RESPONSIVE LEADERBOARD AD AREA
Film News

ಸ್ವಜನ ಪಕ್ಷಪಾತ(Nepotism)ದುನಿಯಾದಲ್ಲಿ ಹೊಸ ಪ್ರತಿಭೆಗಳ ಹಿತಕಾಯುವ ಸೂಪರ್ ಸ್ಟಾರ್

ಭಾನುವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ಇಂಡಸ್ಟ್ರಿಯ ಉಜ್ವಲ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಸಾವು ಭಾರತದಾದ್ಯಂತ ಇರುವ ಸಿನಿಪ್ರಿಯರ ಎದೆಯಲ್ಲಿ ಕಿಚ್ಚನ್ನು ಹಚ್ಚಿದೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಲವಾಗಿ ಬೇರೂರಿರುವ ಸ್ವಜನಪಕ್ಷಪಾತದ ಪರಂಪರೆಯೇ ಸುಶಾಂತ್ ಅಂತಹ ಕೆಟ್ಟ ನಿರ್ಧಾರ ಕೈಗೊಳ್ಳಲು ಕಾರಣ ಎಂಬುದು ಸಾಮಾಜಿಕ ತಾಣಗಳಲ್ಲಿ ಬಟಾಬಯಲಾಗಿ ಹೋಗಿರುವಂತಹ ಸತ್ಯ. ಇಂಡಸ್ಟ್ರಿಯಲ್ಲಿ ಬೆಳೆದು ಆಳವಾಗಿ ಬೇರೂರಿರುವ ಕಲಾವಿದ ಕುಟುಂಬಗಳು ಹಾಗೂ ನಿರ್ಮಾಪಕ, ನಿರ್ದೇಶಕ ಕುಟುಂಬಗಳ ಮಕ್ಕಳನ್ನೇ ಬಲವಂತವಾಗಿ ಬೆಳೆಸುವ ಬಾಲಿವುಡ್ ಇಂಡಸ್ಟ್ರಿಯ ಮೌಡ್ಯ ನಿಲುವು ಸುಶಾಂತ್ ರಂತಹ ಅದೆಷ್ಟೋ ಪ್ರತಿಭೆಗಳನ್ನು ಹೊಸಕಿ ಹಾಕಿದೆ ಎಂಬ ಸಿನಿಪ್ರಿಯರ ಆಕ್ರೋಶ ಈಗ ಮುಗಿಲು ಮುಟ್ಟಿದೆ. ಪ್ರೋತ್ಸಾಹ ನೀಡಬೇಕಾಗಿರುವುದು ಪ್ರತಿಭೆಯನ್ನು ನೋಡಿಯೇ ಹೊರತು, ಫ್ಯಾಮಿಲಿ ಬ್ಯಾಗ್ರೌಂಡ್ ನೋಡಿ ಅಲ್ಲ ಅನ್ನೋದು ಎಲ್ಲರೂ ಒಪ್ಪುವ ವಿಚಾರ. ಇಂತಹ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಉದ್ಯಮ ಉತ್ತಮವಾಗಿ ಬೆಳೆಯಬಲ್ಲದು. ಉದ್ಯಮದಲ್ಲಿ ದೊಡ್ಡ ಸ್ಥಾನದಲ್ಲಿರುವವರು ಚಿಗುರುತ್ತಿರುವ ಒಳ್ಳೆಯ ಪ್ರತಿಭೆಯನ್ನು ನೋಡಿ ಉತ್ತಮ ಅವಕಾಶ ಸೃಷ್ಟಿಮಾಡಿ ಆ ಪ್ರತಿಭೆ ಅರಳುವಂತೆ ಮಾಡಬೇಕು.

