RESPONSIVE LEADERBOARD AD AREA
Film News

ಪ್ರೇಕ್ಷಕನ ಪ್ರಕಾರ ಒಳ್ಳೆ ಥ್ರಿಲ್ಲರ್ ಸಿನಿಮಾ

‘ನನ್ನ ಪ್ರಕಾರ’ ಕನ್ನಡ ಸಿನಿರಸಿಕರಿಗೆ ಹೊಸ ರೀತಿಯ ಅನುಭವವನ್ನು ಕೊಡುವ ಸಿನಿಮಾ. ನಿರ್ದೇಶಕ ವಿನಯ್ ಬಾಲಾಜಿ ತನ್ನ ಪ್ರಥಮ ಚಿತ್ರದಲ್ಲೇ ಹೊಸ ರೀತಿಯ ಚಿತ್ರಕಥಾ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.

ಏಕಕಾಲಕ್ಕೆ ನಾಲ್ಕು ಭಿನ್ನ ಕಥೆಗಳು ತೆರೆಮೇಲೆ ಸಾಗುತ್ತಿರುತ್ತವೆ. ಒಂದಕ್ಕೊಂದು ಎಲ್ಲಿಯೂ ಸಂಬಂಧ ಇರುವುದಿಲ್ಲ. ಕೊನೆಯಲ್ಲಿ ಎಲ್ಲವೂ ಒಂದಾಗುತ್ತವೆ. ಇದು ಹೇಳಲು ಸುಲಭ, ಆದರೆ ಇಂತಹ ಜಟಿಲವಾದ ಪ್ರಯೋಗದಲ್ಲೂ ಪ್ರೇಕ್ಷಕರಿಗೆ ಎಲ್ಲೂ ಗೊಂದಲ ಮೂಡದಂತೆ ಸರಳೀಕರಿಸಿ ಮರ್ಡರ್ ಮಿಸ್ಟರಿ ಸ್ಕ್ರೀನ್ ಪ್ಲೇ ಮಾಡಿದ್ದಾರೆ ನಿರ್ದೇಶಕರು. ಅರೆಬೆಂದ ಕಾರೊಂದರಲ್ಲಿ ಶವ ದೊರಕುವುದರ ಮೂಲಕ ಪ್ರಾರಂಭವಾಗುವ ಸಿನಿಮಾ, ಅದು ಕೊಲೆಯೋ, ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ತನಿಖೆಯ ಜಾಡಿನಲ್ಲಿ ಸಾಗುತ್ತಾ, ಸಂಕೀರ್ಣ ವಿಷಯಗಳನ್ನು ಹೇಳುತ್ತಿದ್ದರೂ ಯಾವ ಹಂತದಲ್ಲೂ ಪ್ರೇಕ್ಷಕನಿಗೆ ಗೊಂದಲ ಉಂಟುಮಾಡುವುದಿಲ್ಲ.

ಘಟನೆ ಒಂದು ತೆರೆದು ಕೊಂಡಿರುವ ಮುಖಗಳು ಹಲವು, ಆ ಹಲವು ಮುಖಗಳ ಸಂಯೋಜನೆ ಹಾಗೂ ಸಂಕಲನವೇ ನನ್ನ ಪ್ರಕಾರ’.

ಸಿನಿಮಾ ತನ್ನೊಡನೆ ಪ್ರೇಕ್ಷಕನನ್ನು ಸೆಳೆದುಕೊಂಡು ಸಾಗುತ್ತದೆ. ಇದೇ ಚಿತ್ರದ ಗೆಲುವು. ನೋಡನೋಡುತ್ತಾ ಪಾತ್ರಗಳ ಜೊತೆ ಪಯಣ ಹೊರಡುತ್ತಾನೆ ಪ್ರೇಕ್ಷಕ. ಹಿನ್ನಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಅದೇ ರೀತಿ ಕಥೆಗನುಗುಣವಾದ ಚಿತ್ರಕಥೆ ಹಾಗೂ ಕ್ಯಾಮೆರಾ ವರ್ಕ್ ಚಿತ್ರವನ್ನು ಗೆಲ್ಲಿಸುವಲ್ಲಿ ಪಾತ್ರವಹಿಸುತ್ತದೆ.

ಚಿತ್ರಕ್ಕೆ ಕಥೆಯೇ ನಾಯಕ. ಕಿಶೋರ್, ಪ್ರಿಯಾಮಣಿ, ಮಯೂರಿ, ಪ್ರಮೋದ್‌ ಶೆಟ್ಟಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ನಿರಂಜನ್‌, ಗಿರಿಜಾ ಲೋಕೇಶ್‌, ಅರ್ಜುನ್‌ ಯೋಗಿ ಎಲ್ಲರೂ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಚಿತ್ರದ ಹಲವಾರು ಸನ್ನಿವೇಶಗಳು ಹೊಸತನದಿಂದ ಕೂಡಿರುವುದರಿಂದ ಮನರಂಜನೆ ನೀಡುತ್ತವೆ. ಸಿನಿಮಾದ ದೊಡ್ಡ ಪ್ಲಸ್‌ ಪಾಯಿಂಟ್‌ ನಿರ್ದೇಶಕ ವಿನಯ್ ಬಾಲಾಜಿ ಬರೆದಿರುವ ಕ್ಯೂರಿಯಸ್ ಸ್ಕ್ರೀನ್ ಪ್ಲೇ. ಇದು ಹೀಗಿರಬಹುದಾ? ಹಾಗಿರಬಹುದಾ? ಅಲ್ಲಿ ಏನಾಗಿರಬಹುದು? ಎಂದೆಲ್ಲ ನಮ್ಮೊಳಗೂ ತೆರೆದುಕೊಳ್ಳುತ್ತಾ ಪ್ರೇಕ್ಷಕನ ಪ್ರಕಾರ “ನನ್ನ ಪ್ರಕಾರ” ಒಳ್ಳೆಯ ಸಿನಿಮಾವಾಗಿ ನಿಲ್ಲುತ್ತದೆ. ಹೀಗಾಗಿ ನನ್ನ ಪ್ರಕಾರ ಸಿನಿಮಾವನ್ನು ಅವಶ್ಯವಾಗಿ ಒಮ್ಮೆ ನೋಡಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top