RESPONSIVE LEADERBOARD AD AREA
Film News

‘ಪಂಚತಂತ್ರ’ ಭರ್ಜರಿ ಯಶಸ್ಸಿನ ಬಳಿಕ ಬರಲಿದೆ ‘ಪಂಚತಂತ್ರ ಭಾಗ 2’…!!

‘ಪಂಚತಂತ್ರ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಚಿತ್ರತಂಡ ಪಂಚತಂತ್ರ ಭಾಗ 2 ಮಾಡಲು ಮುಂದಾಗಿರುವ ಸುದ್ದಿ ಬಂದಿದೆ. ಚಿತ್ರವು ಇದೀಗ ರಾಜ್ಯಾದ್ಯಂತ ಸುಮಾರು 80 ಕ್ಕಿಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಮೂರನೇ ವಾರದಲ್ಲಿ ತುಂಬಿದ ಗೃಹಗಳಿಂದ ಪ್ರದರ್ಶನ ಕಾಣುತ್ತಿದೆ.

ಪಂಚತಂತ್ರದ ಕಥೆಗಳಲ್ಲಿ ಅತ್ಯಂತ ಜನಪ್ರಿಯವಾದ ‘ಆಮೆ ಮತ್ತು ಮೊಲ’ದ ಕಥೆಯನ್ನು ಆಧರಿಸಿದ ‘ಪಂಚತಂತ್ರ’ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನಸೂರೆಗೊಂಡಿದ್ದು, ಪ್ರೇಕ್ಷಕರ ಈ ಪ್ರತಿಕ್ರಿಯೆ ನೋಡಿದ ನಿರ್ದೇಶಕರು ಮತ್ತು ನಿರ್ಮಾಪಕರು ‘ಪಂಚತಂತ್ರ ಭಾಗ-2’ ಮಾಡಲು ಮುಂದಾಗಿದ್ದಾರೆ.

ಎರಡನೇ ಭಾಗವು, ಮೇಕಿಂಗ್ ಮತ್ತು ತಂತ್ರಜ್ಞಾನದಲ್ಲಿ ಮೊದಲ ಭಾಗಕ್ಕಿಂತಲೂ ಉನ್ನತ ಮಟ್ಟದಲ್ಲಿ ಇರಲಿದೆ ಎನ್ನಲಾಗಿದೆ. ಚಿತ್ರವನ್ನು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗುವುದು ಎಂದು ಚಿತ್ರದ ನಿರ್ಮಾಪಕರಾದ ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್ ಹೇಳಿದ್ದಾರೆ. ಈ ಜೋಡಿ ಎರಡನೇ ಭಾಗದ ನಿರ್ಮಾಣಕ್ಕೆ ಮತ್ತೊಮ್ಮೆ ಜೊತೆಗೂಡಿದ್ದಾರೆ.

ಈ ಚಿತ್ರವನ್ನು ಸಹ ಯೋಗರಾಜ್ ಭಟ್ ಅವರೇ ನಿರ್ದೇಶಿಸಲಿದ್ದು, ಭಟ್ರು ಸದ್ಯದಲ್ಲಿ ಶಿವಣ್ಣನ ಜೊತೆಗೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಅದರ ಕೆಲಸ ಮತ್ತು ‘ಗಾಳಿಪಟ -2’ ಚಿತ್ರದ ಕೆಲಸಗಳು ಪೂರ್ಣಗೊಂಡ ಬಳಿಕ ಈ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರದ ಮೂಲ ಪರಿಕಲ್ಪನೆ ಸಿದ್ಧವಾಗಿದ್ದು, ಅದರ ಮೇಲೆ ಚಿತ್ರಕಥೆಯನ್ನು ರೂಪಿಸುವ ಕೆಲಸದಲ್ಲಿ ಭಟ್ಟರು ತೊಡಗಲಿದ್ದಾರೆ. ರೇಸ್ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಸಾರ್ವತ್ರಿಕ ಕಥೆಯನ್ನು ರೂಪಿಸುತ್ತಿದ್ದು, ಮೂರೂ ಭಾಷೆಯ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರಕಥೆಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿದು ಬಂದಿದೆ.

ಪಂಚತಂತ್ರ ಚಿತ್ರದಲ್ಲಿ ನಾಯಕ ವಿಹಾನ್, ನಾಯಕಿ ಸೋನಾಲ್ ಮೊಂತೆರೋ, ರಂಗಾಯಣ ರಘು ಅವರ ಜೊತೆಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದು, ಮುಂದಿನ ಚಿತ್ರದಲ್ಲಿಯೂ ಇರಲಿದ್ದಾರೆ ಎನ್ನಲಾಗಿದೆ. ಆದಾಗಿಯೂ ಮೂರು ಭಾಷೆಗಳಲ್ಲಿ ಪರಿಚಿತರಾದ ನಾಯಕ ನಟನನ್ನು ಈ ಚಿತ್ರದಲ್ಲಿ ಹಾಕಿಕೊಳ್ಳುವ ಕುರಿತು ನಿರ್ಮಾಪಕರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ವಿ ಹರಿಕೃಷ್ಣ ಸಂಗೀತ, ಸುಜ್ಞಾನ್ ಕ್ಯಾಮೆರಾ ವರ್ಕ್ ‘ಪಂಚತಂತ್ರ’ ಚಿತ್ರದ ಜೀವಾಳವಾಗಿದ್ದು, ಚಿತ್ರವನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿ ಕೊಂಡಿದ್ದಾರೆ. ‘ಪಂಚತಂತ್ರ-2’ ಬರಲಿರುವುದು ಪ್ರೇಕ್ಷಕರು ಇನ್ನಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top