ಇಂತಹ ದೊಡ್ಡ ವ್ಯಕ್ತಿತ್ವಕ್ಕೆ, ಮನಸ್ಥಿತಿಗೆ ಉದಾಹರಣೆಯಾಗಿ ನಿಲ್ಲುತ್ತಿದ್ದಾರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ದೊಡ್ಮನೆ ಹುಡುಗನಾದರೂ ತಮ್ಮ ಪ್ರತಿಭೆಯಿಂದಲೇ ಪವರ್ ಸ್ಟಾರ್ ಆಗಿ ರೂಪುಗೊಂಡವರು ನಮ್ಮ ಅಪ್ಪು ಸರ್. ಈಗ ಅವರು ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಸೂಪರ್ಸ್ಟಾರ್. ಅವರು ಒಂದರಮೇಲೊಂದು ಸಿನಿಮಾಗಳನ್ನು ಮಾಡಿಕೊಂಡು, ಮತ್ತಷ್ಟು ಎತ್ತರಕ್ಕೆ ಏರುತ್ತಾ ತಮ್ಮ ವೃತ್ತಿ ಜೀವನ ನಡೆಸಬಹುದು. ಆದರೂ ತಮ್ಮ PRK ಪ್ರೊಡಕ್ಷನ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಬೆನ್ನು ತಟ್ಟಲು ಹೊರಟುಬಿಡುತ್ತಾರೆ. ಅವರ ನಿರ್ಮಾಣ ಸಂಸ್ಥೆಯಲ್ಲಿ ಮೊದಲಿಗೆ ತಯಾರಾದ ಕವಲುದಾರಿ ಚಿತ್ರದಲ್ಲಿ ಆಗಷ್ಟೇ ಚಿತ್ರರಂಗದಲ್ಲಿ ಒಳ್ಳೆಯ ಭರವಸೆ ಮೂಡಿಸಿದ್ದ ನಿರ್ದೇಶಕ ಹೇಮಂತ ರಾವ್, ನಟ ರಿಷಿ ಹಾಗೂ ನಟಿ ರೋಷಿಣಿ ಪ್ರಕಾಶ್ ಅವರಿಗೆ ಅಪ್ಪು ಸರ್ ಅವಕಾಶ ನೀಡುತ್ತಾರೆ. ಉಜ್ವಲ ಪ್ರತಿಭೆಗಳಿಂದ ಕಂಗೊಳಿಸಿದ ಆ ಸಿನಿಮಾ ಕ್ಲಾಸಿಕ್ ಅನಿಸಿಕೊಳ್ಳುತ್ತೆ. ನಂತರ ಒಂದು ಸಿನಿಮಾ ಕೂಡ ನಿರ್ದೇಶಿಸಿ ಅನುಭವ ಇರದ ರಾಧಾಕೃಷ್ಣ ರೆಡ್ಡಿ ಎಂಬ ಯುವಕನ ಕಥೆ ಹೇಳುವ ಸಾಮರ್ಥ್ಯವನ್ನು ನೋಡಿ ಮೆಚ್ಚಿದ ಅಪ್ಪು “ಮಾಯಾ ಬಜಾರ್” ಸಿನಿಮಾ ನಿರ್ದೇಶಿಸಲು ಅವಕಾಶ ನೀಡುತ್ತಾರೆ. ಸಿನಿಮಾ ಕೂಡ ಕನ್ನಡದಲ್ಲಿ ಬಂದ ಅತ್ಯುತ್ತಮ ಸಿನಿಮಾ ಅನಿಸಿಸಿಕೊಳ್ಳುತ್ತದೆ. ಈಗ ಮುಂದಕ್ಕೆ PRK ಪ್ರೊಡಕ್ಷನ್ಸ್ ನಿರ್ಮಾಣದ ಪನ್ನಗ ಭರಣ ನಿರ್ದೇಶನದ, ಡ್ಯಾನಿಷ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ ಬಿಡುಗಡೆಗೆ ಸಿದ್ಧಗೊಂಡಿದೆ.

ಈಗ ಅಪ್ಪು ಸರ್ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದುವೇ “ಫ್ಯಾಮಿಲಿ ಪ್ಯಾಕ್”. ಸಂಕಷ್ಟಕರ ಗಣಪತಿ ಚಿತ್ರದಲ್ಲಿ ತನ್ನ ನಿರ್ದೇಶನ ಸಾಮರ್ಥ್ಯವನ್ನು ಸಾಬೀತು ಪಡಿಸಿದ ಅರ್ಜುನ್ ಕುಮಾರ್ ಪ್ರತಿಭೆಯನ್ನು ನೋಡಿ ಮೆಚ್ಚಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ “ಫ್ಯಾಮಿಲಿ ಪ್ಯಾಕ್” ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ಸಂಕಷ್ಟಕರ ಗಣಪತಿ ಖ್ಯಾತಿಯ ಲಿಖಿತ್ ಶೆಟ್ಟಿ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ಅಮೃತ ಅಯ್ಯಂಗಾರ್ ನಟಿಸಲಿದ್ದಾರೆ. ಅಪ್ಪು ಅವರು ಹೀಗೆ ಒಂದರ ಹಿಂದೆ ಒಂದು ಹೊಸ ಪ್ರತಿಭೆಗಳ ಚಿತ್ರಕ್ಕೆ ಬೆನ್ನು ತಟ್ಟಲು ಹೋರಡುತ್ತಿರುವುದನ್ನು ನೋಡಿದ ಕನ್ನಡ ಚಿತ್ರರಂಗ ಹಾಡಿ ಹೊಗಳುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತ ಮಾಡಿಕೊಂಡು ಚಿಗುರು ಪ್ರತಿಭೆಗಳನ್ನು ತುಳಿಯುತ್ತಿರುವ ದೊಡ್ಡ ದೊಡ್ಡವರು ಈ ದೊಡ್ಮನೆ ಹುಡುಗ ನನ್ನು ನೋಡಿ ಕಲಿಯುವುದು ತುಂಬಾ ಇದೆ.

ಸ್ವಜನಪಕ್ಷಪಾತ ಎಂಬ ಮೌಢ್ಯ ಕೊನೆಯಾಗ ಬೇಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಈ ನಡೆ ಎಲ್ಲರಿಗೂ ಮಾದರಿಯಾಗಲೇಬೇಕು.

ಅಂದಹಾಗೆ ಫ್ಯಾಮಿಲಿ ಪ್ಯಾಕ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ನೀವು ನೋಡಿ ಶೇರ್ ಮಾಡುತ್ತೀರಾ ತಾನೆ?

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top