ರಾಧಾ ಕಲ್ಯಾಣ ಮತ್ತು ಸರ್ಪ ಸಂಬಂಧ ಮುಂತಾದ ಧಾರಾವಾಹಿಗಳು ಹಾಗು ‘ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ’ ಚಿತ್ರ ನಿರ್ಮಿಸಿದ್ದ, ಆಶು ಬೆದ್ರ ಈಗ ‘ಚೂರಿಕಟ್ಟೆ’ ಖ್ಯಾತಿಯ ಪ್ರವೀಣ್ ಜೊತೆ ನಾಯಕನಾಗಿ ನಟಿಸುತ್ತಿದ್ದಾರೆ.
ಚಿತ್ರಕಲಾವಿದನಾಗಲೆಂದೇ ಕನ್ನಡ ಚಿತ್ರರಂಗಕ್ಕೆ ಬಂದ ಬೆದ್ರ, ಬಹಳ ವರ್ಷಗಳ ಕಾಲ ಹಲವು ಚಿತ್ರ ತಂತ್ರಜ್ಞರ ಜೊತೆ ಕೆಲಸ ನಿರ್ವಹಿಸಿ, ನಂತರ ನಿರ್ಮಾಪಕರಾಗಿ ಅನುಭವ ಪಡೆದಿದ್ದಾರೆ.
ಆಶು ಬೆದ್ರ, ಈ ಮೊದಲು ಅರವಿಂದ ಶಾಸ್ತ್ರಿ ನಿರ್ದೇಶನದ ‘ಅಳಿದು ಉಳಿದವರು’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗುವ ಪ್ರಯತ್ನ ಮಾಡಿದ್ದರು. ಈಗ ಶಾಹುರಾಜ್ ಶಿಂಧೆ ನಿರ್ದೇಶನದ ‘ರಂಗಮಂದಿರ’ ಎಂಬ ಚಿತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.
ದರ್ಶನ್ ಅವರ ‘ಸ್ನೇಹನಾ ಪ್ರೀತಿನಾ..?’ ಮತ್ತು ‘ಅರ್ಜುನ್’ ಎಂಬ ಹಿಟ್ ಸಿನಿಮಾಗಳನ್ನು ನೀಡಿದ್ದ ಶಾಹುರಾಜ್ ಶಿಂಧೆ ಈ ಪ್ರಾಜೆಕ್ಟನ್ನು 8 ವರ್ಷಗಳ ಬಿಡುವಿನ ನಂತರ ಕೈಗೆತ್ತಿಕೊಂಡಿದ್ದಾರೆ.
ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ಅನುಪಮಾ ಗೌಡ ಆಯ್ಕೆಯಾಗಿದ್ದು ಇನ್ನೊಬ್ಬ ನಾಯಕಿಗಾಗಿ ಹುಡುಕಾಟ ನಡೆದಿದೆ. ತೆಲುಗು ನಟ ಸುಮನ್, ರಂಗಾಯಣ ರಘು, ಅಚ್ಯುತ್ ಕುಮಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.
