RESPONSIVE LEADERBOARD AD AREA
Film News

‘ಹೌರಾ ಬ್ರಿಡ್ಜ್’ ನ ನಡುವೆ ಪ್ರಿಯಾಂಕಾ ಉಪೇಂದ್ರ…!

“ನಾನು ಇನ್ನೂ ಇಲ್ಲಿಯೇ ಇದ್ದೇನೆ…!, ಪುನಃ ನಟನೆಗೆ ಹಿಂತಿರುಗಿದ್ದೇನೆ..!, ಅಥವಾ ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಬೇಕು…!” ಈಗ ಈ ರೀತಿಯ ವಾಕ್ಯಗಳು ನನ್ನ ಡಿಕ್ಷನರಿಯಲ್ಲಿ ಇಲ್ಲ. ಏಕೆಂದರೆ ನನ್ನ ಚಿತ್ರ ಜೀವನ ಈಗಾಗಲೇ ಒಂದು ಹಂತ ತಲುಪಿದೆ. ಇನ್ನೇನಿದ್ದರೂ ಸಂಖ್ಯೆಗಿಂತ ಗುಣಮಟ್ಟದ ಕಡೆಗೆ ನನ್ನ ಗಮನ” ಹೀಗೆಂದವರು ಕನ್ನಡದ ಅತ್ಯಂತ ಸುಂದರ ನಟಿ, ಹಿರಿಯ ತಾರೆ ಪ್ರಿಯಾಂಕಾ ಉಪೇಂದ್ರ.

ಲೋಹಿತ್ ನಿರ್ದೇಶನದ ‘ಹೌರಾ ಬ್ರಿಡ್ಜ್’ ಚಿತ್ರದಲ್ಲಿ ತಮ್ಮ ಮಗಳು ಐಶ್ವರ್ಯ ರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರಿಯಾಂಕಾ ಉಪೇಂದ್ರ, ಸದ್ಯ ಆ ಚಿತ್ರದ ಪ್ರೊಮೋಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ನಮ್ಮೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

”ಹೌರಾ ಬ್ರಿಡ್ಜ್’ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಲೋಹಿತ್ ಚಿತ್ರದ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮಾಡಿರುವುದರಿಂದ ಚಿತ್ರಕ್ಕೆ ಸುಮಾರು ಒಂದು ವರ್ಷ ಹಿಡಿಯಿತು. ಚಿತ್ರದ ಕೊನೆಯ ಭಾಗದ ಚಿತ್ರೀಕರಣವನ್ನು ಕೋಲ್ಕತ್ತದಲ್ಲಿ ಜನವರಿ ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಕೋಲ್ಕತ್ತಾದ ಸೌಂದರ್ಯವನ್ನು ಈ ಚಿತ್ರದ ನಿರ್ದೇಶಕರು ಸುಂದರವಾಗಿ ಚಿತ್ರೀಕರಿಸಿದ್ದಾರೆ”

“ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ನಾನು ಅವುಗಳಲ್ಲಿ ಕೆಲವನ್ನು ಇನ್ನಷ್ಟೇ ಒಪ್ಪಿಕೊಳ್ಳಬೇಕಿದೆ. ಒಂದು ತಮಿಳು ಚಿತ್ರದಲ್ಲಿ ನಟಿಸಲು ಅವಕಾಶ ಬಂದಿದ್ದು, ಇನ್ನೂ ಮಾತುಕತೆ ಹಂತದಲ್ಲಿದೆ. ‘ಮಮ್ಮಿ’ ಚಿತ್ರದ ಮುಂದುವರಿದ ಭಾಗ ಕೂಡ ಮಾತುಕತೆ ಹಂತದಲ್ಲಿದ್ದು, ‘ಹೌರಾ ಬ್ರಿಡ್ಜ್’ ಚಿತ್ರದ ಬಿಡುಗಡೆಯ ಬಳಿಕವಷ್ಟೇ ಈ ಚಿತ್ರದ ಬಗ್ಗೆ ಯೋಚಿಸಲಿದ್ದೇನೆ. ಹೌರಾ ಬ್ರಿಡ್ಜ್ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇನೆ”

