RESPONSIVE LEADERBOARD AD AREA
Film News

ಮಾನಸಿಕ ಸಂಘರ್ಷದ ರೋಚಕ ಕಥೆ – ಒಂದು ಶಿಕಾರಿಯ ಕಥೆ

ತನ್ನದೇ ಆದ ನೈತಿಕ ಮೌಲ್ಯಗಳೊಂದಿಗೆ ಜೀವನವನ್ನು ಕಟ್ಟಿ ಹಾಕಿಕೊಂಡಿರುವ ಸೂಕ್ಷ್ಮಸಂವೇದನೆಯ ಸಾಹಿತಿ ಶಂಭು ಶೆಟ್ಟಿ. ಅವನಿಗೆ ಹಿಂಸೆ ಎಂದರೆ ಆಗುವುದಿಲ್ಲ. ಅವನ ಆಲೋಚನೆ ಎಲ್ಲ ಜೀವಪರವೇ ಆದರೂ ಶಿಕಾರಿಯ ಜೊತೆಗೆ ನಂಟಿದೆ. ವೈಯಕ್ತಿಕ ಸಾಧನೆಗಾಗಿ ಎಲ್ಲವನ್ನೂ ತೊರೆದ ಅವನಿಗೆ ಎಲ್ಲವನ್ನೂ ತೊರೆದು ಸಾಧಿಸಿದ್ದಾದರೂ ಏನು? ಎಂಬ ತೊಳಲಾಟ ಇದೆ. ಇಂತಹ ತೊಳಲಾಟದಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದೇ “ಒಂದು ಶಿಕಾರಿಯ ಕಥೆ”, ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿರುವ ಸಚಿನ್ ಶೆಟ್ಟಿ ನೈತಿಕ ಮೌಲ್ಯಗಳ ತಿಕ್ಕಾಟದ, ವಿರುದ್ಧ ಭಾವನೆಗಳ ತೊಳಲಾಟದ ಕಥೆಯನ್ನು ಸಮೃದ್ಧವಾಗಿ ಕಟ್ಟಿಕೊಡುವುದರ ಮೂಲಕ ಅಚ್ಚರಿ ಮೂಡಿಸುತ್ತಾರೆ.

ಕತೆ

ಜೀವನದಲ್ಲಿ ಮನುಷ್ಯ ಒಂದು ಬೇಟೆಗಾರ ಆಗಬಹುದು ಇಲ್ಲಾ ಬೇಟೆ ಆಗಬಹುದು. ಬೇಟೆಗಾರ ಬೇಟೆಯಾಗಿಯೂ ಬೇಟೆ ಬೇಟೆಗಾರನಾಗಿಯೂ ಬದಲಾಗಲೂಬಹುದು. ಹೀಗಾಗಿ ಇಲ್ಲಿ ಎಲ್ಲರೂ ಭೇಟೆ ಅಥವಾ ಬೇಟೆಗಾರರೇ ಎಂಬುದನ್ನು 3 ಪಾತ್ರಗಳ ಆಯಾಮಗಳ ದಟ್ಟವಾದ ವಿವರಗಳಿಂದ ತೆರೆಯ ಮೇಲೆ ತೆರೆದುಕೊಳ್ಳುವ ಕತೆ ಒಂದು ಶಿಕಾರಿಯ ಕಥೆ. ಇಲ್ಲಿ ಸಾಹಿತಿಯೊಬ್ಬನ ಮಾನಸಿಕ ಇದೆ. ಒಂದಾಗಿ ಬಿಡಲು ಹಪಹಪಿಸುತ್ತಿರುವ ಪ್ರೇಮಿಗಳ ಅಸಹಾಯಕತೆ ಇದೆ. ಇಲ್ಲಿ ಬೇಟೆ ಮಾಡೋರು ಯಾರು? ಬೇಟೆಯಾಗೋರು ಯಾರು? ಅನ್ನೋದನ್ನು ಶಿಕಾರಿಯ ಕಥೆಯನ್ನು ಪೂರ್ತಿ ನೋಡಿಯೇ ತಿಳಿಯಬೇಕು.

ಅಭಿನಯ

ಪ್ರಮೋದ್ ಶೆಟ್ಟಿ ಅವರದು ಬಹಳ ತೂಕ ಇರುವ ಪಾತ್ರ. ಅದಕ್ಕೆ ತಕ್ಕನಾದ ಮಾಗಿದ ಅಭಿನಯ ನೀಡಿ ಅವರು ಗೆಲ್ಲುತ್ತಾರೆ. ಪ್ರಸಾದ್ ಚರ್ಕಡಿ ಹಾಗೂ ಸಿರಿ ಪ್ರಹ್ಲಾದ ಪ್ರೇಮಿಗಳಾಗಿ ನೋಡುಗರನ್ನು ತಾಕುತ್ತಾರೆ. ಉಳಿದ ಕಲಾವಿದರು ಬಹಳ ನೈಜವಾಗಿ ತಮ್ಮ ಪಾತ್ರಗಳನ್ನು ಮೈ ಮೇಲೆ ಧರಿಸಿಕೊಂಡವರಂತೆ ನಟಿಸಿ ಚಿತ್ರದ ಅಂದ ಹೆಚ್ಚಿಸಿದ್ದಾರೆ.

