RESPONSIVE LEADERBOARD AD AREA
Film News

ಅಂತೂ ‘ಯುವರತ್ನ’ ನಿಗೆ ಯುವರಾಣಿ ಸಿಕ್ಕಾಯ್ತು..!!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಜೋಡಿ, ‘ರಾಜಕುಮಾರ’ ಎಂಬ ಸೂಪರ್ ಹಿಟ್ ಚಿತ್ರ ನೀಡಿತ್ತು. ಇದೀಗ ಈ ಜೋಡಿ ‘ಯುವರತ್ನ’ ಚಿತ್ರದಲ್ಲಿ ಮತ್ತೆ ಒಂದಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

‘ಕೆಜಿಎಫ್’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಫೆಬ್ರವರಿ 14 ರಿಂದ ಚಿತ್ರೀಕರಣ ಆರಂಭವಾಗಲಿದೆ. ಪ್ರಮುಖವಾದ ಆಕ್ಷನ್ ಸನ್ನಿವೇಶದೊಂದಿಗೆ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಈ ನಡುವೆ ಚಿತ್ರದ ನಾಯಕಿ ಯಾರಾಗಲಿದ್ದಾರೆ? ಎಂಬ ಕುತೂಹಲ ಮೂಡಿತ್ತು. ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದ್ದು, ಹಿಂದಿಯ ಹಿರಿಯ ನಟರಾದ ಸಾಯಿರಾಬಾನು ಮತ್ತು ದಿಲೀಪ್ ಕುಮಾರ್ ದಂಪತಿಯ ಮೊಮ್ಮಗಳು ‘ಸಾಯೇಶ’ ಈ ಚಿತ್ರದ ನಾಯಕಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರತಂಡ ಎರಡು ಪ್ರಮುಖ ಚಿತ್ರ ನಟಿಯರ ಹೆಸರನ್ನು ಪ್ರಸ್ತಾಪಿಸಲಾಗಿತ್ತಾದರೂ ಕೊನೆಯಲ್ಲಿ ಸಾಯೇಶ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಹಿಂದಿಯ ಶಿವಾಯ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ, ಈ ಸುಂದರಿ ಈಗಾಗಲೇ ತಮಿಳಿನಲ್ಲಿ ‘ವನಮಗನ್’ ಹಾಗೂ ಆರ್ಯ ಜೊತೆಗೆ ‘ಗಜನಿಕಾಂತ’ , ಸೂರ್ಯ ಜೊತೆಗೆ ಕೆವಿ ಆನಂದ್ ನಿರ್ದೇಶಿಸುತ್ತಿರುವ ‘ಕಾಪನ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ಅಖಿಲ್ ಜೊತೆಗಿನ ಅವರ ಚಿತ್ರ ಯಶಸ್ಸು ಕಂಡಿತ್ತು.

‘ಸಾಯೇಶ’ ರನ್ನು ಕನ್ನಡಕ್ಕೆ ಕರೆತರಲು ಈ ಹಿಂದೆ ಪ್ರಯತ್ನಿಸಲಾಗಿತ್ತು. ಆದರೆ ಉತ್ತಮ ಕತೆಗಾಗಿ ಮತ್ತು ಪಾತ್ರಕ್ಕಾಗಿ ಕಾಯುತ್ತಿದ್ದ ಸಾಯೇಶ ಪುನೀತ್ ಅವರೊಂದಿಗೆ ಅಭಿನಯಿಸಲು ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.

ಕನ್ನಡ ರಾಜ್ಯೋತ್ಸವದಂದು ‘ಯುವರತ್ನ’ ಟೈಟಲ್ ಬಿಡುಗಡೆಯಾಗಿದ್ದು, ಚಿತ್ರದ ಟ್ಯಾಗ್ ಲೈನ್ ‘ಪವರ್ ಅಫ್ ಯೂತ್’ ಎಂದಿದ್ದು, ಇದೊಂದು ಯೂತ್ ಫುಲ್ ಸಬ್ಜೆಕ್ಟ್ ಇರುವ ಚಿತ್ರ ಎನ್ನಲಾಗಿದೆ. ಡಿಸೆಂಬರ್ 12 ರಂದು ಸರಳ ಮುಹೂರ್ತ ನೆರವೇರಿದ್ದು, ಚಿತ್ರತಂಡ, ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿತ್ತು. ಈಗಾಗಲೇ ಇತರೆ ತಾರಾಗಣದ ಆಯ್ಕೆ ಬಹುತೇಕ ಪೂರ್ಣಗೊಂಡಿದೆ.

ಚಿತ್ರದಲ್ಲಿ ಪುನೀತ್ ಅವರು ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ. ತಮ್ಮ ಮೊದಲ ಸಿನಿಮಾ ‘ಅಪ್ಪು’ ಚಿತ್ರದಲ್ಲಿ ಕಾಲೇಜ್ ಹುಡುಗನಾಗಿ ಪುನೀತ್ ನಟಿಸಿದ್ದರು. ಈಗ ಮತ್ತೊಮ್ಮೆ ಕಾಲೇಜ್ ಹುಡುಗನಾಗಿ ಅಭಿನಯಿಸುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top