“ಈಗ ಚಿತ್ರರಂಗದಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳು ಕಾಣಸಿಗುತ್ತವೆ. ಸಾಕಷ್ಟು ಉತ್ತಮ ಚಿತ್ರಗಳು ಬರುತ್ತಿವೆ. ನಾಯಕ ಮತ್ತು ನಾಯಕಿಯರ ನಡುವಿನ ತಾರತಮ್ಯವನ್ನು ಕಡಿಮೆಯಾಗಿದೆ”

“ನನಗೆ ಕೇವಲ ನಾಯಕನ ಹೆಂಡತಿ, ತಾಯಿ, ಅತ್ತಿಗೆ, ಅಥವಾ ಅತ್ತೆ ಇಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅಷ್ಟೇನೂ ಆಸಕ್ತಿಯಿಲ್ಲ. ಅತ್ಯುತ್ತಮವಾದ ಕಥೆ ಮತ್ತು ಅಭಿನಯ ಪ್ರಧಾನ ಅಂಶಗಳಿದ್ದರೆ ನಾನೇ ಆ ಚಿತ್ರವನ್ನು ನಿರ್ಮಾಣ ಮಾಡಲೂ ಸಿದ್ಧ. ಹಾಗಾಗಿ ಅತ್ಯುತ್ತಮ ಸಬ್ಜೆಕ್ಟ್ ಗಾಗಿ ಕಾಯುತ್ತಿದ್ದೇನೆ.”

“ನನ್ನ ಇಬ್ಬರು ಮಕ್ಕಳು ಪ್ರೌಢಶಾಲೆಯಲ್ಲಿ ಓದುತ್ತಿದ್ದು, ಆ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಿದೆ. ಪತಿ ಉಪೇಂದ್ರ ನಟನೆಯ ಜೊತೆಗೆ, ಪ್ರಜಾಕೀಯ ಪಕ್ಷದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಚಿತ್ರದಲ್ಲಿ ನಟಿಸಬೇಕು. ಈ ನಡುವೆ ನನ್ನ ಹಿತೈಷಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆಯೂ ಹೇಳುತ್ತಿದ್ದಾರೆ. ನನ್ನ ಪ್ರಕಾರ ನೂರಕ್ಕೆ ನೂರರಷ್ಟು ತೊಡಗಿಕೊಳ್ಳುವಂತಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇದು ಉಪೇಂದ್ರ ಅವರ ಆಶಯ ಕೂಡ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸದ್ಯದಲ್ಲಿ ಆಲೋಚಿಸಿಲ್ಲ”.

“ನನ್ನ ಚಿತ್ರ ಜೀವನದ ಆರಂಭದಲ್ಲಿ, ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಂಡಿದ್ದೆ. ಏಕೆಂದರೆ ಆಗ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಅವಶ್ಯಕತೆ ಇತ್ತು. ಈಗ ಹಾಗೇನಿಲ್ಲ. ನನ್ನ ಅಭಿನಯವನ್ನು ಒರೆಗೆ ಹಚ್ಚುವಂತಹ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ. ಕೇವಲ ಸಿನೆಮಾ ಮಾತ್ರವಲ್ಲದೆ ಕಿರು ಚಿತ್ರಗಳು ಅಥವಾ ಇಂಟರ್ನೆಟ್ ಟಿವಿ ಚಿತ್ರ ಸರಣಿ, ಹೀಗೆ ಯಾವುದಾದರೂ ಆಗಿರಬಹುದು” ಎಂದು ತಮ್ಮ ಮುಂದಿನ ಯೋಜನೆಗಳ ಕುರಿತು ಬಹಳ ಸ್ಪಷ್ಟವಾಗಿ ಮಾತನಾಡುತ್ತಾರೆ ಪ್ರಿಯಾಂಕಾ ಉಪೇಂದ್ರ. ಅವರ ಚಿತ್ರ ಜೀವನಕ್ಕೆ ‘ನಮ್ ಸಿನಿಮಾ’ ಶುಭ ಹಾರೈಸುತ್ತದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top