RESPONSIVE LEADERBOARD AD AREA
Film News

ಸೂಪರ್ ಸ್ಟಾರ್, ಪವರ್ ಸ್ಟಾರ್ ಮತ್ತು ಚಿಂತಕ ನಿರ್ದೇಶಕರ ''ಮೈತ್ರಿ''

ಈ ವಾರ ತೆರೆಗೆ ಬರುತ್ತಿರುವ ”ಮೈತ್ರಿ” ಚಿತ್ರ ಸಹಜವಾಗಿಯೇ ಸಾಕಷ್ಟು ಕುತೂಹಲ
ಕೆರಳಿಸಿದೆ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಪವರ್ ಸ್ಟಾರ್ ಪುನೀತ್
ಒಟ್ಟಿಗೆ ನಟಿಸಿದ್ದಾರೆ ಅನ್ನೋ ವಿಷಯವೇ ಸಾಕಷ್ಟು ನಿರೀಕ್ಷೆಗೆ ಎಡೆಮಾಡಿಕೊಟ್ಟಿದೆ.
”ಜಟ್ಟ” ದಂತಹ ಅದ್ಭುತ ವೈಚಾರಿಕ ಚಿತ್ರವನ್ನು ತುಂಬಾ ಮನೋಜ್ಞವಾಗಿ ಮತ್ತು
ಮಾರ್ಮಿಕವಾಗಿ ನಿರ್ದೇಶಿಸಿದ್ದ ಗಿರಿರಾಜ್ ಬರೆದಿರುವ ಕಥೆ ಕೇಳಿ ಇಬ್ಬರು ಸೂಪರ್
ಸ್ಟಾರ್ ಗಳು ಒಪ್ಪಿದ್ದಾರೆಂದರೆ ಆ ಕಥೆ ಎಷ್ಟು ಚೆನ್ನಾಗಿರಬೇಡ? ಮಕ್ಕಳ ಸಮಸ್ಯೆ
ಆಧಾರಿತ ಚಿತ್ರ ಎಂದು ಹೇಳಲಾಗುತ್ತಿರುವ ”ಮೈತ್ರಿ” ಚಿತ್ರದಲ್ಲಿ ಪುನೀತ್ ಖುದ್ದು
ತಾವಾಗೆ ನಟಿಸುತ್ತಿದ್ದಾರೆ, ಚಿತ್ರದಲ್ಲಿ ಕೂಡ ಅವರು ಪುನೀತ್ ರಾಜ್ ಕುಮಾರ್, ಅವರ
ಪ್ರಖ್ಯಾತ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿಯ ಪ್ರಸ್ತಾಪ ಅಥವಾ ಬಳಕೆ ಚಿತ್ರದಲ್ಲಿ
ಮಾಡಿಕೊಳ್ಳಲಾಗಿದೆಯಂತೆ, ಸೈಂಟಿಸ್ಟ್ ಆಗಿ ನಟಿಸಿರುವ ಮೋಹನ್ ಲಾಲ್ ಕೋಟ್ಯಾಧಿಪತಿ
ಹಾಟ್ ಸೀಟ್ ನಲ್ಲಿ ಪುನೀತ್ ಗೆ ಎದುರಾಗುತ್ತಾರೆ ಅನ್ನೋ ಮಾತಿದೆ. ನಾಯಕಿಯರಾದ ಆ
ದಿನಗಳು ಅರ್ಚನ ಮತ್ತು ಭಾವನಾ ಯಾವ ರೀತಿಯ ಪಾತ್ರಗಳನ್ನು ಚಿತ್ರದಲ್ಲಿ ಪೋಷಿಸಿದ್ದಾರೆ
ಅನ್ನೋದು ಚಿತ್ರ ನೋಡಿದ ಮೇಲೆಯೇ ತಿಳಿಯಬೇಕು. ಈಗಾಗಲೇ ಚಿತ್ರೋದ್ಯಮದ ವಲಯದಲ್ಲಿ
”ಮೈತ್ರಿ” ಚಿತ್ರದ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬಂದಿವೆ. ಇಲ್ಲಿಯವರೆಗೂ
ವಿಭಿನ್ನ ಸದಭಿರುಚಿ ಚಿತ್ರಗಳನ್ನೇ (ಮೈನಾ, ಜಟ್ಟ) ನಿರ್ಮಿಸಿರುವ ಎನ್ ಎಸ್ ರಾಜ್
