ ಮುಕ್ಕಿಲ್ಲ, ಕಣ್ಣಿಗೆ ಬಣ್ಣಗಳ ಹಬ್ಬ ಹೇರಳವಾಗಿದೆ, ಆದರೆ ಮನಸಿಗೆ ತಾಕುವ ರಂಜನೆ ಮತ್ತು ಕುತೂಹಲವಿಲ್ಲ.

ರೇಟಿಂಗ್ – ೨.೫/೫

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top