RESPONSIVE LEADERBOARD AD AREA
Film News

ನನ್ನ ಪ್ರಕಾರ ಸಿನಿಮಾ ನೋಡಿದ ಸೆನ್ಸಾರ್ ಮಂದಿ ಏನು ಹೇಳಿದರು ಗೊತ್ತಾ?

ಚಂದನವನದಲ್ಲಿ ಹೊಸಬರ ಆಗಮನಕ್ಕೆ ಕೊರತೆಯೇ ಇಲ್ಲ. ಹೊಸ ಆಲೋಚನೆಗಳು, ಹೊಸ ಐಡಿಯಾಗಳು, ಹೊಸ ರೀತಿಯ ಕತೆ ಹೇಳುವಿಕೆ ಇಟ್ಟುಕೊಂಡು ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ ವಿನಯ್ ಬಾಲಾಜಿ. ಹಿಂದೆ ಒಂದಷ್ಟು ಕಿರುಚಿತ್ರಗಳನ್ನು ನಿರ್ಮಿಸಿ ಹೆಸರು ಮಾಡಿದ್ದ ವಿನಯ್ ಸ್ಪಾಟ್ ಎಡಿಟರ್ ಆಗಿಯೂ ಹಲವು ಸಿನಿಮಾಗಳಿಗೆ ದುಡಿದು ಸಿನಿಮಾ ರೂಪುಗೊಳ್ಳುವಿಕೆಯ ತಾಂತ್ರಿಕ ಒಳಹೊರಗುಗಳನ್ನು ಅರಿತಿದ್ದಾರೆ.

ಪಂಚಭಾಷಾ ತಾರೆ ಪ್ರಿಯಾಮಣಿ ಮದುವೆಯ ನಂತರ ನಟಿಸಿರುವ “ನನ್ನ ಪ್ರಕಾರ” ಸಿನಿಮಾದಲ್ಲಿ ಹುಲಿ ಕಿಶೋರ್ ನಾಯಕರಾಗಿದ್ದಾರೆ. ಬೋಲ್ಡ್ ಪಾತ್ರ ಒಂದರಲ್ಲಿ ಮಯೂರಿ ನಟಿಸಿದ್ದರೆ, ನಿರಂಜನ್ ದೇಶಪಾಂಡೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನಿಗೂಢ, ಕೌತುಕ ಹಾಗೂ ಊಹಿಸಲಸಾಧ್ಯ ತಿರುವುಗಳ ಮಲ್ಟಿ ಲೇಯರ್ಡ್ ಥ್ರಿಲ್ಲರ್ ಸಿನಿಮಾ ಇದು ಎಂಬುದು ನಿರ್ದೇಶಕರ ಅಂಬೋಣ. ಹಂತ ಹಂತವಾಗಿ ತೆರೆದುಕೊಳ್ಳುತ್ತಾ, ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಹೆಚ್ಚಿಸಿಕೊಂಡು, ಪ್ರೇಕ್ಷಕ ಸೀಟಿನ ತುದಿಯ ಮೇಲೆ ಬರುವಂತೆ ಮಾಡುವ ಹಂಬಲ ಚಿತ್ರತಂಡದ್ದು.

ಇತ್ತೀಚೆಗೆ ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳ ಅಬ್ಬರ ಸ್ವಲ್ಪ ಜಾಸ್ತಿಯೇ ಇದೆ. ಈ ನಿಟ್ಟಿನಲ್ಲಿ “ನನ್ನ ಪ್ರಕಾರ” ಸಿನಿಮಾ ಅದೆಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಅಚ್ಚರಿ ತುಂಬಿದ ಥ್ರಿಲ್ಲರ್ ರಂಜನೆ ನೀಡಲಿದೆ ಎಂಬುದು ಜುಲೈ ತಿಂಗಳಿನಲ್ಲಿ ಸಿನಿಮಾ ತೆರೆಯ ಮೇಲೆ ಬಂದಾಗ ತಿಳಿಯಲಿದೆ.

ಆದರೆ ಈಗಾಗಲೇ ಸಿನಿಮಾ ನೋಡಿರುವ ಸೆನ್ಸಾರ್ ಮಂಡಳಿಯವರು ಚಿತ್ರದ ಸ್ಕ್ರೀನ್ ಪ್ಲೇ ಸೂಪರ್ ಎಂದಿದ್ದಾರೆ. ಇಷ್ಟು ಒಳ್ಳೆಯ ಚಿತ್ರಕಥೆಯನ್ನು ಇತ್ತೀಚೆಗೆ ನಾವು ನೋಡೇ ಇಲ್ಲ ಅನ್ನೋದು ಅವರ ಅಂಬೋಣ. ಸೆನ್ಸಾರ್ ನಿಂದ ಸಿಕ್ಕಿರುವ ಈ ಪ್ರೋತ್ಸಾಹಕರ ಮಾತುಗಳಿಂದ ಚಿತ್ರ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಈಗಾಗಲೇ ಆಕರ್ಷಕ ಪೋಸ್ಟರ್ ಗಳಿಂದ, ಸೆನ್ಸಾರ್ನವರ ಫೀಡ್ ಬ್ಯಾಕ್ ನಿಂದ ಗಮನ ಸೆಳೆಯುತ್ತಿರುವ ‘ನನ್ನ ಪ್ರಕಾರ’ ಎಲ್ಲ ಸಿನಿಪ್ರಿಯರ ಪ್ರಕಾರ ಒಂದೊಳ್ಳೆ ಥ್ರಿಲ್ಲರ್ ಸಿನಿಮಾ ಎಂದೆನಿಸಿಕೊಳ್ಳಲಿ ಎಂದು “ನಮ್ ಸಿನಿಮಾ” ತಂಡ ಹಾರೈಸುತ್ತದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top