ಕುಮಾರ್ ”ಮೈತ್ರಿ” ಚಿತ್ರದಿಂದ ದೊಡ್ಡ ಮಟ್ಟದ ಯಶಸನ್ನು ನಿರೀಕ್ಷಿಸುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ಒಬ್ಬ ಸೂಪರ್ ಸ್ಟಾರ್ ಆಗಿಯೂ ಇಂತಹ ಕಲಾತ್ಮಕ ಮತ್ತು ಗಂಭೀರ
ವಿಷಯವುಳ್ಳ ಚಿತ್ರಕ್ಕೆ ಸಾಥ್ ನೀಡಿರುವುದು ಅವರ ದೊಡ್ಡತನಕ್ಕೆ ಸಾಕ್ಷಿ, ಪುನೀತ್
ರಂತೆ ಈ ರೀತಿಯ ಹೊಸ ಪ್ರಯತ್ನಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಮತ್ತೊಬ್ಬ
ಸೂಪರ್ ಸ್ಟಾರ್ ಕನ್ನಡದಲ್ಲಿ ಸಧ್ಯಕ್ಕೆ ಮತ್ತೊಬ್ಬರಿಲ್ಲ. ಚಿತ್ರದಲ್ಲಿ ಗಿರಿರಾಜ್
ಅವರನ್ನು ಸರಿಯಾಗಿ ಬಳಸಿಕೊಂಡಿದ್ದೇ ಆದರೆ ಚಿತ್ರ ದೊಡ್ಡ ಎತ್ತರವನ್ನು
ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಘನ ಗಂಭೀರ ಮೌಲ್ಯಾಧಾರಿತ ಪಾತ್ರಗಳನ್ನೇ
ಹೆಚ್ಚಾಗಿ ಮಾಡಿ ಪ್ರಪಂಚಾದ್ಯಂತ ದೊಡ್ಡ ಹೆಸರು ಮಾಡಿರುವ ಮೋಹನ್ ಲಾಲ್ ಚಿತ್ರದ ದೊಡ್ಡ
ಕುತೂಹಲ, ಅವರ ಪಾತ್ರಕ್ಕೆ ಯಾವ ರೀತಿಯ ಪೋಷಣೆಯನ್ನು ಗಿರಿರಾಜ್ ನೀಡಿದ್ದಾರೆ
ಅನ್ನುವುದರಲ್ಲಿ ಗಿರಿರಾಜ್ ಪ್ರತಿಭೆ ಅಡಗಿದೆ. ಈ ಸೂಪರ್ ಸ್ಟಾರ್ ಗಳ ಮಧ್ಯೆ
ಪ್ರತಿಭಾನ್ವಿತ ನಟ ಅತುಲ್ ಕುಲಕರ್ಣಿ ಕೂಡ ”ಮೈತ್ರಿ” ಚಿತ್ರದಲ್ಲಿರುವುದು ಚಿತ್ರದ
ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕನ್ನಡದಲ್ಲಿ ಸೃಜನಶೀಲ ಚಿತ್ರಗಳು, ಮೌಲ್ಯಾಧಾರಿತ ಚಿತ್ರಗಳು ಬರುತ್ತಿಲ್ಲ ಅನ್ನೋ
ಕೂಗಿನ ಮಧ್ಯೆ ಹಂಸ ಪಕ್ಷಿಯಂತೆ ಆಕರ್ಷಕವಾಗಿ ಕಾಣುತ್ತಿರುವ ”ಮೈತ್ರಿ” ಚಿತ್ರ
ನಿಜಕ್ಕೂ ಪ್ರೇಕ್ಷಕರ ಎಲ್ಲಾ ನಿರೀಕ್ಷೆಗಳನ್ನು ತಲುಪಿ, ಚಿತ್ರರಂಗದ ದಿಕ್ಕು
ಬದಲಿಸುವ, ಹೊಸ ಅಲೆಯನ್ನು ಉಂಟುಮಾಡುವ ಅಮೋಘ ಚಿತ್ರವಾಗಿ ಮೂಡಿಬರಲಿ ಎಂದು ನಮ್
ಸಿನಿಮಾ ಆಶಿಸುತ್ತದೆ. ಪ್ರತಿಯೊಬ್ಬ ಕನ್ನಡಿಗನೂ ಈ ಚಿತ್ರವನ್ನು ನೋಡಲೇಬೇಕು.
ನೋಡುತ್ತೀರಲ್ಲವಾ?

RESPONSIVE LEADERBOARD AD AREA
RESPONSIVE LEADERBOARD AD AREA
To Top