ತಾಂತ್ರಿಕತೆ

ತೆರೆಯ ಮೇಲೆ ಕಥೆ ಹೇಳುವಿಕೆಯ ಇಂದಿನ ಯಾವುದೇ ಸಿದ್ಧ ಸೂತ್ರಕ್ಕೆ ತಲೆಬಾಗದೇ, ತಮ್ಮದೇ ಆದ ಶೈಲಿಯಲ್ಲಿ ಒಂದೇ ಕಥೆಯನ್ನು ಹಲವು ಪಾತ್ರಗಳ ಮೂಲಕ ಹೇಳಿರುವ ನಿರ್ದೇಶಕ ಸಚಿನ್ ಶೆಟ್ಟಿ ದೃಶ್ಯ ಮಾಧ್ಯಮದ ಮೇಲೆ ತಮಗಿರುವ ಹಿಡಿತವನ್ನು ಸಾರುತ್ತಾರೆ. ಪಾತ್ರಗಳ ಮೂಲಕ ಎಷ್ಟು ಮಾತನಾಡಿಸಬೇಕೋ ಅದನ್ನಷ್ಟೇ ಮಾತನಾಡಿಸಿ, ಉಳಿದದ್ದನ್ನು ದೃಶ್ಯಗಳ ಮೂಲಕವೇ ತೋರಿಸುವ ಮೂಲಕ ನಿರ್ದೇಶನದ ಪಕ್ವತೆಯನ್ನು ಮೆರೆದಿದ್ದಾರೆ. ಕೆಲವೊಮ್ಮೆ ಕಥೆ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಗೋಜಲು ಅನುಭವ ಆದರೂ ಒಟ್ಟಾರೆಯಾಗಿ ನೋಡಿದಾಗ ಪ್ರೇಕ್ಷಕನನ್ನು ಆಲೋಚನೆಗೆ ಈಡು ಮಾಡುತ್ತಲೇ ಆವರಿಸಿಕೊಳ್ಳುವ ಕಥನಕ್ರಮ ಹೊಸ ಅನುಭವದ ಖುಷಿಕೊಡುತ್ತದೆ.

ಯೋಗೇಶ್ ಗೌಡ ಅವರ ಛಾಯಾಗ್ರಹಣದಲ್ಲಿ ಕರಾವಳಿಯ ಸೊಬಗು ಸೆರೆಯಾಗುವುದರ ಜೊತೆಗೆ ಶಿಕಾರಿಯ ಕಥೆಯು ಕಣ್ಣಿಗೆ ಆಪ್ಯಾಯಮಾನವಾಗಿ ತೆರೆದುಕೊಂಡಿದೆ. ಬಿಎಸ್ ಕೆಂಪರಾಜು ಅವರ ಸಂಕಲನ ಕಥೆಯ ಆಶಯಕ್ಕೆ ತಕ್ಕಂತಿದೆ.

ಕೊನೆಯದಾಗಿ

ಒಟ್ಟಾರೆಯಾಗಿ “ಒಂದು ಶಿಕಾರಿಯ ಕಥೆ” ಒಂದು ಒಳ್ಳೆಯ ಅನುಭವ ನೀಡುವ ಸಿನಿಮಾ. ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಏನೆಂದರೆ ಇಲ್ಲಿ ಪ್ರತಿ ಪಾತ್ರಕ್ಕೂ ತನ್ನದೇ ಆದ ಹಿನ್ನೆಲೆ ಹಾಗೂ ವ್ಯಕ್ತಿತ್ವ ಇದೆ. ಹೀಗಾಗಿ ಕಥೆಯಲ್ಲಿ ಒಂದು ಪೂರ್ಣತ್ವ ಇದೆ. ಇದು ಕಲಾತ್ಮಕವೂ ಅಲ್ಲ, ಕಮರ್ಷಿಯಲ್ಲು ಅಲ್ಲ ಎರಡನ್ನೂ ಮೀರಿದ ಒಳ್ಳೆಯ ಕಥೆ ಇರುವ ಉತ್ತಮ ಗುಣಮಟ್ಟದ ಸಿನಿಮಾ. ಮಲೆನಾಡಿನಲ್ಲಿ ನಡೆಯುವ ಪತ್ತೇದಾರಿ ಕತೆಯುಳ್ಳ ಕಾದಂಬರಿ ಓದಿದ ಅನುಭವವನ್ನು ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳಲು ನೀವು “ಒಂದು ಶಿಕಾರಿಯ ಕಥೆ” ನೋಡಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top